* ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಕ್ರೀಡಾಕೂಟಕ್ಕೆ ಅಧಿಕೃತ ತೆರೆ* ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದ್ದ ಅಮೆರಿಕ ಸಮಗ್ರ ಚಾಂಪಿಯನ್* ಒಟ್ಟು 33 ಪದಕಗಳನ್ನು ಜಯಿಸಿದ ಅಮೆರಿಕ

ಯುಜೀನ್‌(ಜು.26): ಜುಲೈ 15ಕ್ಕೆ ಆರಂಭಗೊಂಡ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಸೋಮವಾರ ಮುಕ್ತಾಯಗೊಂಡಿದ್ದು, ಆತಿಥೇಯ ಅಮೆರಿಕ ಅತೀ ಹೆಚ್ಚು ಪದಕಗಳೊಂದಿಗೆ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಇದೇ ಮೊದಲ ಬಾರಿ ಸಮಗ್ರ ಚಾಂಪಿಯನ್‌ ಪ್ರಶಸ್ತಿ ನೀಡಲಾಯಿತು. 328 ಅಂಕ ಗಳಿಸಿದ ಅಮೆರಿಕ ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಆತಿಥೇಯ ಅಮೆರಿಕ 13 ಚಿನ್ನ, 9 ಬೆಳ್ಳಿ ಹಾಗೂ 11 ಕಂಚು ಸೇರಿ ಒಟ್ಟು 33 ಪದಕಗಳೊಂದಿಗೆ ಅಗ್ರಸ್ಥಾನಿಯಾಯಿತು. 110 ಅಂಕಗಳೊಂದಿಗೆ ಜಮೈಕಾ(10 ಪದಕ), 106 ಅಂಕ ಸಂಪಾದಿಸಿದ ಇಥಿಯೋಪಿಯಾ(10 ಪದಕ) ಕ್ರಮವಾಗಿ 2 ಮತ್ತು 3ನೇ ಸ್ಥಾನಗಳನ್ನು ಪಡೆದವು. ಭಾರತ ಏಕೈಕ ಪದಕದೊಂದಿಗೆ 33ನೇ ಸ್ಥಾನ ಪಡೆಯಿತು.

ಈ ಬಾರಿ ಒಟ್ಟು 29 ರಾಷ್ಟ್ರಗಳು ಕನಿಷ್ಠ 1 ಚಿನ್ನದ ಪದಕ ಗೆದ್ದಿದ್ದು, ದಾಖಲೆ ಎನಿಸಿಕೊಂಡಿತು. ಈ ಮೊದಲು 2017ರಲ್ಲಿ 26 ದೇಶಗಳು ಬಂಗಾರ ಜಯಿಸಿದ್ದವು. ಈ ವರ್ಷ 81 ದೇಶಗಳ ಕನಿಷ್ಠ ಓರ್ವ ಅಥ್ಲೀಟ್‌ ಯಾವುದೇ ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ್ದು ಕೂಡಾ ದಾಖಲೆ ಪಟ್ಟಿಗೆ ಸೇರಿತು. 179 ದೇಶಗಳ 1700ಕ್ಕೂ ಅಥ್ಲೀಟ್‌ಗಳು ಈ ಬಾರಿ ಕೂಟದಲ್ಲಿ ಸ್ಪರ್ಧಿಸಿದರು.

ಕಾಮನ್‌ವೆಲ್ತ್‌ ಗೇಮ್ಸ್‌ ಉದ್ಘಾಟನೆ: ನೀರಜ್‌ ಭಾರತದ ಧ್ವಜಧಾರಿ?

ನವದೆಹಲಿ: ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಆರಂಭಕ್ಕೆ ಇನ್ನು ಕೇವಲ 2 ದಿನ ಬಾಕಿ ಇದ್ದು, ಜುಲೈ 28ರಂದು ನಡೆಯಲಿರುವ ಅದ್ಧೂರಿ ಉದ್ಘಾಟನಾ ಸಮಾರಂಭದ ವೇಳೆ ಭಾರತದ ಧ್ವಜ ಹಿಡಿದು ಮುನ್ನಡೆಯುವ ಅಥ್ಲೀಟ್‌ ಯಾರು ಎನ್ನುವುದನ್ನು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಇನ್ನೂ ಪ್ರಕಟಿಸಿಲ್ಲ. ಮೂಲಗಳ ಪ್ರಕಾರ ಒಲಿಂಪಿಕ್ಸ್‌ ಚಿನ್ನ ವಿಜೇತ, ಇತ್ತೀಚೆಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ ಭಾರತದ ಧ್ವಜಧಾರಿಯಾಗಬಹುದು ಎನ್ನಲಾಗಿದೆ. 

Neeraj Chopra ಗೆಲುವು ಭಾರತೀಯ ಕ್ರೀಡೆಯ ವಿಶೇಷ ಕ್ಷಣ: ಪ್ರಧಾನಿ ಮೋದಿ

ಒಂದು ವೇಳೆ ನೀರಜ್‌ ಚೋಪ್ರಾ ತಡವಾಗಿ ಬರ್ಮಿಂಗ್‌ಹ್ಯಾಮ್‌ ತಲುಪುದಾಗಿ ತಿಳಿಸಿ, ಉದ್ಘಾಟನಾ ಸಮಾರಂಭಕ್ಕೆ ಲಭ್ಯವಿರುವುದಿಲ್ಲ ಎಂದಾದರೆ ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ, ಮಾಜಿ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ.ಸಿಂಧು ಧ್ವಜಧಾರಿಣಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 2018ರ ಏಷ್ಯನ್‌ ಗೇಮ್ಸ್‌ನಲ್ಲಿ ನೀರಜ್‌ ಚೋಪ್ರಾ ಭಾರತದ ಧ್ವಜಧಾರಿಯಾಗಿದ್ದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌, ದಿಗ್ಗಜ ಬಾಕ್ಸರ್‌ ಮೇರಿ ಕೋಮ್‌ ಧ್ವಜಧಾರಿಗಳಾಗಿದ್ದರು.

ಕಾಮನ್ವೆಲ್ತ್‌ ರಿಲೇ ಓಟಗಾರ್ತಿ ಉದ್ದೀಪನ ಪರೀಕ್ಷೇಲಿ ಫೇಲ್‌!

ನವದೆಹಲಿ: ಕಾಮನ್ವೆಲ್ತ್‌ ಕ್ರೀಡಾಕೂಟಕ್ಕೆ ಭಾರತದ ಮಹಿಳೆಯರ 4*100 ಮೀ. ರಿಲೇ ತಂಡದಲ್ಲಿ ಸ್ಥಾನ ಪಡೆದಿದ್ದ ಓಟಗಾರ್ತಿಯೊಬ್ಬರು ಉದ್ದೀಪನ ಮದ್ದು ಸೇವಿಸಿರುವುದು ಡೋಪಿಂಗ್‌ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದರೊಂದಿಗೆ ಜುಲೈ 28ರಿಂದ ಆರಂಭಗೊಳ್ಳಲಿರುವ ಬರ್ಮಿಂಗ್‌ಹ್ಯಾಮ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಆದರೆ ಅಥ್ಲೀಟ್‌ ಹೆಸರನ್ನು ಭಾರತೀಯ ಒಲಿಂಪಿಕ್ಸ್‌ ಫೆಡರೇಶನ್‌(ಐಒಸಿ) ಬಹಿರಂಗಪಡಿಸಿಲ್ಲ.

4*100 ಮೀ. ತಂಡದಲ್ಲಿ ದ್ಯುತಿ ಚಂದ್‌, ಹಿಮಾ ದಾಸ್‌, ಸ್ರಬಾನಿ ನಂದಾ, ಎನ್‌ಎಸ್‌ ಸಿಮಿ, ಧನಲಕ್ಷ್ಮಿ ಹಾಗೂ ಜಿಲ್ನಾ ಸ್ಥಾನ ಪಡೆದಿದ್ದರು. ಈ ಪೈಕಿ ಧನಲಕ್ಷಿ ಇತ್ತೀಚೆಗಷ್ಟೇ ಡೋಪಿಂಗ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಕೂಟದಿಂದ ಹೊರಬಿದ್ದಿದ್ದರು.