23ನೇ ದಿನಕ್ಕೆ ಕಾಲಿರಿಸಿದ ಕುಸ್ತಿಪಟುಗಳ ಪ್ರತಿಭಟನೆಪ್ರತಿಭಟನೆ ಹೆಸರಲ್ಲಿ ಟ್ವೀಟರ್‌ ಖಾತೆ, ಮಿಸ್ಡ್‌ ಕಾಲ್‌ ಅಭಿಯಾನ ಆರಂಭಪ್ರತಿಭಟನೆ ರಾಮ್‌ ಲೀಲಾ ಮೈದಾನಕ್ಕೆ ಸ್ಥಳಾಂತರ?

ನವದೆಹಲಿ(ಮೇ.17): ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಬಂಧನಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ಚಾಲ್ತಿಯಲ್ಲಿಡಲು ಹಾಗೂ ಹೆಚ್ಚೆಚ್ಚು ಜನರಿಗೆ ತಿಳಿಯುವಂತೆ ಮಾಡಲು ಕುಸ್ತಿಪಟುಗಳು ಹೊಸ ಹೊಸ ದಾರಿ ಹುಡುಕುತ್ತಿದ್ದಾರೆ. ಸಾಮಾಜಿಕ ತಾಣ ಟ್ವೀಟರ್‌ನಲ್ಲಿ Wrestlers Protest India @wrestlerprotest ಎನ್ನುವ ಹೆಸರಲ್ಲಿ ಖಾತೆ ತೆರೆದಿರುವ ಕುಸ್ತಿಪಟುಗಳು ನಿತ್ಯ ತಮ್ಮ ಪ್ರತಿಭಟನೆಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. ಕಳೆದೆರಡು ದಿನದಲ್ಲಿ ಈ ಖಾತೆಯನ್ನು 500ಕ್ಕೂ ಹೆಚ್ಚು ಮಂದಿ ಹಿಂಬಾಲಿಸಲು ಶುರು ಮಾಡಿದ್ದಾರೆ.

ಇದೇ ವೇಳೆ ಮಿಸ್ಡ್‌ ಕಾಲ್‌ ಅಭಿಯಾನವನ್ನೂ ಆರಂಭಿಸಿದ್ದು, 9053903100 ನಂಬರ್‌ಗೆ ಮಿಸ್ಡ್‌ ಕಾಲ್‌ ನೀಡಿದರೆ ಕುಸ್ತಿಪಟುಗಳ ಪ್ರತಿನಿಧಿಯಿಂದ ಕರೆ ಬರಲಿದೆ. ಪ್ರತಿಭಟನೆಗೆ ಬೆಂಬಲ ಸೂಚಿಸುವುದರ ಜೊತೆಗೆ ಹೋರಾಟ ಹೇಗೆ ಮುಂದುವರಿಸಬೇಕು, ಏನೇನು ಕ್ರಮ ಕೈಗೊಳ್ಳಬಹುದು ಎನ್ನುವು ಸಲಹೆಗಳನ್ನು ಸಾರ್ವಜನಿಕರೂ ನೀಡಬಹುದು ಎಂದು ಪ್ರತಿಭಟನಾ ನಿರತ ಕುಸ್ತಿಪಟು ವಿನೇಶ್‌ ಫೋಗಾಟ್‌ ಹೇಳಿದ್ದಾರೆ.

ಹವ್ಯಾಸಿ ಶೂಟರ್‌ ಈಗ ಬಂಗಾರದ ಹುಡುಗಿ! ಕೋಲಾರದ ಹುಡುಗಿಯ ಯಶೋಗಾಥೆ

ಇನ್ನು ಕಳೆದ 23 ದಿನಗಳಿಂದ ಜಂತರ್‌-ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು, ಇದೀಗ ದೆಹಲಿಯ ವಿವಿಧೆಡೆ ತೆರಳಿ ಸಾರ್ವಜನಿಕರಿಗೆ ತಮ್ಮ ಹೋರಾಟದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಬ್ರಿಜ್‌ಭೂಷಣ್‌ರಿಂದ ತಮಗೆ ಏನೆಲ್ಲಾ ತೊಂದರೆಗಳಾಗಿವೆ. ಏಕೆ ಈ ಹೋರಾಟಕ್ಕೆ ದೇಶದ ಜನರ ಬೆಂಬಲ ಬೇಕು ಎನ್ನುವುದನ್ನು ವಿವರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಭಟನೆ ರಾಮ್‌ ಲೀಲಾ ಮೈದಾನಕ್ಕೆ ಸ್ಥಳಾಂತರ?

ಬ್ರಿಜ್‌ಭೂಷಣ್‌ ವಿರುದ್ಧದ ಹೋರಾಟವನ್ನು ರಾಷ್ಟ್ರೀಯ ಚಳುವಳಿಯಾಗಿ ಬದಲಿಸಲು ಉದ್ದೇಶಿಸಿರುವ ಕುಸ್ತಿಪಟುಗಳು, ತಮ್ಮ ಪ್ರತಿಭಟನೆಯನ್ನು ಜಂತರ್‌-ಮಂತರ್‌ನಿಂದ ದೆಹಲಿಯ ರಾಮ್‌ ಲೀಲಾ ಮೈದಾನಕ್ಕೆ ಸ್ಥಳಾಂತರಿಸಲು ಚಿಂತಿಸುತ್ತಿದ್ದಾರೆ. ‘ರಾಮ್‌ ಲೀಲಾ ಮೈದಾನ ದೊಡ್ಡದಾಗಿದ್ದು, ಹೆಚ್ಚು ಜನ ಪ್ರತಿಭಟನೆಯಲ್ಲಿ ಭಾಗವಹಿಸಬಹುದು. ಹಲವು ಸಂಘಟನೆಗಳಿಂದ ನಮಗೆ ಬೆಂಬಲ ವ್ಯಕ್ತವಾಗಿದ್ದು, ಅವರೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಿ ಸದ್ಯದಲ್ಲೇ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಕುಸ್ತಿಪಟು ಸಾಕ್ಷಿ ಮಲಿಕ್‌ ಹೇಳಿದ್ದಾರೆ.

3 ಶಸ್ತ್ರಚಿಕಿತ್ಸೆಗೆ ಒಳಗಾದ ಟೆನಿಸ್‌ ತಾರೆ ರಾಡುಕಾನು!

ಲಂಡನ್‌: 2021ರ ಯುಎಸ್‌ ಓಪನ್‌ ಚಾಂಪಿಯನ್‌, ಬ್ರಿಟನ್‌ನ 20 ವರ್ಷದ ಟೆನಿಸ್‌ ತಾರೆ ಎಮ್ಮಾ ರಾಡುಕಾನು ಕಳೆದ ಕೆಲ ದಿನಗಳಲ್ಲಿ 3 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದು, ಈ ವರ್ಷದ ಫ್ರೆಂಚ್‌ ಓಪನ್‌, ವಿಂಬಲ್ಡನ್‌ ಹಾಗೂ ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೂರ್ನಿಗಳಿಂದ ಹೊರಬಿದ್ದಿದ್ದಾರೆ. ಎರಡೂ ಕೈಗಳ ಮಣಿಕಟ್ಟು, ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರಾಡುಕಾನು ಸಂಪೂರ್ಣ ಚೇತರಿಸಿಕೊಳ್ಳಲು ಕನಿಷ್ಠ 7-8 ತಿಂಗಳು ಬೇಕಾಬಹುದು ಎನ್ನಲಾಗಿದೆ.

ಈ ವರ್ಷದ ಆರಂಭದಲ್ಲಿ ಆಕ್ಲೆಂಡ್‌ನಲ್ಲಿ ಪಂದ್ಯವಾಡುತ್ತಿದ್ದಾಗ ಗಾಯಗೊಂಡಿದ್ದ ರಾಡುಕಾನು ಹಲವು ಟೂರ್ನಿಗಳಿಂದ ಹಿಂದೆ ಸರಿದಿದ್ದರು. ನೋವು ಹೆಚ್ಚಾದ ಕಾರಣ ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.

ಫೆಡ್‌ ಕಪ್‌ ಅಥ್ಲೆಟಿಕ್ಸ್‌: ರಾಜ್ಯದ ಪ್ರಿಯಾಗೆ ಚಿನ್ನ

ರಾಂಚಿ: 26ನೇ ರಾಷ್ಟ್ರೀಯ ಫೆಡ್‌ ಕಪ್‌ ಅಥ್ಲೆಟಿಕ್ಸ್‌ ಕೂಟದ 2ನೇ ದಿನವಾದ ಮಂಗಳವಾರ ಕರ್ನಾಟಕ 1 ಚಿನ್ನ ಸೇರಿ ಒಟ್ಟು 3 ಪದಕ ಜಯಿಸಿತು. ಮಹಿಳೆಯರ 400 ಮೀ. ಓಟದಲ್ಲಿ ಪ್ರಿಯಾ ಮೋಹನ್‌ 53.40 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರು. ಪಶ್ಚಿಮ ಬಂಗಾಳದ ಸೋನಿಯಾ (53.42 ಸೆ.), ಜಾರ್ಖಂಡ್‌ನ ಫೆಲೕರೆನ್ಸ್‌ (53.76) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು. ಪುರುಷರ ಹೈ ಜಂಪ್‌ನಲ್ಲಿ ಜೆಸ್ಸಿ ಸಂದೇಶ್‌ 2.18 ಮೀ. ಜಿಗಿದು ಬೆಳ್ಳಿ ಗೆದ್ದರೆ, ಮಹಿಳೆಯರ 100 ಮೀ. ಓಟವನ್ನು 11.69 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿದ ದಾನೇಶ್ವರಿ ಕಂಚಿನ ಪದಕ ಪಡೆದರು.