* ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ನೀರಜ್ ಚೋಪ್ರಾ* ಜಾವೆಲಿನ್‌ ಥ್ರೋ ಫೈನಲ್‌ನಲ್ಲಿ 88.13 ಮೀಟರ್ ದೂರ ಎಸೆದ ನೀರಜ್‌ ಚೋಪ್ರಾ* ನೀರಜ್ ಚೋಪ್ರಾ ಸಾಧನೆಯನ್ನು ಗುಣಗಾನ ಮಾಡಿದ ದಿಗ್ಗಜರು

ನವದೆಹಲಿ(ಜು.25): ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ನೀರಜ್‌ ಚೋಪ್ರಾರ ಸಾಧನೆಯನ್ನು ನಿರ್ಗಮಿತ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಮಾಜಿ-ಹಾಲಿ ಕ್ರೀಡಾಪಟುಗಳು, ಸೆಲೆಬ್ರಿಟಿಗಳು, ವಿವಿಧ ರಾಜಕೀಯ ಗಣ್ಯರು ಕೊಂಡಾಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಕೂಟ ಆರಂಭಕ್ಕೂ ಮುನ್ನವೇ ಪದಕದ ನಿರೀಕ್ಷೆ ಮೂಡಿಸಿದ್ದ 24 ವರ್ಷದ ನೀರಜ್ ಚೋಪ್ರಾ, ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ನಾಲ್ಕನೇ ಪ್ರಯತ್ನದಲ್ಲಿ 88.13 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ನಮ್ಮ ಶ್ರೇಷ್ಠ ಅಥ್ಲೀಟ್‌ ನೀರಜ್‌ ಚೋಪ್ರಾ ವಿಶೇಷ ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ನೀರಜ್‌ಗೆ ಅಭಿನಂದನೆಗಳು. ಇದು ಭಾರತೀಯ ಕ್ರೀಡೆಗೆ ವಿಶೇಷ ಕ್ಷಣ. ನೀರಜ್‌ರ ಭವಿಷ್ಯ ಉಜ್ವಲವಾಗಿರಲಿ’ ಎಂದು ಶುಭ ಹಾರೈಸಿದ್ದಾರೆ.

Scroll to load tweet…

ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡಾ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ನೀರಜ್ ಚೋಪ್ರಾಗೆ ಅಭಿನಂದನೆಗಳು. ನಾವೆಲ್ಲರೂ ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. 

ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌ ಕೂಡಾ ಎಂದಿನಂತೆ ತಮ್ಮ ವಿನೂತನ ಶೈಲಿಯ ಟ್ವೀಟ್ ಮೂಲಕ ನೀರಜ್ ಚೋಪ್ರಾಗೆ ಶುಭ ಹಾರೈಸಿದ್ದಾರೆ. ಹೆಂಗೆ ಎಸೆಯುತ್ತಾನೆ ಇವನು ಎಂದು ಇಡೀ ಒಂದು ತಲೆಮಾರನ್ನೇ ಪ್ರಭಾವಿಸಿದ ನೀರಜ್‌ ಚೋಪ್ರಾಗೆ ಧನ್ಯವಾದಗಳು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಒಲಿಂಪಿಕ್ಸ್‌ ಚಾಂಪಿಯನ್‌ ಶೂಟರ್‌ ಅಭಿನವ್‌ ಬಿಂದ್ರಾ, ವಿಶ್ವ ಅಥ್ಲೆಟಿಕ್ಸ್‌ನ ಚೊಚ್ಚಲ ಪದಕ ವಿಜೇತ ಅಂಜು ಬಾಬಿ ಜಾರ್ಜ್‌‍, ದಿಗ್ಗಜ ಓಟಗಾರ್ತಿ ಪಿ.ಟಿ.ಉಷಾ, ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಸೇರಿ ನೂರಾರು ಗಣ್ಯರು ನೀರಜ್‌ ಸಾಧನೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Scroll to load tweet…

World Athletics Championship 6 ಮಂದಿ ಫೈನಲ್‌ಗೆ, 1 ಪದಕ: ಭಾರತದ ಶ್ರೇಷ್ಠ ಪ್ರದರ್ಶನ

ಅಥ್ಲೆಟಿಕ್ಸ್‌ನಲ್ಲಿ ಭಾರತದ ಬಂಗಾರದ ಮನುಷ್ಯ!

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ನೀರಜ್‌ ಚೋಪ್ರಾ ತಾವು ಸ್ಪರ್ಧಿಸಿದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲೆಲ್ಲಾ ಬಂಗಾರದ ಪದಕ ಗೆದ್ದ ಹಿರಿಮೆ ಹೊಂದಿದ್ದಾರೆ. 2016ರ ದಕ್ಷಿಣ ಏಷ್ಯನ್‌ ಗೇಮ್ಸ್‌, ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌, 2017ರ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌, 2018ರ ಗೋಲ್ಡ್‌ಕೋಸ್ಟ್‌ ಕಾಮನ್‌ವೆಲ್ತ್‌ ಗೇಮ್ಸ್‌, ಇಂಡೋನೇಷ್ಯಾ ಜಕಾರ್ತ ಏಷ್ಯನ್‌ ಗೇಮ್ಸ್‌, 2021ರ ಒಲಿಂಪಿಕ್ಸ್‌ನಲ್ಲಿ ಅವರು ಚಿನ್ನ ಗೆದ್ದ ದಾಖಲೆ ಹೊಂದಿದ್ದಾರೆ.

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಬಳಿಕ ನಿರ್ಮಾಣವಾದ ಅಂಕಿ-ಅಂಶ

1 ಭಾರತೀಯ: ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ

1 ಪುರುಷ: ವಿಶ್ವ ಅಥ್ಲೆಟಿಕ್ಸ್‌ ಕೂಟದಲ್ಲಿ ಪದಕ ಗಳಿಸಿದ ಮೊದಲ ಭಾರತೀಯ ಪುರುಷ

2ನೇ ವ್ಯಕ್ತಿ: ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಅಂಜುಬಾಬಿ ಬಳಿಕ ಪದಕ ಗೆದ್ದ ಎರಡನೇ ಭಾರತೀಯ

19 ವರ್ಷ: ಕ್ರೀಡಾಕೂಟದಲ್ಲಿ ಭಾರತಕ್ಕೆ ಸುದೀರ್ಘ ಅವಧಿಯ ಬಳಿಕ ಮೊದಲ ಪದಕ

2000ನೇ ಇಸ್ವಿ: ಇದೇ ಚಾಂಪಿಯನ್‌ ಶಿಪ್‌ನಲ್ಲಿ ಲಾಂಗ್‌ಜಪ್‌ನಲ್ಲಿ ಕಂಚು ಗೆದ್ದಿದ್ದ ಅಂಜು

88.13 ಮೀ.: ಬೆಳ್ಳಿ ಪದಕ ಗೆಲ್ಲಲು ನೀರಜ್‌ ಚೋಪ್ರಾ ಭರ್ಜಿ ಎಸೆದ ಒಟ್ಟು ದೂರ

87.58 ಮೀ.: ಒಲಿಂಪಿಕ್ಸ್‌ನಲ್ಲಿ ನೀರಜ್‌ ಚಿನ್ನದ ಪದಕ ಗೆದ್ದಾಗ ಭರ್ಜಿ ಎಸೆದಿದ್ದ ಅಂತರ