ಲಂಡನ್[ಮೇ.30]: ಆರಂಭಿಕ ಆಘಾತದ ಹೊರತಾಗಿಯೂ ಜೇಸನ್ ರಾಯ್,ಜೋ ರೂಟ್, ಇಯಾನ್ ಮಾರ್ಗನ್ ಹಾಗೂ ಬೆನ್ ಸ್ಟೋಕ್ಸ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡವು 311 ರನ್ ಬಾರಿಸಿದ್ದು ಹರಿಣಗಳಿಗೆ ಸವಾಲಿನ ಗುರಿ ನೀಡಿದೆ.

ಓವಲ್ ಮೈದಾನದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಫೀಲ್ಡಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಇಮ್ರಾನ್ ತಾಹಿರ್ ಮೊದಲ ಓವರ್‌ನಲ್ಲೇ ಜಾನಿ ಬೇರ್‌ಸ್ಟೋ ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಯಶಸ್ಸು ಒದಗಿಸಿಕೊಟ್ಟರು. ಆರಂಭಿಕ ಆಘಾತದ ಬಳಿಕ ಎಚ್ಚೆತ್ತುಕೊಂಡ ಆತಿಥೇಯ ಇಂಗ್ಲೆಂಡ್ ಎರಡನೇ ವಿಕೆಟ್‌ಗೆ ಜೇಸನ್ ರಾಯ್ ಹಾಗೂ ಜೋ ರೂಟ್ ಜೋಡಿ 106 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಜೇಸನ್ ರಾಯ್ 54 ರನ್ ಬಾರಿಸಿ ಆ್ಯಂಡಿಲೆ ಫೆಲುಕ್ವಾಯೋಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ರೂಟ್[51] ಅವರನ್ನು ರಬಾಡ ಪೆವಿಲಿಯನ್ ಗಟ್ಟಿದ್ದರು. ಈ ವೇಳೆ ಇಂಗ್ಲೆಂಡ್ ತಂಡದ ಮೊತ್ತ 19.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 111 ರನ್‌ಗಳಾಗಿದ್ದವು.

ವಿಶ್ವಕಪ್ 2019: ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಇಮ್ರಾನ್ ತಾಹಿರ್..!

ಎರಡು ದಿಢೀರ್ ವಿಕೆಟ್ ಕಳೆದು ಮತ್ತೆ ಆಘಾತಕ್ಕೆ ಒಳಗಾಗಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕ ಇಯಾನ್ ಮಾರ್ಗನ್[57] ಹಾಗೂ ಬೆನ್ ಸ್ಟೋಕ್ಸ್ ಜೋಡಿ ಆಸರೆಯಾಯಿತು. ನಾಲ್ಕನೇ ವಿಕೆಟ್ ಗೆ ಈ ಜೋಡಿ 106 ರನ್ ಗಳ ಜತೆಯಾಟವಾಡಿ ತಂಡದ ಮೊತ್ತವನ್ನು 210ರ ಗಡಿ ದಾಟಿಸಿತು. ಇಂಗ್ಲೆಂಡ್ ಪರ 200 ಪಂದ್ಯವಾಡುತ್ತಿರುವ ನಾಯಕ ಇಯಾನ್ ಮಾರ್ಗನ್ 60 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 57 ರನ್ ಬಾರಿಸಿ ತಾಹಿರ್ ಗೆ ಎರಡನೇ ಬಲಿ ಆದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೇವಲ 46 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ವಿಶ್ವಕಪ್ ಕ್ರಿಕೆಟ್’ನಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ನ ನಾಲ್ವರು ಬ್ಯಾಟ್ಸ್’ಮನ್ ಗಳು ಅರ್ಧಶತಕ ಪೂರೈಸಿದ ಸಾಧನೆ ಮಾಡಿದರು. ಇನ್ನು ಜೋಸ್ ಬಟ್ಲರ್[18] ಹಾಗೂ ಮೊಯಿನ್ ಅಲಿ[3] ಹೆಚ್ಚುಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ. ಕೊನೆಯ ಒಂದು ಓವರ್ ಇರುವವರೆಗೂ ಬ್ಯಾಟ್ ಬೀಸಿದ ಸ್ಟೋಕ್ಸ್ 79 ಎಸೆತಗಳಲ್ಲಿ 9 ಬೌಂಡರಿ ಸಹಿತ 89 ರನ್ ಬಾರಿಸಿ ಎನ್’ಗಿಡಿಗೆ ಮೂರನೇ ಬಲಿಯಾದರು. ಇದರೊಂದಿಗೆ ಇಂಗ್ಲೆಂಡ್ ಆಡಿದ ಕಳೆದ 5 ಪಂದ್ಯಗಳಲ್ಲೂ 300+ ರನ್ ಬಾರಿಸಿದ ಸಾಧನೆ ಮಾಡಿತು.     

ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ 3 ವಿಕೆಟ್ ಪಡೆದರೆ, ಇಮ್ರಾನ್ ತಾಹಿರ್ ಹಾಗೂ ಕಗಿಸೋ ರಬಾಡ 2 ಮತ್ತು ಆ್ಯಂಡಿಲೆ ಫೆಲುಕ್ವಾಯೋ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್: 318/8

ಬೆನ್ ಸ್ಟೊಕ್ಸ್: 89

ಲುಂಗಿ ಎನ್‌ಗಿಡಿ: 66/3

[* ವಿವರ ಅಪೂರ್ಣ]