World Championships ಮೊದಲ ಪ್ರಯತ್ನದಲ್ಲೇ ಫೈನಲ್‌ಗೆ ನೀರಜ್ ಚೋಪ್ರಾ, ರೋಹಿತ್ ಯಾದವ್ ಲಗ್ಗೆ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಶುಭಶುಕ್ರವಾರ
ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ ನೀರಜ್ ಚೋಪ್ರಾ, ರೋಹಿತ್ ಯಾದವ್
ಮಹಿಳಾ ಜಾವೆಲಿನ್ ಥ್ರೋನಲ್ಲಿ ಫೈನಲ್ ಪ್ರವೇಶಿಸಿರುವ ಅನ್ನು ರಾಣಿ
ಯುಜೀನ್(ಜು.22): ಭಾರತದ ಭರವಸೆಯ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಿರೀಕ್ಷೆಯಂತೆಯೇ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಟೋಕಿಯೋ ಒಲಿಂಪಿಕ್ಸ್ ಜಾವೆಲಿನ್ ಚಾಂಪಿಯನ್ ಇದೀಗ ಮೊದಲ ಪ್ರಯತ್ನದಲ್ಲೇ 88.39 ಮೀಟರ್ ದೂರ ಎಸೆಯುವ ಮೂಲಕ ಜಾವೆಲಿನ್ ಥ್ರೋ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೊಲಕ ಮೊದಲ ಬಾರಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಜಾವೆಲಿನ್ ಥ್ರೋ ಫೈನಲ್ ಪ್ರವೇಶಿಸಲು 83.50 ದೂರವನ್ನು ನಿಗದಿ ಪಡಿಸಲಾಗಿತ್ತು. ಅಥವಾ ಅರ್ಹತಾ ಸುತ್ತಿನಲ್ಲಿ ಗರಿಷ್ಠ ದೂರ ಎಸೆದ 12 ಅಥ್ಲೀಟ್‌ಗಳು ಫೈನಲ್ ಪ್ರವೇಶಿಸಲು ನಿಯಮವನ್ನು ರೂಪಿಸಲಾಗಿತ್ತು. ಆದರೆ ಇತ್ತೀಚೆಗಷ್ಟೇ ಸ್ವೀಡನ್‌ನ ಡೈಮಂಡ್ ಲೀಗ್‌ನಲ್ಲಿ 89.94 ಮೀ. ದೂರ ಎಸೆದು ದಾಖಲೆ ಬರೆದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಶುಕ್ರವಾರ ಅರ್ಹತಾ ಸುತ್ತಿನಲ್ಲಿ ಮೊದಲ ಪ್ರಯತ್ನದಲ್ಲೇ 88.39 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. 'ಎ' ಗುಂಪಿನ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ ಅನಾಯಾಸವಾಗಿ ಫೈನಲ್ ಪ್ರವೇಶಿಸಿದ್ದಾರೆ.
ನೀರಜ್ ಚೋಪ್ರಾ 2017ರಲ್ಲಿ ನಡೆದ ಲಂಡನ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 82.26 ಮೀಟರ್ ದೂರ ಎಸೆಯುವ ಮೂಲಕ ಫೈನಲ್‌ಗೇರುವ ಅವಕಾಶವನ್ನು ಕೈಚೆಲ್ಲಿದ್ದರು. ಇನ್ನು 2019ರಲ್ಲಿ ದೋಹಾದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊಣಕೈ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖರಾಗದ ಹಿನ್ನೆಲೆಯಲ್ಲಿ ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರಲಿಲ್ಲ.
ಯಾವುದೇ ಒತ್ತಡವಿಲ್ಲದೇ ಆಡಿ ಗೆದ್ದು ಬನ್ನಿ; ಕಾಮನ್‌ವೆಲ್ತ್ ಗೇಮ್ಸ್ ಅಥ್ಲೀಟ್‌ಗಳಿಗೆ ಮೋದಿ ಶುಭಹಾರೈಕೆ
ರೋಹಿತ್ ಯಾದವ್ ಕೂಡಾ ಫೈನಲ್‌ಗೆ ಲಗ್ಗೆ: ಇನ್ನು ಭಾರತದ ಮತ್ತೋರ್ವ ಜಾವೆಲಿನ್ ಥ್ರೋ ಪಟು ರೋಹಿತ್ ಯಾದವ್ ಕೂಡಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದ್ದಾರೆ. 'ಬಿ' ಗುಂಪಿನ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡಿದ್ದ ರೋಹಿತ್ ಯಾದವ್, 80.42 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ಭಾರತೀಯ ಕಾಲಮಾನ 7.05 ಗಂಟೆಯಿಂದ ಪುರುಷರ ಜಾವೆಲಿನ್ ಥ್ರೋ ಫೈನಲ್ ಪಂದ್ಯ ಜರುಗಲಿದ್ದು, ಇದೀಗ ಎಲ್ಲರ ಚಿತ್ತ ನೀರಜ್ ಚೋಪ್ರಾ ಹಾಗೂ ರೋಹಿತ್ ಯಾದವ್ ಮೇಲೆ ನೆಟ್ಟಿದೆ.
ವಿಶ್ವ ಅಥ್ಲೆಟಿಕ್ಸ್: ಸತತ 2ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟರಾಣಿ
ಜಾವೆಲಿನ್ ಎಸೆತದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಅನ್ನು ರಾಣಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. 2019ರಲ್ಲೂ ಫೈನಲ್‌ಗೆ ಲಗ್ಗೆ ಇಟ್ಟಿದ್ದ ಅವರು ಸತತ 2ನೇ ಬಾರಿ ಈ ಸಾಧನೆ ಮಾಡಿದ್ದಾರೆ. ಗುರುವಾರ ನಡೆದ ಮಹಿಳೆಯರ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನಲ್ಲಿ ಉತ್ತರ ಪ್ರದೇಶದ ಅನ್ನು ಕೊನೆ ಪ್ರಯತ್ನದಲ್ಲಿ 59.60 ಮೀ. ದೂರ ಎಸೆದು 8ನೇ ಸ್ಥಾನಿಯಾಗಿ ಪದಕ ಸುತ್ತಿಗೆ ಪ್ರವೇಶಿಸಿದರು.
ಮೊದಲ ಪ್ರಯತ್ನ ಪೌಲ್ ಆದ ಬಳಿಕ 2ನೇ ಪ್ರಯತ್ನದಲ್ಲಿ ಅವರು 55.35 ಮೀ. ದೂರಕ್ಕೆ ಜಾವೆಲಿನ್ ಎಸೆದರು. ಒಟ್ಟು 6 ಪ್ರಯತ್ನಗಳಲ್ಲಿ ಅವರು 60 ಮೀ. ಗುರಿ ತಲುಪಲು ವಿಫಲರಾದರು. 29 ವರ್ಷದ ಅನ್ನು ಮೇ ತಿಂಗಳಲ್ಲಿ ಜಮ್ಶೇಡ್‌ಪುರದಲ್ಲಿ ನಡೆದ ಇಂಡಿಯನ್ ಓಪನ್ ಜಾವೆಲಿನ್ ಎಸೆತದಲ್ಲಿ 63.82 ಮೀ. ದೂರಕ್ಕೆ ರಾಷ್ಟ್ರೀಯ ದಾಖಲೆ ಬರೆದಿದ್ದರು. ಶನಿವಾರ ಫೈನಲ್ ಸ್ಪರ್ಧೆ ನಡೆಯಲಿದೆ. ಇನ್ನು, ಮಹಿಳೆಯರ 5,000 ಮೀ. ಓಟದಲ್ಲಿ ಪಾರುಲ್ ಚೌಧರಿ 15 ನಿಮಿಷ 54.03 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಸೆಮಿಫೈನಲ್ ಪ್ರವೇಶಿಸಲು ವಿಫಲರಾದರು.