ಮಾಸ್ಕೋ(ಜು.08): ರಷ್ಯಾ ಹಾಗೂ ಕ್ರೊವೇಷಿಯಾ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಫಿಪಾ ವಿಶ್ವಕಪ್ ಟೂರ್ನಿ ರೋಚಕ ಪಂದ್ಯವಾಗಿ ಮಾರ್ಪಟ್ಟಿದೆ. ಭಾರಿ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಪೆನಾಲ್ಟ್ ಶೂಟೌಟ್‌ ಮೂಲಕ ಕ್ರೊವೇಷಿಯಾ, ರಷ್ಯಾವನ್ನ ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದೆ.

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲಿ ಕ್ರೊವೇಷಿಯಾ ತಂಡ ರಷ್ಯಾವನ್ನು 4-3 (2-2)ರಲ್ಲಿ ರೋಚಕವಾಗಿ ಮಣಿಸಿ ಸೆಮಿಫೈನಲ್ ಗೆ  ಭರ್ಜರಿಯಾಗಿ ಲಗ್ಗೆ ಇಟ್ಟಿದೆ.

 

 

ಪಂದ್ಯದ ಕೇವಲ 31ನೇ ನಿಮಿಷದಲ್ಲೇ ಕ್ರೊವೇಷಿಯಾ ತಂಡ ಆರಂಭಿಕ ಮುನ್ನಡೆ ಸಾಧಿಸಿತು. ಕ್ರೊವೇಷಿಯಾ ಪರ 31 ನೇ ನಿಮಿಷದಲ್ಲಿ ಚೆರಿಶೇವ್ ಮೊದಲ ಗೋಲು ಭಾರಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಅದೇ ಧಾಟಿಯಲ್ಲಿ ತಿರುಗೇಟು ನೀಡಿದ ರಷ್ಯಾ ಕೇವಲ 8  ನಿಮಿಷಗಳ ಅಂತರದಲ್ಲೇ ಗೋಲು ಭಾರಿಸಿ ತಿರುಗೇಟು ನೀಡಿತು. ಪಂದ್ಯದ 39ನೇ ನಿಮಿಷದಲ್ಲಿ ರಷ್ಯಾದ ಕ್ರಮಾರಿಕ್ ಆಕರ್ಷಕ ಗೋಲು ಗಳಿಸಿ ತಂಡ ಸಮಬಲ ಸಾಧಿಸುವಂತೆ ನೋಡಿಕೊಂಡರು.

ಆ ಬಳಿಕ ಉಭಯ ತಂಡಗಳು ಗೋಲಿಗಾಗಿ ಹರಸಾಹವನ್ನೇ ಪಟ್ಟರೂ ಗೋಲು ಗಳಿಸುವಲ್ಲಿ ಉಭಯ ತಂಡಗಳು ವಿಫಲವಾದವು. ಹೀಗಾಗಿ ಪಂದ್ಯದ ಫಲಿತಾಂಶಕ್ಕಾಗಿ ಹೆಚ್ಚುವರಿ ಸಮಯ ತೆಗದುಕೊಳ್ಳಲಾಯಿತು. ಆಗ ಆರಂಭಿಕ ಮುನ್ನಡೆ ಸಾಧಿಸಿದ ರಷ್ಯಾ 100ನೇ ನಿಮಿಷದಲ್ಲೇ ಗೋಲು  ಬಾರಿ ಗೆಲುವಿನ ವಿಶ್ವಾಸ ಮೂಡಿಸಿತು. ಆದರೆ ತತ್ ಕ್ಷಣವೇ ತಿರುಗೇಟು ನೀಡಿದ ಕ್ರೊವೇಷಿಯಾ 115ನೇ ನಿಮಿಷದಲ್ಲಿ ಗೋಲು ಬಾರಿ ಸಮಬಲ ಸಾಧಿಸಿತು. ಆ ಮೂಲಕ ಉಭಯ ತಂಡಗಳು ಸಮಬಲ ಸಾಧಿಸಿದವು.

 

 

ಹೀಗಾಗಿ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಆಗ ರಷ್ಯಾ ಪರ ಬ್ರಾಂಜೋವಿಕ್, ಮೋಡ್ರಿಕ್, ವಿಡಾ ಗೋಲು ಗಳಿಸಿದರು. ಆದರೆ ಕ್ರೊವೇಷಿಯಾ ಪರ ಡ್ಜಾಗೋವ್, ಫರ್ನಾಂಡ್ಸ್, ಇಗ್ನಾಶೆವಿಚ್, ಕುಝಾಯೇವ್ ಒಟ್ಟು ನಾಲ್ಕು ಗೋಲು ಗಳಿಸಿ ಕ್ರೊವೇಷಿಯಾ  ಗೆಲುವಿಗೆ ಕಾರಣರಾದರು. ಅಂತಿಮವಾಗಿ ಕ್ರೊವೇಷಿಯಾ ತಂಡ ಅತಿಥೇಯ ರಷ್ಯಾ ತಂಡವನ್ನು 4-3 ಅಂತರದಲ್ಲಿ ರೋಚಕವಾಗಿ ಮಣಿಸಿ ಸೆಮಿಫೈನಲ್ ಗೇರಿತು. ಅತ್ಯಂತ ಪ್ರಬಲ ಹೋರಾಟದ ಹೊರತಾಗಿಯೂ ವಿಶ್ವಕಪ್ ಗೆಲ್ಲಬೇಕು ಎಂದು ಹೋರಾಡಿದ್ದ ರಷ್ಯಾ ನಿರಾಸೆಯೊಂದಿಗೆ ಟೂರ್ನಿಯಿಂದ ಹೊರ ಬಿತ್ತು. ಕಿಕ್ಕಿರಿದು ತುಂಬಿದ್ದ ತವರಿನ ಅಭಿಮಾನಿಗಳು ರಷ್ಯಾ ಸೋಲಿಗೆ ಕಣ್ಣೀರು ಹಾಕಿದರು.