ಅಹ್ಮದಾಬಾದ್(ಡಿ. 10): ಈಡೆನ್ ಗಾರ್ಡನ್ಸ್ ಸ್ಟೇಡಿಯಂನ ಗಾತ್ರ ಚಿಕ್ಕದಾದ ಬಳಿಕ ಭಾರತದ ಕೈತಪ್ಪಿಹೋಗಿದ್ದ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ವಿಶ್ವದಾಖಲೆ ಈಗ ಮತ್ತೆ ಭಾರತದ ಹೆಸರಿಗೆ ಬರಲಿದೆ. ಅಹ್ಮದಾಬಾದ್'ನ ಮೊಟೇರಾದಲ್ಲಿರುವ ಸರ್ದಾರ್ ಪಟೇಲ್ ಸ್ಟೇಡಿಯಂನ ಪುನರ್ನಿರ್ಮಾಣದ ಕಾರ್ಯ ನಡೆಯಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದ ಗುಜರಾತ್ ಕ್ರಿಕೆಟ್ ಸಂಸ್ಥೆಯು ಈ ಕಾರ್ಯ ಕೈಗೆತ್ತಿಕೊಂಡಿದೆ. 1.1 ಲಕ್ಷ ಸೀಟು ಸಾಮರ್ಥ್ಯದ ಸ್ಟೇಡಿಯಂ ನಿರ್ಮಾಣಕ್ಕೆ ಅಸ್ತು ಎನ್ನಲಾಗಿದೆ. ಈ ಯೋಜನೆ ಕೈಗೂಡಿದರೆ ಮೊಟೇರಾ ಸ್ಟೇಡಿಯಂ ವಿಶ್ವದ ಅತ್ಯಂತ ಬೃಹತ್ ಕ್ರಿಕೆಟ್ ಸ್ಟೇಡಿಯಂ ಎನಿಸಲಿದೆ.

ಒಂದು ಲಕ್ಷ ಸೀಟು ಸಾಮರ್ಥ್ಯ ಇರುವ ಮೆಲ್ಬೋರ್ನ್'ನ ಎಂಸಿಜಿ ಮೈದಾನವು ಸದ್ಯ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿದೆ. ಕೋಲ್ಕತಾದ ಈಡೆನ್ ಗಾರ್ಡನ್ಸ್ ದಶಕಗಳ ಹಿಂದಿನವರೆಗೂ ಆ ಹೆಸರು ಗಳಿಸಿಕೊಂಡಿತ್ತು. ಆದರೆ, ಮೈದಾನವನ್ನು ಚಿಕ್ಕದು ಮಾಡಿದ್ದರಿಂದ ಆ ದಾಖಲೆಯು ಮೆಲ್ಬೋರ್ನ್ ಸ್ಟೇಡಿಯಂಗೆ ಹೋಗಿದೆ.

ಮೊಟೇರಾದಲ್ಲಿ ಅತ್ಯುತ್ತಮ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವುದು ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಬಹುದಿನದ ಕನಸು. ಮೋದಿಯವರು ಗುಜರಾತ್ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿದ್ದಾಗ ಈ ಕನಸು ಕಂಡಿದ್ದರು. ಇದೀಗ ಅವರ ಆಪ್ತ ಅಮಿತ್ ಶಾ ಈ ಕನಸನ್ನು ನನಸು ಮಾಡುತ್ತಿದ್ದಾರೆ.

ಮೊಟೇರಾದಲ್ಲಿ ಇದ್ದ ಹಳೆಯ ಸ್ಟೇಡಿಯಂ 49 ಸಾವಿರ ಸೀಟು ಕೆಪಾಸಿಟಿ ಹೊಂದಿತ್ತು. 1983ರಿಂದೀಚೆ ಇಲ್ಲಿ 12 ಟೆಸ್ಟ್, 24 ಏಕದಿನ ಹಾಗೂ 1 ಟಿ20 ಕ್ರಿಕೆಟ್ ಪಂದ್ಯಗಳು ನಡೆದಿವೆ. 2014ರಲ್ಲಿ ಇಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ನಡೆದಿತ್ತು. ಹಾಲಿ ಇದ್ದ ಸ್ಟೇಡಿಯಮನ್ನು ಈಗಾಗಲೇ ಕೆಡವಲಾಗಿದೆ. ಎಲ್ ಅಂಡ್ ಟಿ ಸಂಸ್ಥೆ ನೂತನ ನಿರ್ಮಾಣದ ಗುತ್ತಿಗೆ ಪಡೆದಿದೆ. ಇನ್ನೆರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಂಡು ವಿಶ್ವದ ಬೃಹತ್ ಸ್ಟೇಡಿಯಂ ತಲೆಎತ್ತಲಿದೆ.