Wrestlers Protest ಸಂಸತ್ ಭವನ ಮುತ್ತಿಗೆಗೆ ಕುಸ್ತಿಪಟುಗಳ ಸಿದ್ಧತೆ!
ಬ್ರಿಜ್‌ಭೂಷಣ್ ವಿರುದ್ದ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ
ಹರ್ಯಾಣ, ಪಂಜಾಬ್‌ನಿಂದ ಸಾವಿರಾರು ಮಂದಿ ದೆಹಲಿಗೆ
ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಕುಸ್ತಿಪಟುಗಳ ಪ್ರತಿಭಟನೆ
ನವದೆಹಲಿ(ಮೇ.27): ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ 1 ತಿಂಗಳಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಭಾನುವಾರ ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನದ ಉದ್ಘಾಟಿಸಲಿದ್ದು, ಅದೇ ವೇಳೆಗೆ ಭವನದ ಎದುರು ‘ಮಹಾಪಂಚಾಯತ್’ ಹೆಸರಲ್ಲಿ ಬೃಹತ್ ಹೋರಾಟ ಸಂಘಟಿಸುವುದಾಗಿ ಈಗಾಗಲೇ ಕುಸ್ತಿಪಟುಗಳು ಘೋಷಿಸಿದ್ದಾರೆ. ಇದರ ಭಾಗವಾಗಿ ಸ್ವತಃ ಭಜರಂಗ್ ಪೂನಿಯಾ, ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖರು ಹರಾರಯಣ, ಪಂಜಾಬ್ಗೆ ತೆರಳಿ ರೈತರು, ಮಹಿಳೆಯರಿಂದ ಬೆಂಬಲ ಕೋರಿದ್ದಾರೆ. ಅಲ್ಲದೇ ವಿವಿಧ ರಾಜ್ಯಗಳ ಸಾವಿರಾರು ಮಂದಿ ಈಗಾಗಲೇ ದೆಹಲಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ‘ಸಂಸತ್ ಭವನದ ಮುಂಭಾಗ ನಡೆಯಲಿರುವ ಮಹಾಪಂಚಾಯತ್ನಲ್ಲಿ ದೇಶದೆಲ್ಲೆಡೆಯ ಯುವಕ, ಯುವತಿಯರು ಪಾಲ್ಗೊಳ್ಳಬೇಕು. ಇದು ತ್ರಿವರ್ಣ ಧ್ವಜದ ಗೌರವ ಉಳಿಸುವುದಕ್ಕಾಗಿ ನಡೆಯಲಿರುವ ಹೋರಾಟ’ ಎಂದು ವಿನೇಶ್ ಕರೆ ನೀಡಿದ್ದಾರೆ.
ಪೋಕ್ಸೋ ಕಾಯ್ದೆ ದುರ್ಬಳಕೆ: ಬ್ರಿಜ್
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಿಜ್, ‘ಪೋಕ್ಸೋ ಕಾಯ್ದೆ ದುರ್ಬಳಕೆ ಆಗುತ್ತಿದೆ. ಅಧಿಕಾರಿಗಳು ಕೂಡಾ ಇದರಿಂದ ಮುಕ್ತವಾಗಿಲ್ಲ. ಹೀಗಾಗಿ ಕಾನೂನು ಬದಲಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ’ ಎಂದಿದ್ದಾರೆ. ಅಪ್ರಾಪ್ರ ಬಾಲಕಿಯರು ನೀಡಿದ ದೂರಿನನ್ವಯ ಡೆಲ್ಲಿ ಪೊಲೀಸರು ಇತ್ತೀಚೆಗೆ ಬ್ರಿಜ್ ವಿರುದ್ಧ ಪೋಕ್ಸೋ ಸೇರಿ 2 ಕೇಸ್ ದಾಖಲಿಸಿದ್ದಾರೆ.
IPL 2023: ಫೈನಲ್‌ಗೆ ಗುಜರಾತ್ ಟೈಟಾನ್ಸ್, ಮನೆಗೆ ನಡೆದ ಐದು ಬಾರಿಯ ಚಾಂಪಿಯನ್ಸ್!
ಕಿರಿಯರ ಏಷ್ಯಾಕಪ್ ಹಾಕಿ: ಇಂದು ಭಾರತ-ಪಾಕಿಸ್ತಾನ
ಸಲಾಲ್ಹ(ಒಮಾನ್): ಸತತ 2 ಗೆಲುವಿನೊಂದಿಗೆ ಕಿರಿಯರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿರುವ ಭಾರತ ಶನಿವಾರ ‘ಎ’ ಗುಂಪಿನ 3ನೇ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಉಭಯ ತಂಡಗಳು ಆಡಿರುವ ಎರಡೂ ಪಂದ್ಯಗಳಲ್ಲ ಜಯಿಸಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸೆಮಿಫೈನಲ್‌ನಲ್ಲಿ ಸ್ಥಾನ ಬಹುತೇಕ ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದೆ. ತಲಾ 3 ಬಾರಿ ಚಾಂಪಿಯನ್ ಆಗಿರುವ ಇತ್ತಂಡಗಳು 2015ರಲ್ಲಿ ಕೊನೆ ಬಾರಿ ಮುಖಾಮುಖಿಯಾಗಿದ್ದವು. ಒಟ್ಟಾರೆ 7 ಮುಖಾಮುಖಿಯಲ್ಲಿ ಭಾರತ 5ರಲ್ಲಿ ಗೆದ್ದಿವೆ.
ಪಂದ್ಯ: ರಾತ್ರಿ 9.30ಕ್ಕೆ
ಖೇಲೋ ವಿವಿ ಗೇಮ್ಸ್: ಜೈನ್ ವಿವಿಗೆ 4 ಚಿನ್ನ
ಲಖನೌ: 3ನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ನಲ್ಲಿ ಕರ್ನಾಟಕದ ವಿಶ್ವವಿದ್ಯಾಲಯಗಳು ಪದಕ ಬೇಟೆ ಆರಂಭಿಸಿವೆ. ಶುಕ್ರವಾರ ನಡೆದ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಜೈನಿ ವಿವಿ 3 ಚಿನ್ನ ಸೇರಿ 5 ಪದಕ ತನ್ನದಾಗಿಸಿಕೊಂಡಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಪುರುಷರ 400 ಮೀ. ಫ್ರೀಸ್ಟೈಲ್ನಲ್ಲಿ ಕ್ರೈಸ್ಟ್ ವಿವಿಯ ಅನೀಶ್ ಗೌಡ 4 ನಿಮಿಷ 03.01 ಸೆಕೆಂಡ್ಗಳಲ್ಲಿ ಗುರಿ ತಲುಪಿ ಈಜು ಸ್ಪರ್ಧೆಯ ಮೊದಲ ಚಿನ್ನವನ್ನು ತಮ್ಮದಾಗಿಸಿಕೊಂಡರೆ, ಮಹಿಳಾ ವಿಭಾಗದಲ್ಲಿ ಬೆಂಗಳೂರು ವಿವಿಯ ಪ್ರೀತಾ ವಿ.(4:45.36 ನಿ.) ಬಂಗಾರ ಗೆದ್ದರು. ಪುರುಷರ 200 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ಜೈನ್ ವಿವಿಯ ಶಿವ ಶ್ರೀಧರ್ 2 ನಿಮಿಷ 08.67 ಸೆಕೆಂಡ್ಗಳಲ್ಲಿ ಕ್ರಮಿಸಿ ಚಿನ್ನ ಜಯಿಸಿದರೆ, ಅನೀಶ್(2:12.23 ನಿ.) ಕಂಚು ಪಡೆದರು. ಪುರುಷರ 100 ಮೀ. ಬ್ಯಾಕ್ಸ್ಟ್ರೋಕ್ನಲ್ಲಿ ಶ್ರೀಧರ್(58.09 ಸೆ.) ಚಿನ್ನ, ಮಹಿಳೆಯರ 100 ಮೀ. ಬ್ಯಾಕ್ಸ್ಟ್ರೋಕ್ನಲ್ಲಿ ಜೈನ್ ವಿವಿಯ ಶೃಂಗಿ ಬಂಡೇಕರ್ ಬೆಳ್ಳಿ, ಪುರುಷರ 200 ಮೀ. ಬ್ಯಾಕ್ಸ್ಟ್ರೋಕ್ನಲ್ಲಿ ಜೈನ್ ವಿವಿಯ ಮಣಿಕಾಂತ ಕಂಚು ಗೆದ್ದರು. ಮಹಿಳೆಯರ 4*200 ಮೀ. ಫ್ರೀಸ್ಟೈಲ್ನಲ್ಲಿ ಜೈನ್ ವಿವಿ ತಂಡ ಸ್ವರ್ಣ ಸಾಧನೆ ಮಾಡಿತು. ಶೂಟಿಂಗ್‌ನ ಮಹಿಳೆಯರ 50 ಮೀ. 3 ಪೊಸಿಷನ್ ವಿಭಾಗದಲ್ಲಿ ಮಣಿಪಾಲ ವಿವಿ ಬಂಗಾರ ಜಯಿಸಿತು.