ಈ ಆವೃತ್ತಿಯ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಯುವರಾಜ್ ಮತ್ತು ಸುರೇಶ್ ರೈನಾ ಇಬ್ಬರು ಆಡಿದ್ದರು.
ಮುಂಬೈ(ಡಿ.31): ಭಾರತದ ಅನುಭವಿ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ರಾಷ್ಟ್ರೀಯ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಇದಕ್ಕಾಗಿ ಈ ಇಬ್ಬರು ಆಟಗಾರರು ಜ.4ರಿಂದ 15ರವರೆಗೆ ನಡೆಯುವ 13ನೇ ಆವೃತ್ತಿಯ ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.
ಯುವರಾಜ್ ಸಿಂಗ್ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯವನ್ನಾಡಿದ್ದಾರೆ. ಇನ್ನು 2013ರ ನಂತರ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ. ಪಾದದ ನೋವಿನಿಂದ ಬಳಲಿದ್ದ ಯುವಿ ಏಕದಿನ ಕ್ರಿಕೆಟ್'ನಿಂದ ದೂರ ಉಳಿದಿದ್ದರು. ಇನ್ನು ಮತ್ತೋರ್ವ ಆಟಗಾರ ಸುರೇಶ್ ರೈನಾ ಕೂಡ ರಾಷ್ಟ್ರೀಯ ತಂಡಕ್ಕೆ ಮರಳುವುದಕ್ಕಾಗಿ ಸತತ ಪ್ರಯತ್ನದಲ್ಲಿದ್ದಾರೆ. ನ್ಯೂಜಿಲೆಂಡ್ ಸರಣಿ ವೇಳೆ ವೈರಲ್ ಫೀವರ್'ನಿಂದ ಬಳಲಿದ ರೈನಾ ಏಕದಿನ ಸರಣಿಯಿಂದ ವಂಚಿತರಾದರು. ಈ ಆವೃತ್ತಿಯ ರಣಜಿ ಟ್ರೋಫಿ ಕ್ರಿಕೆಟ್ನಲ್ಲಿ ಯುವರಾಜ್ ಮತ್ತು ಸುರೇಶ್ ರೈನಾ ಇಬ್ಬರು ಆಡಿದ್ದರು.
ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. 31 ಪಂದ್ಯಗಳು ನಡೆಯಲಿದ್ದು, ಪಂದ್ಯಾವಳಿಯ ಚಾಂಪಿಯನ್ ತಂಡ 15 ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತವನ್ನು ಪಡೆಯಲಿದೆ. ರಿಲಾಯನ್ಸ್ ಒನ್, ಟಾಟಾ ಸ್ಪೋರ್ಟ್ಸ್ ಕ್ಲಬ್, ಕೆನರಾ ಬ್ಯಾಂಕ್, ಬಿಪಿಸಿಎಲ್, ಸಿಎಜಿ, ಏರ್ ಇಂಡಿಯಾ, ಇಂಡಿಯನ್ ಆಯಿಲ್, ಡಿವೈ ಪಾಟೀಲ್ ಎ, ಡಿವೈ ಪಾಟೀಲ್ ಬಿ, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಾಂಕೂರ್, ಓಎನ್'ಜಿಸಿ, ಮುಂಬೈ ಕಸ್ಟಮ್ಸ್, ಆರ್'ಬಿಐ, ಪಶ್ಚಿಮ ರೈಲ್ವೇಸ್ ಮತ್ತು ಜೈನ್ ಇರ್ರಿಗೇಷನ್ ತಂಡಗಳು ಪಾಲ್ಗೋಳ್ಳಲಿವೆ.
ಇದೇ ಜ. 15ರಂದು ಭಾರತ ಮತ್ತು ಇಂಗ್ಲೆಂಡ್ ನಡುವಣ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ಭಾರತ ತಂಡದ ಆಯ್ಕೆ ಜನವರಿ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.
