ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ರಾಜ್ಯಕ್ಕೆ 42,524 ಆಶಾ ಕಾರ್ಯಕರ್ತೆಯರ ಹುದ್ದೆಗಳು ಮಂಜೂರಾಗಿದ್ದು, ಇವರಿಗೆ ರಾಜ್ಯ ಸರ್ಕಾರದಿಂದ ನಿಶ್ಚಿತ ಮಾಸಿಕ ಗೌರವ ಐದು ಸಾವಿರ ರು. ನೀಡಲಾಗುತ್ತದೆ: ಸಚಿವ ದಿನೇಶ್‌ ಗುಂಡೂರಾವ್‌ 

ವಿಧಾನ ಪರಿಷತ್‌(ಜು.11):  ಈಗಿರುವ ನಿಯಮಾವಳಿ ಪ್ರಕಾರ ಆಶಾ ಕಾರ್ಯಕರ್ತೆಯರ ಸೇವೆಯನ್ನು ಕಾಯಂ ಮಾಡಲು ಬರುವುದಿಲ್ಲ. ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪೂರ್ಣಾವಧಿ ಅಥವಾ ಅರೆಕಾಲಿಕ ನೌಕರರಲ್ಲ. ಆದರೆ ಅವರಿಗೆ ಕಾರ್ಯನಿರ್ವಹಣೆ ಆಧಾರದ ಮೇಲೆ ಗೌರವ ಧನ ಹಾಗೂ ಪೋತ್ಸಾಹ ಧನ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ರಾಜ್ಯಕ್ಕೆ 42,524 ಆಶಾ ಕಾರ್ಯಕರ್ತೆಯರ ಹುದ್ದೆಗಳು ಮಂಜೂರಾಗಿದ್ದು, ಇವರಿಗೆ ರಾಜ್ಯ ಸರ್ಕಾರದಿಂದ ನಿಶ್ಚಿತ ಮಾಸಿಕ ಗೌರವ ಐದು ಸಾವಿರ ರು. ನೀಡಲಾಗುತ್ತದೆ. ಉಳಿದಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬರುವ 40 ಚಟುವಟಿಕೆಗಳ ಕಾರ್ಯನಿರ್ವಹಣೆಯಿಂದ 5ರಿಂದ 8 ಸಾವಿರ ರು. ಪ್ರೋತ್ಸಾಹ ಧನ ಸಿಗುತ್ತದೆ. ಒಟ್ಟಾರೆ ಮಾಸಿಕ 10ರಿಂದ 13 ಸಾವಿರ ರು. ದೊರೆಯುತ್ತದೆ. ಆಶಾ ಕಾರ್ಯಕರ್ತೆಯರಿಗೆ ವಿವಿಧ ಚಟುವಟಿಕೆ ಅಡಿ ಸ್ಮಾರ್ಚ್‌ಫೋನ್‌ ಹಾಗೂ ರೀಚಾರ್ಜ್‌ ಮೊತ್ತವನ್ನು ಕೊಡುವ ಬಗ್ಗೆ ಸರ್ಕಾರ ಪರಿಶೀಲಿಸಲಿದೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಗ್ಯಾರಂಟಿ ಜಾರಿಗೆ ಪಟ್ಟು!

ಇದಕ್ಕೂ ಮುನ್ನ ಮಾತನಾಡಿದ ತಿಪ್ಪೇಸ್ವಾಮಿ ಅವರು, ಆಶಾ ಕಾರ್ಯಕರ್ತೆಯರಿಂದ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಆಗುತ್ತಿದೆ. ಆದ್ದರಿಂದ ಸರ್ಕಾರ ಅವರ ಸೇವೆಯನ್ನು ಕಾಯಂ ಮಾಡಬೇಕು. ನಿವೃತ್ತಿ ನಂತರ ಪಿಂಚಣಿ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.