ಭಾರತ ಹಾಗೂ ಬಾಂಗ್ಲಾದೇಶ ನಡುವಿನ ‘ಕ್ರಿಕೆಟ್‌ ಯುದ್ಧ’ ಮತ್ತೊಂದು ತಿರುವು ಪಡೆದುಕೊಂಡಿದೆ. ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ ಆಡಲು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಭಾನುವಾರ ಪ್ರಕಟಿಸಿದೆ.

ಢಾಕಾ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ‘ಕ್ರಿಕೆಟ್‌ ಯುದ್ಧ’ ಮತ್ತೊಂದು ತಿರುವು ಪಡೆದುಕೊಂಡಿದೆ. ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ ಆಡಲು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಭಾನುವಾರ ಪ್ರಕಟಿಸಿದೆ. ಜೊತೆಗೆ ತನ್ನ ಪಂದ್ಯಗಳನ್ನು ವಿಶ್ವಕಪ್‌ಗೆ ಜಂಟಿ ಆತಿಥ್ಯ ವಹಿಸಿಕೊಂಡಿರುವ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಗೆ (ಐಸಿಸಿ) ಬಿಸಿಬಿ ಮನವಿ ಸಲ್ಲಿಸಿದೆ. ಮೂಲಗಳ ಪ್ರಕಾರ, ಬಾಂಗ್ಲಾದ ಮನವಿಯನ್ನು ಐಸಿಸಿ ಒಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಾಂಗ್ಲಾ ವೇಗಿ ಮುಸ್ತಾಫಿಜುರ್‌ ರಹಮಾನ್‌ರನ್ನು ಮುಂಬರುವ ಐಪಿಎಲ್‌ನಿಂದ ಹೊರಹಾಕಿದ್ದಕ್ಕೆ ಭಾರತ ವಿರುದ್ಧ ಆಕ್ರೋಶಗೊಂಡಿರುವ ಬಾಂಗ್ಲಾ, ಈ ರೀತಿ ತಿರುಗೇಟು ನೀಡುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಬಾಂಗ್ಲಾ ಸರ್ಕಾರ ಮಧ್ಯಪ್ರವೇಶ: ಬಿಸಿಬಿ ಭಾನುವಾರ ತುರ್ತು ಸಭೆ ಕರೆದು ಮುಸ್ತಾಫಿಜುರ್‌ ಹಾಗೂ ಟಿ20 ವಿಶ್ವಕಪ್‌ ವಿಚಾರಗಳ ಬಗ್ಗೆ ಚರ್ಚಿಸಿತು. ಬಿಸಿಸಿಐ ನಡೆಯನ್ನು ಖಂಡಿಸೋಣ, ಯಾವುದೇ ಕಠಿಣ ನಿರ್ಧಾರ ಬೇಡ ಎಂದು ಬಿಸಿಬಿ ಅಧಿಕಾರಿಗಳು ಚರ್ಚಿಸುತ್ತಿದ್ದಾಗ, ಬಾಂಗ್ಲಾದ ಕ್ರೀಡಾ ಸಚಿವಾಲಯದ ಸಲಹೆಗಾರ ಅಶ್ರಫ್‌ ನಜ್ರುಲ್ ಮಧ್ಯಪ್ರವೇಶಿಸಿ ಭಾರತದಲ್ಲಿ ವಿಶ್ವಕಪ್‌ ಪಂದ್ಯಗಳನ್ನು ಆಡದಂತೆ ತಾಕೀತು ಮಾಡಿದರು ಎಂದು ತಿಳಿದುಬಂದಿದೆ. ಸರ್ಕಾರದ ಸೂಚನೆಯಂತೆ ಬಿಸಿಬಿ, ಐಸಿಸಿಗೆ ತನ್ನ ನಿಲುವು ಸ್ಪಷ್ಟಪಡಿಸಿದೆ.

‘ಪ್ರಸ್ತುತ ಪರಿಸ್ಥಿತಿ, ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಸಂಪೂರ್ಣ ಮೌಲ್ಯಮಾಪನದ ನಂತರ ಹಾಗೂ ಬಾಂಗ್ಲಾ ಸರ್ಕಾರದ ಸಲಹೆಯ ಬಳಿಕ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸದೆ ಇರಲು ನಿರ್ಧರಿಸಿದ್ದೇವೆ. ನಮ್ಮ ತೀರ್ಮಾನವನ್ನು ಐಸಿಸಿಗೆ ತಿಳಿಸಿ, ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸಲು ಕೋರಲಾಗಿದೆ’ ಎಂದು ಬಿಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಭೆ ಬಳಿಕ ಮಾತನಾಡಿರುವ ಬಿಸಿಬಿ ಅಧಿಕಾರಿಯೊಬ್ಬರು, ‘ನಮ್ಮ ಒಬ್ಬ ಆಟಗಾರನಿಗೆ ಐಪಿಎಲ್‌ ವೇಳೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಭಾರತ ಹೇಳಿರುವಾಗ, ವಿಶ್ವಕಪ್‌ನಲ್ಲಿ ಆಡಲು ನಮ್ಮ ಇಡೀ ತಂಡವನ್ನು ಕಳುಹಿಸಲು ಹೇಗೆ ಸಾಧ್ಯ’ ಎಂದಿದ್ದಾರೆ. ಆದರೆ, ಮುಸ್ತಾಫಿಜುರ್‌ರನ್ನು ತಂಡದಿಂದ ಕೈಬಿಡುವಂತೆ ಕೆಕೆಆರ್‌ಗೆ ಸೂಚಿಸುವಾಗ ಬಿಸಿಸಿಐ ಎಲ್ಲೂ ರಕ್ಷಣೆ ನೀಡುವ ಬಗ್ಗೆ ಉಲ್ಲೇಖಿಸಿಲ್ಲ.

ಬಾಂಗ್ಲಾದೇಶ ತನ್ನ ಗುಂಪು ಹಂತದ ಪಂದ್ಯಗಳನ್ನು ಕೋಲ್ಕತಾ ಹಾಗೂ ಮುಂಬೈನಲ್ಲಿ ಆಡಬೇಕಿದೆ. ಒಂದು ವೇಳೆ ಐಸಿಸಿ ಬಾಂಗ್ಲಾದ ಪಂದ್ಯಗಳನ್ನು ಸ್ಥಳಾಂತರಿಸಲು ನಿರ್ಧರಿಸಿದರೆ, ಲಂಕಾ ಕ್ರಿಕೆಟ್‌ ಮಂಡಳಿ ಮೇಲೆ ಒತ್ತಡ ಬೀಳಲಿದೆ. ಐಸಿಸಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಒಂದೆರಡು ದಿನಗಳಲ್ಲಿ ನಿರ್ಧಾರ ಹೊರಬೀಳಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಒಂದೊಮ್ಮೆ ಸ್ಥಳಾಂತರಕ್ಕೆ ಐಸಿಸಿ ಒಪ್ಪದಿದ್ದರೆ, ಬಾಂಗ್ಲಾಗೆ ಭಾರತಕ್ಕೆ ಬರುವುದನ್ನು ಬಿಟ್ಟು ಬೇರೆ ಆಯ್ಕೆ ಇರುವುದಿಲ್ಲ.

ಗುಲಾಮಗಿರಿಯ ದಿನಗಳು ಮುಗಿದಿವೆ: ಅಶ್ರಫ್‌ ನಜ್ರುಲ್‌

ಭಾರತಕ್ಕೆ ಪ್ರಯಾಣಿಸದಂತೆ ಬಾಂಗ್ಲಾ ಕ್ರಿಕೆಟ್‌ ಮಂಡಳಿಗೆ ತಾಕೀತು ಮಾಡಿದ ಬಾಂಗ್ಲಾ ಕ್ರೀಡಾ ಸಚಿವಾಲಯದ ಸಲಹೆಗಾರ ಅಶ್ರಫ್‌ ನಜ್ರುಲ್‌ ಮಾಧ್ಯಮಗಳ ಜೊತೆ ಮಾತನಾಡಿ ‘ಭಾರತದಲ್ಲಿ ನಮಗೆ ಸುರಕ್ಷತೆ ಇಲ್ಲ. ಹೀಗಾಗಿ ನಮ್ಮ ಪಂದ್ಯಗಳನ್ನು ಸ್ಥಳಾಂತರಿಸಬೇಕು. ಬಾಂಗ್ಲಾದ ಒಬ್ಬ ಆಟಗಾರ ಐಪಿಎಲ್‌ನಲ್ಲಿ ಆಡುವುದರಿಂದ ಸಮಸ್ಯೆ ಆಗುವುದಾದರೆ, ನಮ್ಮ ಇಡೀ ತಂಡ ಭಾರತದಲ್ಲಿ ಆಡುವುದು ಸುರಕ್ಷಿತವಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ’ ಎಂದಿದ್ದಾರೆ. ಬಾಂಗ್ಲಾದಲ್ಲಿ ಐಪಿಎಲ್‌

ಪಂದ್ಯಗಳ ಪ್ರಸಾರವಿಲ್ಲ?

ಮುಸ್ತಾಫಿಜುರ್‌ರನ್ನು ಐಪಿಎಲ್‌ನಿಂದ ಹೊರಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅಶ್ರಫ್, ಬಾಂಗ್ಲಾದೇಶದಲ್ಲಿ ಐಪಿಎಲ್‌ ಪ್ರಸಾರವನ್ನು ನಿಷೇಧಿಸುವಂತೆ ಕರೆ ನೀಡಿದ್ದಾರೆ. ‘ಐಪಿಎಲ್‌ ಪಂದ್ಯಗಳನ್ನು ಬಾಂಗ್ಲಾದಲ್ಲಿ ಪ್ರಸಾರ ಮಾಡಬಾರದು. ಈ ಬಗ್ಗೆ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಜೊತೆ ಮಾತನಾಡುತ್ತೇನೆ’ ಎಂದು ಅಶ್ರಫ್‌ ಹೇಳಿದ್ದಾರೆ.