Asianet Suvarna News Asianet Suvarna News

ಚಿನ್ನದ ಹುಡುಗ ನೀರಜ್‌ ಚೋಪ್ರಾ ಕೈತಪ್ಪಿದ ‘ಡೈಮಂಡ್‌’ ಕಿರೀಟ

ವಾರ್ಷಿಕ 14 ಸ್ಪರ್ಧೆಗಳನ್ನು ಒಳಗೊಂಡ ಪ್ರತಿಷ್ಠಿತ ಡೈಮಂಡ್‌ ಲೀಗ್‌ನ ಫೈನಲ್ಸ್‌ ಕೂಟ ಶನಿವಾರ ಮಧ್ಯರಾತ್ರಿ ನಡೆಯಿತು. 25 ವರ್ಷದ ನೀರಜ್‌ 2ನೇ ಪ್ರಯತ್ನದಲ್ಲಿ 83.80 ಮೀ. ದೂರ ದಾಖಲಿಸಿ 2ನೇ ಸ್ಥಾನಿಯಾದರು. ಮೊದಲ ಮತ್ತು 4ನೇ ಎಸೆತ ಫೌಲ್‌ ಮಾಡಿದ ನೀರಜ್‌, 3ನೇ ಪ್ರಯತ್ನದಲ್ಲಿ 81.37ಮೀ., 5ನೇ ಹಾಗೂ 6ನೇ ಪ್ರಯತ್ನದಲ್ಲಿ ಕ್ರಮವಾಗಿ 80.74ಮೀ., 80.90 ಮೀ. ದೂರ ಎಸೆದರು.

World Champion Javelin Thrower Neeraj Chopra finishes second in Diamond League Final kvn
Author
First Published Sep 18, 2023, 8:06 AM IST

ಯೂಜಿನ್‌(ಅಮೆರಿಕ): ಒಲಿಂಪಿಕ್ ಹಾಗೂ ಹಾಲಿ ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ ಅವರ ಸತತ 2ನೇ ಡೈಮಂಡ್‌ ಲೀಗ್‌ ಕಿರೀಟ ಗೆಲ್ಲುವ ಕನಸು ಕೈಗೂಡಲಿಲ್ಲ. ಕಳೆದ ವರ್ಷ ಚೊಚ್ಚಲ ಬಾರಿ ಡೈಮಂಡ್ ಲೀಗ್‌ ಚಾಂಪಿಯನ್‌ ಆಗಿ ಇತಿಹಾಸ ಸೃಷ್ಟಿಸಿದ್ದ ಭಾರತದ ತಾರಾ ಅಥ್ಲೀಟ್ ಈ ಬಾರಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ವಾರ್ಷಿಕ 14 ಸ್ಪರ್ಧೆಗಳನ್ನು ಒಳಗೊಂಡ ಪ್ರತಿಷ್ಠಿತ ಡೈಮಂಡ್‌ ಲೀಗ್‌ನ ಫೈನಲ್ಸ್‌ ಕೂಟ ಶನಿವಾರ ಮಧ್ಯರಾತ್ರಿ ನಡೆಯಿತು. 25 ವರ್ಷದ ನೀರಜ್‌ 2ನೇ ಪ್ರಯತ್ನದಲ್ಲಿ 83.80 ಮೀ. ದೂರ ದಾಖಲಿಸಿ 2ನೇ ಸ್ಥಾನಿಯಾದರು. ಮೊದಲ ಮತ್ತು 4ನೇ ಎಸೆತ ಫೌಲ್‌ ಮಾಡಿದ ನೀರಜ್‌, 3ನೇ ಪ್ರಯತ್ನದಲ್ಲಿ 81.37ಮೀ., 5ನೇ ಹಾಗೂ 6ನೇ ಪ್ರಯತ್ನದಲ್ಲಿ ಕ್ರಮವಾಗಿ 80.74ಮೀ., 80.90 ಮೀ. ದೂರ ಎಸೆದರು. ಈ ಋತುವಿನಲ್ಲಿ ಇದೇ ಮೊದಲ ಬಾರಿ ನೀರಜ್‌ 85 ಮೀ. ದೂರ ದಾಟಲು ವಿಫರಾದರು. ಕಳೆದ ಬಾರಿ ನೀರಜ್‌ ವಿರುದ್ಧ ಸೋತಿದ್ದ ಚೆಕ್‌ ಗಣರಾಜ್ಯದ ಜಾಕುವ್‌ ವಡ್ಲೆಜ್‌ 84.24 ಮೀಟರ್‌ನೊಂದಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದರೆ, ಫಿನ್ಲೆಂಡ್‌ನ ಓಲಿವರ್‌ ಹೆಲಂಡೆರ್‌ 83.74 ಮೀ. ದೂರದೊಂದಿಗೆ 3ನೇ ಸ್ಥಾನಿಯಾದರು.

Davis Cup 2023: ರೋಹನ್ ಬೋಪಣ್ಣಗೆ ಗೆಲುವಿನ ವಿದಾಯ..!

ವೈಯಕ್ತಿಕ ಶ್ರೇಷ್ಠ 89.94 ಮೀ. ಹಾಗೂ ಈ ಋತುವಿನಲ್ಲಿ 88.77 ಮೀ. ದೂರದ ದಾಖಲೆ ಹೊಂದಿರುವ ನೀರಜ್‌ ಈ ಬಾರಿ ಡೈಮಂಡ್‌ ಲೀಗ್‌ನ ದೋಹಾ ಹಾಗೂ ಲೂಸನ್‌ ಕೂಟಗಳಲ್ಲಿ ಅಗ್ರಸ್ಥಾನ ಪಡೆದಿದ್ದರು.

ರಾಜ್ಯ ಅಥ್ಲೆಟಿಕ್ಸ್‌: 2 ಚಿನ್ನ ಗೆದ್ದ ಉ.ಕನ್ನಡದ ಶಿವಾಜಿ

ಬೆಂಗಳೂರು: ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಯುವ ಅಥ್ಲೀಟ್‌ ಶಿವಾಜಿ ಮಾದಪ್ಪಗೌಡರ್‌ 2 ಚಿನ್ನದ ಪದಕ ಗೆದ್ದಿದ್ದಾರೆ. ಮೊದಲ ದಿನವಾದ ಶನಿವಾರ ಪುರುಷರ 5000 ಮೀ.ನಲ್ಲಿ ಬಂಗಾರ ಪಡೆದಿದ್ದ ಶಿವಾಜಿ, ಭಾನುವಾರ 10000 ಮೀ. ಸ್ಪರ್ಧೆಯಲ್ಲಿ 31 ನಿಮಿಷ 30.9 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ತಮ್ಮದಾಗಿಸಿಕೊಂಡರು. ಪುರುಷರ ಜಾವೆಲಿನ್‌ ಎಸೆತದಲ್ಲಿ ಕೆಎಸ್‌ಪಿಯ ಶಾರುಖ್‌, ಹ್ಯಾಮರ್‌ ಎಸೆತದಲ್ಲಿ ಕೊಪ್ಪಳದ ಸಚಿನ್‌, ಟ್ರಿಪಲ್‌ ಜಂಪ್‌ನಲ್ಲಿ ಮಂಡ್ಯದ ಮಹಾಂತ್‌, ಪೋಲ್‌ ವಾಲ್ಟ್‌ನಲ್ಲಿ ಯಾದಗಿರಿಯ ಜೆಸ್ಸನ್‌, 400 ಮೀ.ನಲ್ಲಿ ದ.ಕನ್ನಡದ ತೀರ್ಥೇಶ್‌, 110 ಮೀ. ಹರ್ಡಲ್ಸ್‌ನಲ್ಲಿ ಉಡುಪಿಯ ಸುಶಾಂತ್‌, 100 ಮೀ. ಓಟದಲ್ಲಿ ಶಿವಮೊಗ್ಗದ ಶರಣ್‌ದೀಪ್‌ ಚಿನ್ನ ಪಡೆದರು.

ಇನ್ನು, ಮಹಿಳೆಯರ ವಿಭಾಗದ 100 ಮೀ.ನಲ್ಲಿ ಸ್ನೇಹಾ, 100 ಮೀ. ಹರ್ಡಲ್ಸ್‌ನಲ್ಲಿ ಫ್ಯುಶನ್‌ನ ಮೇಧಾ ಕಾಮತ್‌, 10000 ಮೀ.ನಲ್ಲಿ ಕೆಎಸ್‌ಪಿಯ ತೇಜಸ್ವಿನಿ, ಹ್ಯಾಮರ್‌ ಎಸೆತದಲ್ಲಿ ಅಮೀನಾ, ಜಾವೆಲಿನ್‌ ಎಸೆತದಲ್ಲಿ ಉಡುಪಿಯ ಕರಿಶ್ಮಾ, ಟ್ರಿಪಲ್‌ ಜಂಪ್‌ನಲ್ಲಿ ಉಡುಪಿಯ ಪವಿತ್ರಾ ಬಂಗಾರ ಜಯಿಸಿದರು.

ಬೆಂಗ್ಳೂರಲ್ಲಿ ಅಂ.ರಾ. ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ

ಬೆಂಗಳೂರು: ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ(ಕೆಎಸ್‌ಸಿಎ), ಭಾರತೀಯ ಹಾಗೂ ಅಂ.ರಾ ಚೆಸ್ ಫೆಡರೇಶನ್‌ಗಳ ಆಶ್ರಯದಲ್ಲಿ ಬೆಂಗಳೂರು ನಗರ ಜಿಲ್ಲಾ ಚೆಸ್ ಸಂಸ್ಥೆ(ಬಿಯುಡಿಸಿಎ)ಯು ಇದೇ ಮೊದಲ ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ ಆಯೋಜಿಸಲು ಸಜ್ಜಾಗಿದೆ. 2024ರ ಜ.18 ರಿಂದ 26ರ ವರೆಗೆ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ.

50 ರನ್‌ಗೆ ಶ್ರೀಲಂಕಾ ಆಲೌಟ್ ಮಾಡಿ 23 ವರ್ಷಗಳ ಹಳೇ ಸೇಡು ತೀರಿಸಿದ ಭಾರತ!

ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ಹಾಗೂ ಬಿಯುಡಿಸಿಎ ಪದಾಧಿಕಾರಿಗಳು ಟೂರ್ನಿ ಆಯೋಜನೆ ಬಗ್ಗೆ ಮಾಹಿತಿ ನೀಡಿದರು. ಟೂರ್ನಿಯಲ್ಲಿ 50 ಗ್ರ್ಯಾಂಡ್‌ಮಾಸ್ಟರ್‌ಗಳು ಸೇರಿದಂತೆ 19 ದೇಶಗಳ 2000 ಆಟಗಾರರು ಭಾಗಿಯಾಗುವ ನಿರೀಕ್ಷೆಯಿದೆ. 3 ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಒಟ್ಟು 50 ಲಕ್ಷ ರೂ. ಬಹುಮಾನ ಮೊತ್ತ ಹೊಂದಿದ್ದು, ಕರ್ನಾಟಕದಿಂದ ಏಕೈಕ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್ ಆಗಿರುವ ಇಶಾ ಶರ್ಮಾರನ್ನು ಟೂರ್ನಿಯ ರಾಯಭಾರಿಯಾಗಿ ಘೋಷಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ಅಧ್ಯಕ್ಷ ಡಿ.ಪಿ.ಅನಂತ, ಕಾರ್ಯದರ್ಶಿ ಅರವಿಂದ್ ಶಾಸ್ತ್ರಿ, ಬಿಯುಡಿಸಿಎ ಅಧ್ಯಕ್ಷೆ ಸೌಮ್ಯ, ಇಶಾ ಶರ್ಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 

Follow Us:
Download App:
  • android
  • ios