ಬಿಬಿಎಂಪಿ 12,692 ನೇರ ವೇತನ ಪೌರಕಾರ್ಮಿಕರನ್ನು ಖಾಯಂಗೊಳಿಸುತ್ತಿದೆ. ಮೇ 1, 2025ರಂದು ನೇಮಕಾತಿ ಆದೇಶ ನೀಡಲಾಗುವುದು. ಡಾ. ಅಂಬೇಡ್ಕರ್ ಮತ್ತು ಪೌರಕಾರ್ಮಿಕರ ದಿನಾಚರಣೆಯಂದು ಈ ಘೋಷಣೆ ಮಾಡಲಾಯಿತು. ಉತ್ತಮ ಅಂಕ ಗಳಿಸಿದ ಪೌರಕಾರ್ಮಿಕರ ಮಕ್ಕಳಿಗೆ ಸನ್ಮಾನ, ಪುಸ್ತಕ ವಿತರಣೆ ಮಾಡಲಾಯಿತು. ಖಾಯಂ ಮತ್ತು ನೇರ ವೇತನ ಪೌರಕಾರ್ಮಿಕರಿಗೆ ಬೋನಸ್ ಘೋಷಿಸಲಾಗಿದೆ.

ಬೆಂಗಳೂರು (ಏ.17): ಪೌರಕಾರ್ಮಿಕರ ಒಳಿತಿಗಾಗಿ ಪಾಲಿಕೆ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ 12,692 ನೇರ ವೇತನ ಪೌರಕಾರ್ಮಿಕರನ್ನು ಖಾಯಂ ಮಾಡಿಕೊಳ್ಳುತ್ತಿದ್ದೇವೆ. 1ನೇ ಮೇ 2025 ರಂದು ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಖಾಯಂ ಆದವರಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗುವುದು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್. ಉಮಾಶಂಕರ್ ತಿಳಿಸಿದರು.

ಬಿಬಿಎಂಪಿ ವತಿಯಿಂದ ಕೇಂದ್ರ ಕಚೇರಿಯ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿರುವ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪೌರಕಾರ್ಮಿಕರ ದಿನಾಚರಣೆ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಿಖಿತ ರೂಪದಲ್ಲಿರುವ ಅತ್ಯುತ್ತಮ ಸಂವಿಧಾನ ನಮ್ಮ ಭಾರತ ಸಂವಿಧಾನ. ಡಾ. ಬಿ.ಆರ್ ಅಂಬೇಡ್ಕರ್ ರವರು ಇಡೀ ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ಕಲ್ಪಿಸಿಕೊಟ್ಟವರು. ಅದು ಇಡೀ ಪ್ರಪಂಚದಲ್ಲಿಯೇ ಉತ್ತಮವಾದ, ವಿವರಾತ್ಮಕವಾದ ಸಂವಿಧಾನವಾಗಿದೆ. ಇದು ಕೇವಲ ಭಾರತಕ್ಕೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ವಿಶ್ವದ ಅನೇಕ ದೇಶಗಳಿಗೆ ಮುನ್ನುಡಿಯಾಗಲಿದೆ ಎಂದು ಹೇಳಿದರು.

12,692 ಪೌರಕಾರ್ಮಿಕರ ಖಾಯಂ: ಪೌರಕಾರ್ಮಿಕರ ಒಳಿತಿಗಾಗಿ ಪಾಲಿಕೆ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ 12,692 ನೇರ ವೇತನ ಪೌರಕಾರ್ಮಿಕರನ್ನು ಖಾಯಂ ಮಾಡಿಕೊಳ್ಳುತ್ತಿದ್ದೇವೆ. ಪೌರಕಾರ್ಮಿಕರ ಖಾಯಮಾತಿಗೆ ಪ್ರಮುಖ ಕಾರಣೀಕರ್ತರು ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು, ವಲಯ ಆಯುಕ್ತರು ಹಾಗೂ ಇನ್ನಿತರೆ ಅಧಿಕಾರಿಗಳು ಮುತುವರ್ಜಿ ವಹಿಸಿದ್ದು, ಅವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ. ಪೌರಕಾರ್ಮಿಕರನ್ನು ಖಾಯಂ ಮಾಡುವ ವೇಳೆ ಸಾಕಷ್ಟು ದೂರುಗಳು, ಮೋಸ, ದುರುಪಯೋಗಗಳಿಗೆ ಯಾವ ಅಧಿಕಾರಿಗಳೂ ಆಸ್ಪದ ನೀಡದೆ, ಖಾಯಮಾತಿ ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಖಾಯಂ ಆದ ನಂತರ ಪೌರಕಾರ್ಮಿಕರು ಮುಂದಿನ ದಿನಗಳಲ್ಲಿ ನೆಮ್ಮದಿ ಜೀವನ ಸಾಗಿಸಲು ಅನುಕೂಲವಾಗಲಿದೆ. 1ನೇ ಮೇ 2025 ರಂದು ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಖಾಯಂ ಆದವರಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಜಗತ್ತಿನ ಅತ್ಯಂತ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿಗನ ಬಂಡವಾಳ ಬಯಲು ಮಾಡಿದ ಇಡಿ!

ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ರವರ ಕುರಿತಂತಹ ಪುಸ್ತಕಗಳನ್ನು ನಾವೆಲ್ಲರೂ ಓದಿ ಅರಿತುಕೊಳ್ಳಬೇಕಿದೆ. ಅವರ ವ್ಯಕ್ತಿತ್ವವನ್ನು ನಾವು ಎಲ್ಲರಿಗೂ ಪರಿಚಯಿಸಬೇಕು. ಅವರ ಎಲ್ಲಾ ವಿಚಾರಧಾರೆಗಳನ್ನು ಇತರರಿಗೂ ತಿಳಿಯುವ ಹಾಗೆ ಮಾಡಬೇಕು. ಪೌರಕಾರ್ಮಿಕರ ಮಕ್ಕಳು ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಇಂದು ಸನ್ಮಾನ ಮಾಡಿ, ಅವರೆಲ್ಲರಿಗೂ 'ಡಾ. ಬಿ.ಆರ್ ಅಂಬೇಡ್ಕರ್ ವಿಚಾರಗಳು' ಎಂಬ ಪುಸ್ತಕವನ್ನು ನೀಡಲಾಗಿದೆ. ಅದನ್ನು ಸಂಪೂರ್ಣವಾಗಿ ಓದಿ ಬೇರೆಯವರಿಗೂ ಅದನ್ನು ಓದಿ ತಿಳಿದುಕೊಳ್ಳಲು ಪ್ರೇರಣೆ ನೀಡಬೇಕು ಎಂದು ಹೇಳಿದರು.

ಪೌರಕರ್ಮಿಕರಿಗಾಗಿ ಒಂಟಿ ಮನೆ ಯೋಜನೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿವಿಧ ಸೌಲಭ್ಯ, ಧನಸಹಾಯ, ಬೋನಸ್ ನೀಡಲಾಗುತ್ತಿದೆ. ಹಲವಾರು ಹಿತರಕ್ಷಣಾ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನವನ್ನು ಆಯವ್ಯಯದಲ್ಲಿ ಮೀಸಲಿಡಲಾಗಿದೆ. ಕಳೆದ ಬಾರಿ ಆಯವ್ಯಯಕ್ಕಿಂತ ಹೆಚ್ಚಿನ ಅನುದಾನವನ್ನು ಈ ಬಾರಿ ಮಿಸಲಿಡಲಾಗಿದೆ. ಡಾ: ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತ ಖಾಯಂ ಪೌರಕಾರ್ಮಿಕರಿಗೆ 22,000 ರೂ. ಹಾಗೂ ನೇರ ವೇತನ ಪೌರಕಾರ್ಮಿಕರಿಗೆ 8,000 ರೂ.ಗಳ ಬೋನಸ್ ನೀಡಲಾಗುವುದು.

ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ: ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪೌರಕಾರ್ಮಿಕರ ದಿನಾಚರಣೆ-2025 ಕಾರ್ಯಕ್ರಮಕ್ಕೂ ಮುಂಚಿತವಾಗಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಪೌರಕಾರ್ಮಿಕರ ಪಿತಾಮಹ ಐ.ಪಿ.ಡಿ ಸಾಲಪ್ಪ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯಲ್ಲಿ ಉತ್ತಮ ಅಂಕ ಪಡೆದ ಪೌರಕಾರ್ಮಿಕರ 46 ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಪಾಲಿಕೆಯ 8 ವಲಯಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 17 ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. 

ಇದನ್ನೂ ಓದಿ: ಕಣ್ಮುಚ್ಚಿ ಕುಳಿತ ಬಿಬಿಎಂಪಿ; ಬಸ್‌ಸ್ಟಾಪ್‌ಗಳನ್ನೇ ಮುಚ್ಚಿಹಾಕಿದ 'ಬ್ಯಾನರ್‌' ಕೃಷ್ಣಪ್ಪ!

ಈ ವೇಳೆ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ಸತೀಶ್, ಕರೀಗೌಡ, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಪೌರಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.