ಎಸ್ಸಿ-ಎಸ್ಟಿ ಮೀಸಲು ಹೆಚ್ಚಳ: 25,000 ನೇಮಕಾತಿಗೆ ತಡೆ..!
36 ಇಲಾಖೆಗಳಲ್ಲಿ ರೋಸ್ಟರ್ ಬಿಂದು ಪರಿಷ್ಕರಣೆ ವಿಳಂಬದಿಂದ ನೇಮಕಾತಿ ಭಡ್ತಿಗೆ ತಡೆ, 11 ಸಾವಿರ ಪೌರಕಾರ್ಮಿಕರ ಕಾಯಮಾತಿಗೂ ಬ್ರೇಕ್
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಡಿ25): ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಮೀಸಲಾತಿ ಹೆಚ್ಚಳದ ಬಳಿಕ ಸರ್ಕಾರದ 36 ಇಲಾಖೆಗಳಲ್ಲಿ ರೋಸ್ಟರ್ ಬಿಂದು ಪರಿಷ್ಕರಣೆ ವಿಳಂಬದಿಂದ 11,133 ಪೌರಕಾರ್ಮಿಕರ ಕಾಯಂಗೊಳಿಸುವುದು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಸುಮಾರು 25 ಸಾವಿರ ಹೊಸ ನೇಮಕಾತಿ ಪ್ರಕ್ರಿಯೆಗೆ ತಡೆ ಬಿದ್ದಿದೆ!
ರಾಜ್ಯ ಸರ್ಕಾರವು ಇತ್ತೀಚೆಗೆ ಪರಿಶಿಷ್ಟಜಾತಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹಾಗೂ ಪರಿಶಿಷ್ಟಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ. ಇದರಿಂದ ರೋಸ್ಟರ್ ಬಿಂದುವಿನಲ್ಲಿ ವ್ಯತ್ಯಾಸ ಉಂಟಾಗಿದೆ. ಈ ವ್ಯತ್ಯಾಸಗಳನ್ನು ಸರಿಪಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದಾದ ಬಳಿಕ ಪರಿಷ್ಕೃತ ಮೀಸಲಾತಿ ಅನುಷ್ಠಾನಗೊಳ್ಳಲಿದೆ. ಅಲ್ಲಿಯವರೆಗೆ ನೇರ ನೇಮಕಾತಿ ಹಾಗೂ ಮುಂಬಡ್ತಿಗೆ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರದ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚಿಸಿದ್ದಾರೆ.
PSI Recruitment Scam: ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥ ನಂತರ ಸರ್ಕಾರದ ನಿಲುವು, ಆರಗ ಜ್ಞಾನೇಂದ್ರ
ಇದರಿಂದ ರಾಜ್ಯದಲ್ಲಿ ಹತ್ತಾರು ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಕಾಯಮಾತಿಗೆ ಅಡ್ಡಿ ಉಂಟಾಗಿದೆ. ಕಳೆದ ಜುಲೈನಲ್ಲಿ ಪಟ್ಟುಬಿಡದೆ ನಡೆಸಿದ ಪ್ರತಿಭಟನೆ ಫಲವಾಗಿ ಸರ್ಕಾರವು ಮೊದಲ ಹಂತದಲ್ಲಿ 11,133 ಪೌರಕಾರ್ಮಿಕರನ್ನು ಕಾಯಂಗೊಳಿಸುವುದಕ್ಕೆ ಒಪ್ಪಿಗೆ ನೀಡಿತ್ತು. ಸಂಪುಟ ಸಭೆಯಲ್ಲಿಯೂ ಅನುಮೋದನೆ ಸಿಕ್ಕಿತ್ತು. ಆದರೆ, ಈ ಮೀಸಲಾತಿ ಹೆಚ್ಚಳದಿಂದ ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆ ಮೇಲೆ ಕರಿನೆರಳು ಬಿದ್ದಿದೆ.
ಇದಲ್ಲದೆ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಬಿಬಿಎಂಪಿ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ ಸೇರಿದಂತೆ 25 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅಡ್ಡಿ ಉಂಟಾಗಿದೆ. ಜತೆಗೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 15 ಸಾವಿರ ಅಧಿಕಾರಿ-ನೌಕರರ ಮೀಸಲಾತಿ ಅನ್ವಯ ಮುಂಬಡ್ತಿ ನೀಡುವ ಪ್ರಕ್ರಿಯೆಯನ್ನೂ ನಡೆಸುವಂತಿಲ್ಲ. ಇದರಿಂದ ಮುಂಬಡ್ತಿಗೆ ಕಾಯುತ್ತಿದ್ದ ಸಾವಿರಾರು ನೌಕರರು ಆತಂಕಕ್ಕೆ ಒಳಗಾಗಿದ್ದಾರೆ.
683 ಹುದ್ದೆಗಳಿಗೆ ನೇಮಕಾತಿ ಸ್ಥಗಿತ:
ಈಗಾಗಲೇ ಸರ್ಕಾರದ ಎಲ್ಲಾ ಹಂತದಲ್ಲಿ ಅನುಮೋದನೆ ಪಡೆದು ಇನ್ನೇನು ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಅಧಿಸೂಚನೆ ಹೊರಡಿಸುವುದು ಬಾಕಿ ಇರುವ ಒಟ್ಟು 683 ಹುದ್ದೆಗಳ ನೇಮಕಾತಿ ಈ ಆದೇಶದಿಂದ ಸ್ಥಗಿತವಾಗಿದೆ. ಇವುಗಳಲ್ಲಿ 43 ಗೆಜೆಟೆಡ್ ಪ್ರೊಬೇಷನರ್ಸ್, 222 ಶೀಘ್ರ ಲಿಪಿಕಾರರು, 243 ವಾಣಿಜ್ಯ ತೆರಿಗೆ ನಿರೀಕ್ಷಕರು ಮುಂತಾದ ಹುದ್ದೆಗಳು ಸೇರಿವೆ.
ನೇಮಕಾತಿ, ಮುಂಬಡ್ತಿಗೆ ತಡೆ
ರಾಜ್ಯ ಸರ್ಕಾರವು ಎಸ್ಸಿ ಹಾಗೂ ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಮೀಸಲಾತಿ ಅನುಷ್ಠಾನಗೊಳ್ಳುವವರೆಗೆ ನೇರ ನೇಮಕಾತಿ ತಡೆ ಹಿಡಿಯಬೇಕು. ಜತೆಗೆ ಮೀಸಲಾತಿ ಅನ್ವಯ ಮುಂಬಡ್ತಿ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಲಾಖಾ ಮುಂಬಡ್ತಿ ಸಮಿತಿ ಸಭೆ ನಡೆಸಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ನ.18ರಂದು ಸುತ್ತೋಲೆ ಹೊರಡಿಸಿದ್ದಾರೆ.
ಸಿಎಂ, ಸಿಎಸ್ ಬಳಿ ಕಡತ
ರೋಸ್ಟರ್ ಬಿಂದು ನಿಗದಿಪಡಿಸುವ ಕುರಿತ ಕಡತ, ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಮುಂದಿದೆ. ತ್ವರಿತವಾಗಿ ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ವಿಳಂಬವಾದಷ್ಟೂ ನೌಕರರಿಗೆ ಅನ್ಯಾಯವಾಗಲಿದೆ. ಸಾಧ್ಯವಾದಷ್ಟು ಬೇಗ ಇತ್ಯರ್ಥ ಪಡಿಸುವಂತೆ ಕೋರಿದ್ದೇವ ಅಂತ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.