Asianet Suvarna News Asianet Suvarna News

ಹವ್ಯಾಸಿ ಶೂಟರ್‌ ಈಗ ಬಂಗಾರದ ಹುಡುಗಿ! ಕೋಲಾರದ ಹುಡುಗಿಯ ಯಶೋಗಾಥೆ

ಬಾಸ್ಕೆಟ್‌ಬಾಲ್‌ ಆಟಗಾರ್ತಿಯಾಗಿದ್ದ ಕೋಲಾರದ ಹುಡುಗಿ ಈಗ ಶೂಟಿಂಗ್‌ ಸ್ಟಾರ್‌
2019ರಲ್ಲಿ ವೃತ್ತಿಪರ ಟೂರ್ನಿಗಳಲ್ಲಿ ಸ್ಪರ್ಧಿಸಿದರು. 2021ರಲ್ಲಿ ರಾಷ್ಟ್ರಮಟ್ಟ ಪ್ರವೇಶಿಸಿದರು
ಇದೀಗ ಶೂಟಿಂಗ್‌ ವಿಶ್ವಕಪ್‌ನಲ್ಲಿ ಸರಬ್ಜೋತ್‌ ಜತೆಗೂಡಿ ಚಿನ್ನದ ಪದಕ ಗೆದ್ದಿದ್ದಾರೆ
 

Amateur shooter Divya TS turn into ISSF World Cup Champion A Special story on Kolar Based girl kvn
Author
First Published May 17, 2023, 8:40 AM IST

- ಸ್ಪಂದನ್‌ ಕಣಿಯಾರ್‌, ಕನ್ನಡಪ್ರಭ

ಬೆಂಗಳೂರು(ಮೇ.17): ಆಕೆ ಬಾಸ್ಕೆಟ್‌ಬಾಲ್‌ ಆಟಗಾರ್ತಿ. ತಂಡ ಕ್ರೀಡೆ ಅದು. ಒಂದೊಮ್ಮೆ ಆಕೆಗೆ ಯಾವುದಾದರೂ ವೈಯಕ್ತಿಕ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆನ್ನಿಸುತ್ತದೆ. ಹವ್ಯಾಸಕ್ಕಾಗಿ ಆಡುತ್ತಿದ್ದ ಶೂಟಿಂಗ್‌ ಅನ್ನೇ ಗಂಭೀರವಾಗಿ ಪರಿಗಣಿಸುತ್ತಾರೆ. ಕೇವಲ 4 ವರ್ಷ ಹಿಂದೆ ವೃತ್ತಿಪರ ಟೂರ್ನಿಗಳಲ್ಲಿ ಆಡುತ್ತಾರೆ. 2 ವರ್ಷ ಹಿಂದಷ್ಟೇ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುತ್ತಾರೆ. ಅದಾಗಿ ಎರಡೇ ವರ್ಷದಲ್ಲಿ ಶೂಟಿಂಗ್‌ ವಿಶ್ವಕಪ್‌ನಲ್ಲೇ ಚಿನ್ನದ ಕಿರೀಟ ಧರಿಸುತ್ತಾರೆ.

ಇದು ಕರ್ನಾಟಕದ ಕೋಲಾರ ಮೂಲದ ಶೂಟಿಂಗ್‌ ಪ್ರತಿಭೆ ದಿವ್ಯಾ.ಟಿ.ಎಸ್‌. ಅವರ ಯಶೋಗಾಥೆಯ ಸ್ಥೂಲ ಚಿತ್ರಣ. ಇತ್ತೀಚೆಗೆ ಅಜರ್‌ಬೈಜಾನ್‌ನ ಬಾಕುನಲ್ಲಿ ನಡೆದ ಶೂಟಿಂಗ್‌ ವಿಶ್ವಕಪ್‌ನ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಸರಬ್ಜೋತ್‌ ಸಿಂಗ್‌ ಜೊತೆಗೂಡಿ ಚಿನ್ನ ಗೆದ್ದ ದಿವ್ಯಾ, ತಮ್ಮ ಶೂಟಿಂಗ್‌ ಪಯಣದ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಅವರ ಮುಂದಿನ ಗುರಿ.

ದಿವ್ಯಾ ಮೂಲತಃ ಬಾಸ್ಕೆಟ್‌ಬಾಲ್‌ ಆಡುತ್ತಿದ್ದರು. ಶೂಟಿಂಗ್‌ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಹವ್ಯಾಸವೂ ಇತ್ತು. ತಂಡ ಕ್ರೀಡೆಯಾದ ಬಾಸ್ಕೆಟ್‌ ಬಾಲ್‌ ಆಡುವಾಗ ಅವರಿಗೆ ವೈಯಕ್ತಿಕ ಕ್ರೀಡೆಯೊಂದರಲ್ಲಿ ಸಾಧನೆ ಮಾಡುವ ಮನಸ್ಸುಂಟಾಯಿತು. ಆಗ ನೆನಪಾದದ್ದೇ ಶೂಟಿಂಗ್‌. 2016ರಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಹೆಸರು ನೋಂದಾಯಿಸಿಕೊಂಡು ಸ್ಪರ್ಧಿಸಿದ್ದ ಅವರು, ವೃತ್ತಿಪರ ಟೂರ್ನಿಗಳಲ್ಲಿ ಮೊದಲು ಸ್ಪರ್ಧಿಸಿದ್ದು 2019ರಲ್ಲಿ. ಕೋವಿಡ್‌ನಿಂದಾಗಿ 2020-21ರಲ್ಲಿ ಯಾವುದೇ ಸ್ಪರ್ಧೆಗಳು ನಡೆಯಲಿಲ್ಲ. ಆದರೆ 2021ರ ನವೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್‌ ಕೂಟ ದಿವ್ಯಾಗೆ ತಾವೊಬ್ಬ ವೃತ್ತಿಪರ ಶೂಟರ್‌ ಆಗಬಹುದು ಎನ್ನುವ ಅರಿವು ಮೂಡಿಸಿತು.

IPL 2023: ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿಯಾದ ವರುಣ್‌ ಚಕ್ರವರ್ತಿ, ವೆಂಕಿ ಅಯ್ಯರ್

‘2021ರಲ್ಲಿ ಭಾರತ ತಂಡದ ಶಿಬಿರಕ್ಕೂ ಆಯ್ಕೆಯಾದೆ. ಆದರೆ ಅರ್ಹತಾ ಸುತ್ತಿನಲ್ಲಿ 4ನೇ ಸ್ಥಾನ ಪಡೆದ ಕಾರಣ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುವ ಅವಕಾಶ ಕೈತಪ್ಪಿತು. ರಾಷ್ಟ್ರೀಯ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಬಳಿಕ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಾಂಪಿಯನ್‌ ಆದೆ. ರಾಷ್ಟ್ರೀಯ ರಾರ‍ಯಂಕಿಂಗ್‌ನಲ್ಲಿ ನಂ.1 ಸ್ಥಾನ ಸಹ ಪಡೆದೆ. ಕೆಲ ವರ್ಷಗಳ ಹಿಂದೆ ಹವ್ಯಾಸಕ್ಕಾಗಿ ಶೂಟಿಂಗ್‌ ಆರಂಭಿಸಿದಾಗ ಇಷ್ಟು ದೂರ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಒಂದೊಂದೇ ಹೆಜ್ಜೆ ಮುಂದಿಟ್ಟಾಗಲೂ ಹೊಸ ಹುಮ್ಮಸ್ಸು ಹಾಗೂ ವಿಶ್ವಾಸ ಮೂಡಿತು. ಇದೀಗ ವಿಶ್ವಕಪ್‌ ಪದಕ ಗೆದ್ದಿರುವುದು ಇನ್ನಷ್ಟು ಸಾಧನೆ ಮಾಡಲು ಸ್ಫೂರ್ತಿ ನೀಡಿದೆ’ ಎಂದರು ದಿವ್ಯಾ ಹೇಳಿದ್ದಾರೆ.

ಅಭ್ಯಾಸಕ್ಕಾಗಿ ದಿನಕ್ಕೆ 3-4 ಸಾವಿರ ವೆಚ್ಚ!

‘ಶೂಟಿಂಗ್‌ ದುಬಾರಿ ಕ್ರೀಡೆಗಳಲ್ಲಿ ಒಂದು. ಉಪಕರಣಗಳು, ಗುಂಡು, ಅಭ್ಯಾಸಕ್ಕಾಗಿ ಬೇಕಿರುವ ಶೂಟಿಂಗ್‌ ರೇಂಜ್‌ ಇವೆಲ್ಲದ್ದಕ್ಕೂ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಬೇಕಾಗುತ್ತದೆ. ನಾನು ಭಾರತ ತಂಡದ ಶಿಬಿರದಲ್ಲಿದ್ದಾಗ ಭಾರತೀಯ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್‌ಆರ್‌ಎಐ) ಅಭ್ಯಾಸಕ್ಕೆ ಖರ್ಚು ವೆಚ್ಚ ನೋಡಿಕೊಳ್ಳುತ್ತದೆ. ಇಲ್ಲದಿದ್ದಾಗ ನಾವೇ ಖರ್ಚು ಭರಿಸಬೇಕು. ಬೆಂಗಳೂರಲ್ಲಿ ರಾಜ್ಯ ಸರ್ಕಾರದ ಶೂಟಿಂಗ್‌ ರೇಂಜ್‌ ಇಲ್ಲದ ಕಾರಣ, ಕೇಂದ್ರ ಕ್ರೀಡಾ ಪ್ರಾಧಿಕಾರ (ಸಾಯ್‌)ದಲ್ಲಿರುವ ರೇಂಜ್‌ ಬಳಸಬೇಕು. ಅಲ್ಲಿ ಅಭ್ಯಾಸಕ್ಕೆ ಬಾಡಿಗೆ ಪಾವತಿಸಬೇಕು. ಉತ್ತಮ ಗುಣಮಟ್ಟದ ಗುಂಡು (ಪೆಲೆಟ್ಸ್‌) ಬಲು ದುಬಾರಿ. ಜೊತೆಗೆ ಎಷ್ಟು ಹೊತ್ತು ಅಭ್ಯಾಸ ನಡೆಸುತ್ತೇವೆ ಎನ್ನುವುದರ ಮೇಲೂ ದಿನದ ಖರ್ಚು ನಿರ್ಧಾರವಾಗುತ್ತೆ. ಅಂದಾಜು 3-4 ಸಾವಿರ ರುಪಾಯಿ ವೆಚ್ಚ ಮಾಡಬೇಕಾಗುತ್ತದೆ’ ಎನ್ನುತ್ತಾರೆ ದಿವ್ಯಾ.

ದಿನಕ್ಕೆ 6 ಗಂಟೆಗಳ ಅಭ್ಯಾಸ!

ದಿವ್ಯಾ ಒಂದು ದಿನಕ್ಕೆ ಸುಮಾರು 6 ಗಂಟೆ ಅಭ್ಯಾಸ ಶೂಟಿಂಗ್‌ ಅಭ್ಯಾಸ ನಡೆಸುತ್ತಾರೆ. ಜೊತೆಗೆ ದೈಹಿಕ ಕಸರತ್ತು, ಮಾನಸಿಕ ಸದೃಢತೆಗೆ ಯೋಗ, ಧ್ಯಾನಕ್ಕೆಂದು 2 ಗಂಟೆಗಳ ಕಾಲ ಮೀಸಲಿಡುತ್ತಾರೆ. ‘ಶೂಟಿಂಗ್‌ಗೆ ಹೆಚ್ಚು ದೈಹಿಕ ಫಿಟ್ನೆಸ್‌ ಬೇಡ ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ಅತಿಹೆಚ್ಚು ಗಾಯಕ್ಕೊಳಗಾಗಬಲ್ಲ ಕ್ರೀಡೆ ಇದು. ಬಹಳ ಹೊತ್ತು ಒಂದೇ ಕಡೆ ನಿಂತು ಆಡುವ ಕಾರಣ ಕತ್ತು, ಬೆನ್ನು, ಸೊಂಟದ ಗಾಯಗಳಾಗುವ ಸಾಧ್ಯತೆ ಹೆಚ್ಚು. ನನ್ನ ಜೊತೆ ಶೂಟಿಂಗ್‌ ಆರಂಭಿಸಿದ ಅನೇಕರು ಈಗ ಗಾಯಗೊಂಡು ಕ್ರೀಡೆ ತೊರೆದಿದ್ದಾರೆ. ಉತ್ತಮ ಆಹಾರ ಪದ್ಧತಿಯೂ ಬಹಳ ಮುಖ್ಯ’ ಎಂದು ದಿವ್ಯಾ ತಮ್ಮ ಅಭ್ಯಾಸದ ಬಗ್ಗೆ ವಿವರಿಸಿದ್ದಾರೆ.

ಲಾಕ್‌ಡೌನ್‌ ಹಿಂದಿನ ದಿನ ವಕೀಲೆಯಾಗಿ ನೋಂದಣಿ!

ದಿವ್ಯಾ ಕಾನೂನು ವಿದ್ಯಾಭ್ಯಾಸ ಮಾಡಿದ್ದು, 2020ರ ಮಾರ್ಚ್ 26ರಂದು ಕೋವಿಡ್‌ ಲಾಕ್‌ಡೌನ್‌ ಆಗುವ ಹಿಂದಿನ ದಿನ ಅಂದರೆ ಮಾ.25ರಂದು ವಕೀಲೆಯಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಸದಸ್ಯೆಯಾಗಿ ನೋಂದಣಿ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ‘ಕಾನೂನು ಓದಿದ್ದರೂ ಸದ್ಯ ವಕೀಲೆಯಾಗಿ ಕೆಲಸ ಮಾಡುತ್ತಿಲ್ಲ. ಶೂಟಿಂಗ್‌ ಕಡೆಗೆ ಸಂಪೂರ್ಣ ಗಮನ ಹರಿಸುತ್ತಿದ್ದೇನೆ. ಮುಂದೆ ವಕೀಲಿಕೆಗೆ ಮರಳುವ ಉದ್ದೇಶವಿದೆ’ ಎಂದಿದ್ದಾರೆ.

ಒಲಿಂಪಿಕ್ಸ್‌ ಪದಕ ನನ್ನ ಗುರಿ

ಎಲ್ಲಾ ಕ್ರೀಡಾಪಟುಗಳಿಗೂ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಬೇಕು, ಪದಕ ಗೆಲ್ಲಬೇಕು ಎನ್ನುವ ಗುರಿ ಇದ್ದೇ ಇರುತ್ತದೆ. ನಾನೂ ಅದೇ ಕನಸಿಟ್ಟುಕೊಂಡಿದ್ದೇನೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ನನ್ನ ಗುರಿ. ಅದಕ್ಕೂ ಮುನ್ನ ಏಷ್ಯನ್‌ ಚಾಂಪಿಯನ್‌ಶಿಪ್‌, ಏಷ್ಯನ್‌ ಗೇಮ್ಸ್‌, ವಿಶ್ವ ಚಾಂಪಿಯನ್‌ಶಿಪ್‌ ಸ್ಪರ್ಧೆಗಳಿವೆ. ಭಾರತೀಯ ಶೂಟಿಂಗ್‌ನಲ್ಲಿ ಪ್ರಬಲ ಸ್ಪರ್ಧೆಯಿದ್ದು, ಇದು ನಾನು ನನ್ನ ಗುರಿಯೆಡೆಗೆ ಸಾಗಲು ಇನ್ನಷ್ಟುಪರಿಶ್ರಮ ವಹಿಸುವಂತೆ ಮಾಡಲಿದೆ.

ದಿವ್ಯಾ ಸಾಧನೆ

- ಕೋಲಾರ ಮೂಲದ ದಿವ್ಯಾ ಟಿ.ಎಸ್‌. ಈ ಮೊದಲು ಬಾಸ್ಕೆಟ್‌ಬಾಲ್‌ ಆಡುತ್ತಿದ್ದರು

- ಶೂಟಿಂಗ್‌ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಹವ್ಯಾಸ ಅವರಿಗೆ ಇತ್ತು

- ಬಾಸ್ಕೆಟ್‌ಬಾಲ್‌ ತಂಡ ಕ್ರೀಡೆ. ಹೀಗಾಗಿ ವೈಯಕ್ತಿಕ ಕ್ರೀಡೆಯಲ್ಲಿ ಸಾಧಿಸುವ ಆಸೆ ಇತ್ತು

- ಆಗ ದಿವ್ಯಾ ಅವರಿಗೆ ನೆನಪಾಗಿದ್ದೇ ಶೂಟಿಂಗ್‌. 2016ರಲ್ಲಿ ಹೆಸರು ನೋಂದಾಯಿಸಿದರು

- 2019ರಲ್ಲಿ ವೃತ್ತಿಪರ ಟೂರ್ನಿಗಳಲ್ಲಿ ಸ್ಪರ್ಧಿಸಿದರು. 2021ರಲ್ಲಿ ರಾಷ್ಟ್ರಮಟ್ಟಪ್ರವೇಶಿಸಿದರು

- ಇದೀಗ ಶೂಟಿಂಗ್‌ ವಿಶ್ವಕಪ್‌ನಲ್ಲಿ ಸರಬ್ಜೋತ್‌ ಜತೆಗೂಡಿ ಚಿನ್ನದ ಪದಕ ಗೆದ್ದಿದ್ದಾರೆ

Follow Us:
Download App:
  • android
  • ios