ವಿಶ್ವ ಬ್ಯಾಡ್ಮಿಂಟನ್: ಸಿಂಧು, ಪ್ರಣೀತ್‌ಗೆ ಪದಕ ಖಚಿತ!
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತದ ತಾರಾ ಶೆಟ್ಲರ್‌ಗಳಾದ ಸಿಂಧು ಹಾಗೂ ಪ್ರಣೀತ್ ಪದಕ ಖಚಿತಪಡಿಸಿಕೊಂಡಿದ್ದಾರೆ. ಸೆಮಿಫೈನಲ್ ಹಂತ ಪ್ರವೇಶಿಸೋ ಮೂಲಕ ಇತಿಹಾಸ ರಚಿಸಲು ಭಾರತದ ಬ್ಯಾಡ್ಮಿಂಟನ್ ಪಟುಗಳು ಸಜ್ಜಾಗಿದ್ದಾರೆ.
ಬಾಸೆಲ್(ಸ್ವಿಜರ್‌ಲೆಂಡ್): ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಬಿ. ಸಾಯಿ ಪ್ರಣೀತ್, ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, ಪದಕ ಖಚಿತಪಡಿಸಿದ್ದಾರೆ. ಕಳೆದ 2 ಆವೃತ್ತಿಗಳಲ್ಲಿ ಬೆಳ್ಳಿ, ಅದಕ್ಕೂ ಮುನ್ನ 2 ಕಂಚು ಗೆದ್ದಿದ್ದ ಸಿಂಧುಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇದು 5ನೇ ಪದಕವಾಗಲಿದೆ. ಇನ್ನು ಪ್ರಣೀತ್ 36 ವರ್ಷಗಳ ಬಳಿಕ ಪದಕ ಗೆದ್ದ ಭಾರತದ ಪುರುಷ ಶಟ್ಲರ್ ಎನಿಸಿಕೊಂಡಿದ್ದಾರೆ. 1983ರಲ್ಲಿ ಪ್ರಕಾಶ್ ಪಡುಕೋಣೆ ಕಂಚಿನ ಪದಕ ಗೆಲ್ಲುವ ಮೂಲಕ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಶಟ್ಲರ್ ಎನ್ನುವ ದಾಖಲೆ ಬರೆದಿದ್ದರು.
ಇದನ್ನೂ ಓದಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಲಿನ್ ಡಾನ್‌ಗೆ ಆಘಾತ ನೀಡಿದ ಪ್ರಣಯ್!
ತೈ ತ್ಸು ವಿರುದ್ಧ ಗೆದ್ದ ಸಿಂಧು: ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸಿಂಧು, ಮಾಜಿ ನಂ.1 ಹಾಗೂ ಏಷ್ಯನ್ ಗೇಮ್ಸ್ ಚಿನ್ನ ವಿಜೇತೆ ಚೈನೀಸ್ ತೈಪೆಯ ತೈ ತ್ಸು ಯಿಂಗ್ ವಿರುದ್ಧ 12-21, 23-21, 21-19 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಶನಿವಾರ ನಡೆಯುವ ಸೆಮೀಸ್‌ನಲ್ಲಿ ಸಿಂಧು, ಚೀನಾದ ಚೆನ್ ಯೂಫಿ ಇಲ್ಲವೇ ಡೆನ್ಮಾರ್ಕ್ನ ಮಿಯಾ ಬ್ಲಿಚ್‌ಫೆಲ್ಡೆಟ್ ವಿರುದ್ಧ ಸೆಣಸಲಿದ್ದಾರೆ.
ಇದನ್ನೂ ಓದಿ: ಗರಿಷ್ಠ ಸಂಭಾವನೆ: ಸಿಂಧು ಭಾರತದ ಶ್ರೀಮಂತ ಮಹಿಳಾ ಅಥ್ಲೀಟ್
ಕ್ರಿಸ್ಟಿಗೆ ಸೋಲುಣಿಸಿದ ಪ್ರಣೀತ್: ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಾಯಿ ಪ್ರಣೀತ್, ವಿಶ್ವ ನಂ.4, ಇಂಡೋನೇಷ್ಯಾದ ಜೋನಾಥನ್ ಕ್ರಿಸ್ಟೆವಿರುದ್ಧ 24-22, 21-14 ಗೇಮ್‌ಗಳಲ್ಲಿ ಗೆಲುವು ಪಡೆದರು. ಸೆಮೀಸ್‌ನಲ್ಲಿ ಪ್ರಣೀತ್, ವಿಶ್ವ ನಂ.1 ಶಟ್ಲರ್ ಜಪಾನ್‌ನ ಕೆಂಟೊ ಮೊಮೊಟಾರನ್ನು ಎದುರಿಸಲಿದ್ದಾರೆ.