ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಟ್ರೋಫಿಗಾಗಿ ಪರಸ್ಪರ ಕಾದಾಡಲಿವೆ.
ಲಂಡನ್: 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬುಧವಾರ ಆರಂಭಗೊಳ್ಳಲಿದೆ. ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಟ್ರೋಫಿಗಾಗಿ ಪರಸ್ಪರ ಕಾದಾಡಲಿವೆ.
2023-25ರ ಅವಧಿಯಲ್ಲಿ ನಡೆದ 9 ತಂಡಗಳ ನಡುವಿನ ವಿವಿಧ ಟೆಸ್ಟ್ ಸರಣಿಗಳ ಬಳಿಕ ಅಗ್ರ-2 ಸ್ಥಾನ ಪಡೆದ ತಂಡಗಳು ಫೈನಲ್‌ಗೇರಿವೆ. ದ.ಆಫ್ರಿಕಾ 12 ಪಂದ್ಯಗಳಲ್ಲಿ 8 ಗೆದ್ದಿದ್ದು, ಶೇ.69.44 ಗೆಲುವಿನ ಪ್ರತಿಶತದೊಂದಿಗೆ ಅಗ್ರಸ್ಥಾನಿಯಾಗಿತ್ತು. ಆಸೀಸ್ 19 ಪಂದ್ಯಗಳಲ್ಲಿ 13ರಲ್ಲಿ ಜಯಗಳಿಸಿ ಶೇ.67.54 ಪ್ರತಿಶತದೊಂದಿಗೆ 2ನೇ ಸ್ಥಾನಿಯಾಗಿ ಫೈನಲ್‌ಗೇರಿದೆ. ಕಳೆದ ವರ್ಷಾಂತ್ಯದಲ್ಲಿ ನಡೆದ ಭಾರತ ವಿರುದ್ಧ ಸರಣಿಯಲ್ಲಿ ಗೆಲ್ಲುವ ಮೂಲಕ ಆಸೀಸ್ ಪ್ರಶಸ್ತಿ ಸುತ್ತಿಗೇರಿದೆ.
ಉಭಯ ತಂಡಗಳು ಈಗಾಗಲೇ ಫೈನಲ್‌ನಲ್ಲಿ ಆಡುವ 11ರ ಬಳಗವನ್ನು ಪ್ರಕಟಿಸಿದೆ. ದ.ಆಫ್ರಿಕಾಕ್ಕೆ ಹೋಲಿಸಿದರೆ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸೀಸ್ ಬಲಿಷ್ಠವಾಗಿ ತೋರುತ್ತಿದೆ. ಅನುಭವಿಗಳಾದ ಉಸ್ಮಾನ್ ಖವಾಜ, ಲಬುಶೇನ್, ಸ್ಟೀವ್ ಸ್ಮಿತ್, ಟ್ರ್ಯಾವಿಸ್ ಹೆಡ್, ಅಲೆಕ್ಸ್ ಕೇರಿ, ಕ್ಯಾಮರೂನ್ ಗ್ರೀನ್ ತಂಡದಲ್ಲಿದ್ದಾರೆ. ಆಸೀಸ್ ಪರ ಟೆಸ್ಟ್ ಇತಿಹಾಸದಲ್ಲೇ ಅಗ್ರ-10 ಗರಿಷ್ಠ ವಿಕೆಟ್ ಸರದಾರರ ಪಟ್ಟಿಯಲ್ಲಿ 4 ಮಂದಿ ಈ ಪಂದ್ಯದಲ್ಲಿ ಆಡಲಿದ್ದಾರೆ. ನೇಥನ್ ಲಯನ್, ಮಿಚೆಲ್ ಸ್ಟಾರ್ಕ್, ಕಮಿನ್ಸ್ ಹಾಗೂ ಹೇಜಲ್‌ವುಡ್ ದ.ಆಫ್ರಿಕಾ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
ಮತ್ತೊಂದೆಡೆ ತೆಂಬಾ ಬವುಮಾ ನಾಯಕತ್ವದ ದ.ಆಫ್ರಿಕಾ ತಂಡ ಆಸೀಸ್‌ಗೆ ತೀವ್ರ ಪೈಪೋಟಿ ನೀಡಲು ಕಾಯುತ್ತಿದೆ. ಮಾರ್ಕ್‌ರಮ್, ರ್‍ಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟ್ರಿಸ್ಟನ್ ಸ್ಟಬ್ಸ್, ಬೆಡಿಂಗ್‌ಹ್ಯಾಮ್, ಕೈಲ್ ವರೈನ್ ಬ್ಯಾಟಿಂಗ್ ಬಲ. ಬೌಲಿಂಗ್‌ನಲ್ಲಿ ಲುಂಗಿ ಎನ್‌ಗಿಡಿ, ಕಗಿಸೊ ರಬಾಡ, ಮಾರ್ಕೊ ಯಾನ್ಸನ್, ಕೇಶವ್ ಮಹಾರಾಜ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ(ಭಾರತೀಯ ಕಾಲಮಾನ)
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಆಸೀಸ್‌ಗೆ 11ನೇ, ದಕ್ಷಿಣ ಆಫ್ರಿಕಾಕ್ಕೆ 2ನೇ ಐಸಿಸಿ ಟ್ರೋಫಿ ಗೆಲುವಿನ ಗುರಿ
ಆಸೀಸ್ ಈ ವರೆಗೂ 13 ಬಾರಿ ಐಸಿಸಿ ಟೂರ್ನಿಗಳ ಫೈನಲ್‌ನಲ್ಲಿ ಆಡಿದ್ದು, 10 ಬಾರಿ ಚಾಂಪಿಯನ್ ಆಗಿದೆ. 6 ಬಾರಿ ಏಕದಿನ ವಿಶ್ವಕಪ್, 1 ಟಿ20 ವಿಶ್ವಕಪ್, 2 ಬಾರಿ ಚಾಂಪಿಯನ್ಸ್ ಟ್ರೋಫಿ ಹಾಗೂ 1 ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿ ಜಯಿಸಿದೆ. ದ.ಆಫ್ರಿಕಾ ಈ ವರೆಗೂ ಐಸಿಸಿ ಟ್ರೋಫಿ ಗೆದ್ದಿದ್ದು ಒಮ್ಮೆ ಮಾತ್ರ. 1998ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಕಳೆದ ವರ್ಷ ಟಿ20 ವಿಶ್ವಕಪ್ ಫೈನಲ್ ಸೋತಿದ್ದ ತಂಡ ಈ ಬಾರಿ ಟ್ರೋಫಿ ಗೆಲ್ಲುವ ಕಾತರದಲ್ಲಿದೆ.
113 ವರ್ಷಗಳ ಬಳಿಕ ಲಾರ್ಡ್ಸ್‌ನಲ್ಲಿ ಉಭಯ ತಂಡಗಳ ಮುಖಾಮುಖಿ
ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ 2ನೇ ಬಾರಿ ಮುಖಾಮುಖಿಯಾಗುತ್ತಿದೆ. ಈ ಹಿಂದೆ ಲಾರ್ಡ್ಸ್‌ನಲ್ಲಿ ಇತ್ತಂಡಗಳು ಪರಸ್ಪರ ಸೆಣಸಾಡಿದ್ದು 1912ರಲ್ಲಿ. ಆ ಪಂದ್ಯದಲ್ಲಿ ಆಸೀಸ್ 10 ವಿಕೆಟ್ ಜಯಗಳಿಸಿತ್ತು. ಆಸೀಸ್-ದ.ಆಫ್ರಿಕಾ ಈ ವರೆಗೂ 101 ಬಾರಿ ಮುಖಾಮುಖಿಯಾಗಿವೆ. ಆಸೀಸ್ 54ರಲ್ಲಿ ಗೆದ್ದಿದ್ದರೆ, ದ.ಆಫ್ರಿಕಾ 26 ಗೆಲುವು ಸಾಧಿಸಿದೆ. 21 ಪಂದ್ಯ ಡ್ರಾಗೊಂಡಿವೆ.
