ಚಾಂಪಿಯನ್ ಸಿಂಧುಗೆ ತವರಲ್ಲಿ ಭರ್ಜರಿ ಸ್ವಾಗತ!
ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ ಪಿವಿ ಸಿಂಧು ತವರಿಗೆ ಮರಳಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಂಧುಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಬಳಿಕ ಪ್ರಧಾನಿ ಮೋದಿ, ಕ್ರೀಡಾ ಸಚಿವ ಕಿರಣ್ ರಿಜಿಜು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ನವದೆಹಲಿ(ಆ.28): ಭಾರತದ ಮೊದಲ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧುಗೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಸ್ವಿಜರ್‌ಲೆಂಡ್‌ನಿಂದ ಸೋಮವಾರ ತಡರಾತ್ರಿ ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಂಧು ಅವರನ್ನು ನೂರಾರು ಅಭಿಮಾನಿಗಳು ಭರ ಮಾಡಿಕೊಂಡರು. ಅವರ ಜತೆ ಕೋಚ್ ಪುಲ್ಲೇಲಾ ಗೋಪಿಚಂದ್ ಸಹ ಇದ್ದರು.
ಇದನ್ನೂ ಓದಿ: ಸಿಂಧುಗೆ ಚಾಂಪಿಯನ್ ಕಿರೀಟ ತೊಡಿಸಿದ ಬಂಗಾರದ ಮನುಷ್ಯ!
ಸತತ ಪಂದ್ಯಗಳು, ಪ್ರಯಾಣದಿಂದ ದಣಿದಿದ್ದರೂ ಸಿಂಧು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಜತೆ ಸಂಭ್ರಮದಲ್ಲಿ ಭಾಗಿಯಾದರು. ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಧು, ‘ನನಗೆ ಬಹಳ ಸಂತೋಷವಾಗಿದೆ. ನನ್ನ ದೇಶದ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಈ ಗೆಲುವಿಗಾಗಿ ಬಹಳ ದಿನಗಳಿಂದ ಕಾಯುತ್ತಿದೆ. ಸ್ವಿಜರ್‌ಲೆಂಡ್‌ನಲ್ಲಿ ಸಂಭ್ರಮಿಸಲು ಹೆಚ್ಚು ಸಮಯ ಸಿಗಲಿಲ್ಲ. ಈಗ ಎಲ್ಲರೊಂದಿಗೆ ಸಂಭ್ರಮಿಸುತ್ತೇನೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಮತ್ತಷ್ಟುಶ್ರಮಿಸುತ್ತೇನೆ’ ಎಂದರು.
ಇದನ್ನೂ ಓದಿ: ನನ್ನನ್ನು ಪ್ರಶ್ನಿಸಿದವರಿಗೆ ಉತ್ತರ ನೀಡಿದ್ದೇನೆ: ಸಿಂಧು!
ಮಂಗಳವಾರ ಸಿಂಧು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರನ್ನು ಭೇಟಿ ಮಾಡಿದರು. ಸಿಂಧು ಕೊರಳಿಗೆ ವಿಶ್ವ ಚಾಂಪಿಯನ್‌ಶಿಪ್ ಪದಕ ಹಾಕಿ, ಮೋದಿ ಅಭಿನಂದಿಸಿದರು. ರಿಜಿಜು ಜತೆ 1 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ ಸಿಂಧು, ತಮ್ಮ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಸಿಂಧು ಜತೆ ಕೋಚ್‌ಗಳಾದ ಗೋಪಿಚಂದ್, ಕಿಮ್ ಜಿ ಹ್ಯುನ್, ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಮುಖ್ಯಸ್ಥ ಹಿಮಂತ ಬಿಸ್ವಾ ಶರ್ಮಾ ಹಾಗೂ ಅವರ ತಂದೆ ಪಿ.ವಿ.ರಮಣ ಇದ್ದರು.
ಕ್ರೀಡಾ ಸಚಿವರು ಸಿಂಧುಗೆ .10 ಲಕ್ಷ ಬಹುಮಾನ ನೀಡಿ ಅಭಿನಂದಿಸಿದರು. ಮಂಗಳವಾರ ಸಂಜೆ ಸಿಂಧು ತಮ್ಮ ತವರೂರು ಹೈದರಾಬಾದ್ಗೆ ತೆರಳಿದರು. ಅಲ್ಲೂ ಸಹ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿತು.