ಸಿಡ್ನಿ[ಮೇ.08]: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಆಘಾತವೊಂದು ಎದುರಾಗಿದ್ದು, ಭುಜದ ನೋವಿನಿಂದ ಬಳಲುತ್ತಿದ್ದ ತಂಡದ ಪ್ರಮುಖ ವೇಗಿ ಜೇ. ರಿಚರ್ಡ್’ಸನ್ ತಂಡದಿಂದ ಹೊರಬಿದ್ದಿದ್ದಾರೆ. ಜೆ. ರಿಚರ್ಡ್’ಸನ್ ಬದಲಿಗೆ ಕೇನ್ ರಿಚರ್ಡ್’ಸನ್ ತಂಡ ಕೂಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಯುಎಇನಲ್ಲಿ ಪಾಕಿಸ್ತಾನ ವಿರುದ್ಧ ನಡೆದ 5 ಪಂದ್ಯಗಳ ಏಕದಿನ ಸರಣಿಯ ವೇಳೆ ಜೇ. ರಿಚರ್ಡ್’ಸನ್ ಭುಜದ ಗಾಯಕ್ಕೆ ತುತ್ತಾಗಿದ್ದರು. ಆದಾಗ್ಯೂ ವಿಶ್ವಕಪ್’ಗೂ ಮುನ್ನ ಜೇ. ರಿಚರ್ಡ್’ಸನ್ ಚೇತರಿಸಿಕೊಳ್ಳಬಹುದು ಎನ್ನುವ ವಿಶ್ವಾಸದಿಂದ ಆಸ್ಟ್ರೇಲಿಯಾ ಕ್ರಿಕೆಟ್ ಆಯ್ಕೆ ಸಮಿತಿ 15 ಆಟಗಾರರನ್ನೊಳಗೊಂಡ ವಿಶ್ವಕಪ್ ತಂಡದಲ್ಲಿ ಜೇ. ರಿಚರ್ಡ್’ಸನ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಇತ್ತೀಚೆಗೆ ಆಸ್ಟ್ರೇಲಿಯಾ ಕ್ರಿಕೆಟ್ ವೈದ್ಯಕೀಯ ಸಿಬ್ಬಂದಿ ನಡೆಸಿದ ಪರೀಕ್ಷೆಯಲ್ಲಿ ಜೇ. ರಿಚರ್ಡ್’ಸನ್ ತಮ್ಮ ಫಿಟ್ನೆಸ್ ಸಾಬೀತುಪಡಿಸಲು ವಿಫಲವಾದ ಹಿನ್ನಲೆಯಲ್ಲಿ ಅವರನ್ನು ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ.

ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

’ಇದು ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಹಾಗೂ ಜೇ. ರಿಚರ್ಡ್’ಸನ್ ಪಾಲಿಗೆ ನಿಜಕ್ಕೂ ಬೇಸರದ ಸಂಗತಿಯಾಗಿದೆ. ಜೆ. ಪುನಶ್ಚೇತನ ಶಿಬಿರದಲ್ಲಿ ಅತ್ಯದ್ಭುತವಾಗಿ ಸ್ಪಂದಿಸುತ್ತಿದ್ದರು. ಆದರೆ ನೆಟ್ಸ್’ನಲ್ಲಿ ಬೌಲಿಂಗ್ ಮಾಡುವ ವೇಳೆ ನಿರೀಕ್ಷೆ ತಕ್ಕಂತೆ ಬೌಲಿಂಗ್ ಮಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇನ್ನೂ ಕೆಲವು ವಾರಗಳ ಕಾಲ ಜೇ. ರಿಚರ್ಡ್’ಸನ್ ಪುನಶ್ಚೇತನ ಶಿಬಿರದಲ್ಲಿ ಮುಂದುವರೆಯಲಿದ್ದಾರೆ’ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಫಿಸಿಯೋ ಡೇವಿಡ್ ಬೀಕ್ಲೆ ಹೇಳಿದ್ದಾರೆ.

ಇದೀಗ 22 ವರ್ಷದ ಜೇ. ರಿಚರ್ಡ್’ಸನ್ ಸ್ಥಾನವನ್ನು 28 ವರ್ಷದ ಕೇನ್ ರಿಚರ್ಡ್’ಸನ್ ತುಂಬಲಿದ್ದಾರೆ. ಕೇನ್ ರಿಚರ್ಡ’ಸನ್ ಆಸ್ಟ್ರೇಲಿಯಾ ಪರ 20 ಏಕದಿನ ಪಂದ್ಯಗಳನ್ನಾಡಿದ್ದು 29 ವಿಕೆಟ್ ಕಬಳಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕೇನ್ 8 ವಿಕೆಟ್ ಕಬಳಿಸಿ ಗಮನಸೆಳೆದಿದ್ದರು. 

ವಿಶ್ವಕಪ್’ನಿಂದ ಸ್ಟಾರ್ ವೇಗಿ ಔಟ್, ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟಿಗನಿಗೆ ಚಾನ್ಸ್..!

ಆಸ್ಟ್ರೇಲಿಯಾ ತಂಡವು ಜೂನ್ 01ರಂದು ಆಫ್ಘಾನಿಸ್ತಾನ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ.  

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...