Asianet Suvarna News Asianet Suvarna News

ಯೂತ್ ಒಲಿಂಪಿಕ್ಸ್: ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ವೇಟ್ ಲಿಫ್ಟರ್ ಜೆರೆಮಿ!

ಯೂಕ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಬಾರತ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. ಇನ್ನು ಶೂಟಿಂಗ್ ವಿಭಾಗದಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
 

Youth Olympics  games 2018 Weightlifter Jeremy gunning for historic gold
Author
Bengaluru, First Published Oct 10, 2018, 9:44 AM IST

ಬ್ಯೂನಸ್ ಐರಿಸ್(ಅ.10): ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನ ಒಲಿದು ಬಂದಿದೆ. ಯುವ ವೇಟ್ ಲಿಫ್ಟರ್ 15 ವರ್ಷ ವಯಸ್ಸಿನ ಜೆರೆಮಿ ಲಾಲ್ರಿನ್ನುಂಗಾ ಭಾರತಕ್ಕೆ ಬಂಗಾರ ತಂದುಕೊಟ್ಟಿದ್ದಾರೆ. ಇದರೊಂದಿಗೆ ಭಾರತದ ಖಾತೆಯಲ್ಲಿ 2 ಚಿನ್ನ, 3 ಬೆಳ್ಳಿ ಸೇರಿದಂತೆ 5 ಪದಕಗಳಿವೆ.

ಮಂಗಳವಾರ ನಡೆದ ಬಾಲಕರ 62 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಜೆರೆಮಿ (124 ಕೆಜಿ ಸ್ನಾಚ್ ಮತ್ತು
150 ಕೆಜಿ ಕ್ಲೀನ್ ಅಂಡ್ ಜರ್ಕ್) ಒಟ್ಟು 274 ಕೆಜಿ ಭಾರ ಎತ್ತುವ ಮೂಲಕ ಚಿನ್ನಕ್ಕೆ ಮುತ್ತಿಟ್ಟರು. 

ಇದೇ ಸ್ಪರ್ಧೆಯಲ್ಲಿ ಟರ್ಕಿಯ ವೇಟ್ ಲಿಫ್ಟರ್ ಟಾಪ್ಟೋಸ್ ಕನೆರ್ ಬೆಳ್ಳಿ ಮತ್ತು ಕೊಲಂಬಿಯಾದ ವೇಟ್ ಲಿಫ್ಟರ್ ವಿಲ್ಲರ್ ಎಸ್ಟಿವೆನ್ ಕಂಚು ಗೆದ್ದರು. ಆಯ್ಕೆ ಟ್ರಯಲ್ಸ್‌ನಲ್ಲಿ ಜೆರೆಮಿ 273 ಕೆಜಿ ಭಾರತ ಎತ್ತಿದ್ದರು. ಸ್ನಾಚ್‌ನಲ್ಲಿ (125ಕೆಜಿ) ಭಾರವನ್ನು ಲಿಫ್ಟ್ ಮಾಡಿದ್ದರು. ಇದರೊಂದಿಗೆ ಯೂತ್ ಮತ್ತು ಜೂನಿಯರ್ ವಿಭಾಗದಲ್ಲಿ ಜೆರೆಮಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದರು. 

2018 ರ ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಜೆರೆಮಿ ಅತ್ಯದ್ಭುತ ಪ್ರದರ್ಶನ ತೋರಿದ್ದರೂ ಕೊಂಚದರಲಿ ಪದಕ ವಂಚಿತರಾಗಿದ್ದರು.ಜೆರೆಮಿ ಇಲ್ಲಿ 4ನೇ ಸ್ಥಾನ ಪಡೆದಿದ್ದರು. 2018ರ ರಿಯೊ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ ಪದಕ ಬಂದಿರಲಿಲ್ಲ. 

ಜೆರೆಮಿ 11ನೇ ಸ್ಥಾನಿಯಾಗಿದ್ದರು. ಐಜ್ವಾಲ್ ಮೂಲದವರಾಗಿರುವ ಜೆರೆಮಿ, ವಿಶ್ವ ಯೂತ್ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಈ ವರ್ಷದ ಆರಂಭದಲ್ಲಿ ಜೂನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಲಾಲ್ರಿನುಂಗಾ ಕಂಚು ಜಯಿಸಿದ್ದರು. ಅಲ್ಲದೇ 2 ಬಾರಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಜೂನಿಯರ್ ವಿಭಾಗದಲ್ಲಿ ಸಾಧನೆ ಮಾಡಿರುವ ಜೆರೆಮಿ ಭಾರತದ ಭವಿಷ್ಯದ ತಾರಾ ವೇಟ್ ಲಿಫ್ಟರ್ ಆಗಿ ಹೊರ ಹೊಮ್ಮುವ ಭರವಸೆ ಮೂಡಿಸಿದ್ದಾರೆ.

ಬಾಕ್ಸರ್ ಆಗಿದ್ದ ಜೆರೆಮಿ: ಜೆರೆಮಿ ಲಾಲ್ರಿನುಂಗಾ, ಮೊದಲು ಬಾಕ್ಸರ್ ಆಗಿದ್ದರು. ತಂದೆ ಲಾಲ್ನೆತ್ಲುಂಗಾ ಕೂಡ ರಾಷ್ಟ್ರೀಯ ಬಾಕ್ಸರ್ ಆಗಿದ್ದಾರೆ. ಲಾಲ್ನೆತ್ಲುಂಗಾ ರಾಷ್ಟ್ರ ಮಟ್ಟದಲ್ಲಿ 7 ಚಿನ್ನದ ಪದಕ ಜಯಿಸಿದ್ದಾರೆ. ಹೀಗಾಗಿ ಮಗನನ್ನು ಬಾಕ್ಸರ್ ಆಗಿ ರೂಪಿಸಿದ್ದರು.  ಜೆರೆಮಿ ತಂದೆ ಲಾಲ್ನೆತ್ಲುಂಗಾ ಮಿಜೋರಾಂನ ಪಬ್ಲಿಕ್ ವರ್ಕ್ಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕೋಚ್ ಸಲಹೆಯಂತೆ ಜೆರೆಮಿ ಬಾಕ್ಸಿಂಗ್ ಬಿಟ್ಟು ವೇಟ್ ಲಿಫ್ಟಿಂಗ್‌ನತ್ತ ವಾಲಿದರು ಎಂದು ಮಿಜೋರಾಂ ವೇಟ್ ಲಿಫ್ಟಿಂಗ್ ಸಂಸ್ಥೆ ಅಧ್ಯಕ್ಷ ತಾಂಗ್ಚುನುಂಗಾ ಹೇಳಿದ್ದಾರೆ.

2011ರಲ್ಲಿ ಆರ್ಮಿ ಕ್ರೀಡಾ ಸಂಸ್ಥೆ ಸೇರಿದ 8 ವರ್ಷ ವಯಸ್ಸಿನ ಜೆರೆಮಿ, ವೇಟ್ ಲಿಫ್ಟಿಂಗ್‌ನಲ್ಲಿ ಉತ್ತಮ ತರಬೇತಿ ಪಡೆದರು. ಕಳೆದ 2 ವರ್ಷಗಳಿಂದ ರಾಷ್ಟ್ರೀಯ
ಮತ್ತು ಅಂ.ರಾ. ಚಾಂಪಿಯನ್‌ಶಿಪ್‌ಗಳಲ್ಲಿ ಜೆರೆಮಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. 2016 ರಲ್ಲಿ ಪೆನಾಂಗ್ ಮತ್ತು 2017ರಲ್ಲಿ ಬ್ಯಾಂಕಾಕ್ ನಲ್ಲಿ ನಡೆದ
ವಿಶ್ವ ಯೂತ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಲ್ಲಿ ಜೆರೆಮಿ ಬೆಳ್ಳಿ ಜಯಿಸಿದ್ದರು.

ಭಾಕರ್‌ಗೆ ಚಿನ್ನ:

ಬಾಲಕಿಯರ 10 ಮೀ. ಏರ್ಪಿಸ್ತೂಲ್‌ನಲ್ಲಿ ಭಾರತದ ಮನು ಭಾಕರ್ ಚಿನ್ನ ಜಯಿಸಿದ್ದಾರೆ.  ಫೈನಲ್‌ನಲ್ಲಿ 236.5 ಅಂಕಗಳಿಸಿದ ಭಾಕರ್, ಇತರೆ ಸ್ಪರ್ಧಿಗಳನ್ನು ಹಿಂದಿಕ್ಕಿ ಚಿನ್ನಕ್ಕೆ ಮುತ್ತಿಟ್ಟರು. ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸುವಲ್ಲಿ ವಿಫಲರಾಗಿದ್ದ ಭಾಕರ್, ಇಲ್ಲಿ ಚಿನ್ನ ಗೆದ್ದು ಹಿಂದಿನ ವೈಫಲ್ಯಗಳನ್ನು ಮರೆ ಮಾಚಿದ್ದಾರೆ. 

 

Follow Us:
Download App:
  • android
  • ios