ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ: ಡಾ.ಪರಮೇಶ್ವರ್
ಇತ್ತೀಚೆಗೆ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ 2ರಂತೆ 80 ಮಂದಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. 18 ಮಂದಿ ಕ್ರೀಡಾಪಟುಗಳನ್ನು ಎಸೈಗಳಾಗಿ ನೇಮಿಸಲಾಗಿದೆ. ಅಲ್ಲದೇ ಕ್ರೀಡಾ ವಿದ್ಯಾರ್ಥಿ ವೇತನವನ್ನು ಆರಂಭಿಸುವುದಕ್ಕೂ ನಿರ್ಧರಿಸಲಾಗಿದೆ. ವಿವಿಗಳಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ ಎಂದ ಗೃಹ ಸಚಿವ ಡಾ. ಜಿ.ಪರಮೇಶ್ವರ್
ಉಡುಪಿ(ಜೂ.06): ರಾಜ್ಯದಲ್ಲಿ ಗೃಹ ಇಲಾಖೆ ಮಾತ್ರವಲ್ಲ, ಇತರ ಇಲಾಖೆಯ ನೇಮಕಾತಿಯಲ್ಲಿಯೂ ಕ್ರೀಡಾಪಟುಗಳಿಗೆ ಶೇ 2 ಮೀಸಲಾತಿ ನೀಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ, ಕರ್ನಾಟಕ ರಾಜ್ಯ ಅತ್ಲೆಟಿಕ್ಸ್ ಎಸೋಸಿಯೇಶನ್ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ಅವರು ಗುರುವಾರ ಉಡುಪಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸೀನಿಯರ್ ಮತ್ತು ಯೂತ್ ಮೀಟ್ - 2024ನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ 2ರಂತೆ 80 ಮಂದಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. 18 ಮಂದಿ ಕ್ರೀಡಾಪಟುಗಳನ್ನು ಎಸೈಗಳಾಗಿ ನೇಮಿಸಲಾಗಿದೆ. ಅಲ್ಲದೇ ಕ್ರೀಡಾ ವಿದ್ಯಾರ್ಥಿ ವೇತನವನ್ನು ಆರಂಭಿಸುವುದಕ್ಕೂ ನಿರ್ಧರಿಸಲಾಗಿದೆ. ವಿವಿಗಳಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೇನೆ ಎಂದರು.
ಸರ್ಕಾರಿ ಉದ್ಯೋಗವಕಾಶ, ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 1,202 ಹುದ್ದೆಗಳಿ ಅರ್ಜಿ ಆಹ್ವಾನ
ರಾಜ್ಯದಲ್ಲಿ ಪ್ರಸ್ತುತ 13 ಜಿಲ್ಲೆಗಳ ಕ್ರೀಡಾಂಗಣಗಳಲ್ಲಿ ಮಾತ್ರ ಸಿಂಥೆಟಿಕ್ ಟ್ರ್ಯಾಕ್ ಗಳಿವೆ. ಉಳಿದ ಜಿಲ್ಲೆಗಳಲ್ಲೂ ಹಂತಹಂತವಾಗಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುವ ಬಗ್ಗೆ ಮತ್ತು ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಳಾಗಿರುವ 10 ವರ್ಷಗಳ ಹಿಂದೆ ಅಳವಡಿಸಿರುವ ಸಿಂಥೆಟಿಕ್ ಟ್ರ್ಯಾಕ್ ದುರಸ್ತಿ ಬಗ್ಗೆ ಕ್ರೀಡಾಸಚಿವರ ಜೊತೆ ಮಾತುಕತೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.
ಮುಖ್ಯ ಅತಿಥಿ ಹಿರಿಯ ಅಂತಾರಾಷ್ಟ್ರೀಯ ಕ್ರೀಡಾಪಟು ಪ್ರಮಿಳಾ ಅಯ್ಯಪ್ಪ ಅವರು ಮಾತನಾಡಿ, ಹೆತ್ತವರು ತಮ್ಮ ಮಕ್ಕಳನ್ನು ತಕ್ಷಣವೇ ಕ್ರೀಡಾಪಟುಗಳಾಗುವುದಕ್ಕೆ ಒತ್ತಡ ಹೇರಬಾರದು, ಇದರಿಂದ ಪ್ರತಿಭೆ ಮುದುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಅತ್ಲೆಟಿಕ್ ಅಸೋಸಿಯೇಶನ್ ಹರಿಪ್ರಸಾದ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ನಾಯಕರಾದ ವಿನಯಕುಮಾರ್ ಸೊರಕೆ ಮತ್ತು ಪ್ರಸಾದ್ ರಾಜ್ ಕಾಂಚನ್, ರಾಜ್ಯ ಅತ್ಲೆಟಿಕ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಾಜುವೇಲು ಉಪಸ್ಥಿತರಿದ್ದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಅತ್ಲೆಟಿಕ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.
ನಾನೇ ಉದಾಹರಣೆಯಾಗಿದ್ದೇನೆ...
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಡಕಾಗುತ್ತದೆ ಎಂಬುದು ಹೆತ್ತವರ ತಪ್ಪು ಕಲ್ಪನೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಲಾಭ ಇದೆ. ಶಿಕ್ಷಣದಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಕ್ರೀಡಾಪಟುಗಳೂ ಚೆನ್ನಾಗಿ ಓದಿ ಸಾಧನೆ ಮಾಡಿದವರೂ ಇದ್ದಾರೆ. ನನ್ನದೇ ಉದಾಹರಣೆ ಇದೆ, ನಾನೂ ವಿವಿಯಲ್ಲಿ ಕ್ರೀಡಾಪಟುವಾಗಿದ್ದೆ, ಫುಟ್ ಬಾಲ್ ಆಡುತ್ತಿದ್ದೆ, ಡಾಕ್ಟರೇಟ್ ಓದಿದ್ದೇನೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಹೇಳಿದರು.
9 ತಿಂಗಳಲ್ಲಿ ಅರಣ್ಯ ಇಲಾಖೆಯಲ್ಲಿ 711 ಹುದ್ದೆಗಳು ಖಾಲಿ
ರಿಲ್ಯಾಕ್ಸ್ ಮೂಡಿನಲ್ಲಿದ್ದ ಗೃಹ ಸಚಿವರು
ಲೋಕಸಭಾ ಚುನಾವಣೆಯ ಭರಾಟೆಯ ನಂತರ ಗೃಹಸಚಿವರು ಉಡುಪಿಯಲ್ಲಿ ಗುರುವಾರ ವಿಶ್ರಾಂತಿ ಪಡೆದುಕೊಂಡಂತಿತ್ತು. ಕ್ರೀಡಾಕೂಟ ಉದ್ಘಾಟನೆಗೆ ಬಂದಿದ್ದ ಸ್ವತಃ ಕ್ರೀಡಾಪಟ ಆಗಿದ್ದ ಸಚಿವರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕ್ರೀಡಾಂಗಣದಲ್ಲಿದ್ದ ಬಾಲಕರ ಮತ್ತು ಬಾಲಕಿಯರ 200 ಮೀಟರ್ ಓಟಗಳನ್ನು ವೀಕ್ಷಿಸಿ ಆನಂದಿಸಿದರು.
ನಂತರ ಕೊಲ್ಲೂರಿಗೆ ತೆರಳಿ ಮೂಕಾಂಬಿಕಾ ದೇವಿಯ ದರ್ಶನ ಪಡೆದು, ಪ್ರಧಾನ ಅರ್ಚಕ ನರಸಿಂಹ ಅಡಿಗ ನೇತ್ರತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅವರಿಗೆ ದೇವಳದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಪುಷ್ಪಲತಾ ಅವರು ಪ್ರಸಾದ ನೀಡಿ ಗೌರವಿಸಿದರು.