ಜೈಪುರ[ಮೇ.11]: ಚೊಚ್ಚಲ ಮಹಿಳಾ ಟಿ20 ಚಾಲೆಂಜರ್‌ (ಮಹಿಳಾ ಐಪಿಎಲ್‌) ಫೈನಲ್‌ ಪಂದ್ಯ ಶನಿವಾರ ಇಲ್ಲಿನ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪ್ರಶಸ್ತಿಗಾಗಿ ಮಿಥಾಲಿರಾಜ್‌ ನೇತೃತ್ವದ ವೆಲಾಸಿಟಿ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಸೂಪರ್‌ನೋವಾಸ್‌ ತಂಡಗಳು ಸೆಣಸಲಿವೆ.

ಗುರುವಾರ ನಡೆದ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ತಂಡಗಳು, ಇದೀಗ ಮತ್ತೆ ಎದುರಾಗಲಿದ್ದು ಮಹಿಳಾ ಕ್ರಿಕೆಟ್‌ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಸೂಪರ್‌ನೋವಾಸ್‌ ತನ್ನ ಬ್ಯಾಟಿಂಗ್‌ ಪಡೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಚಾಮರಿ ಅಟಾಪಟ್ಟು, ಜೆಮಿಮಾ ರೋಡ್ರಿಗಸ್‌, ಹರ್ಮನ್‌ಪ್ರೀತ್‌, ಆಲ್ರೌಂಡರ್‌ಗಳಾದ ನತಾಲಿ ಶೀವರ್‌, ಸೋಫಿ ಡಿವೈನ್‌ ದೊಡ್ಡ ಇನ್ನಿಂಗ್ಸ್‌ ಆಡಬಲ್ಲರು.

ವೆಲಾಸಿಟಿ ತಂಡ ಪ್ರಬಲ ಬೌಲರ್‌ಗಳನ್ನು ಹೊಂದಿದೆ. ಶಿಖಾ ಪಾಂಡೆ, ಏಕ್ತಾ ಬಿಶ್ತಾ, ಅಮೆಲಿ ಕೆರ್‌, ಜಹನಾರ ಆಲಂ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ಮಿಥಾಲಿ ಹಾಗೂ ವೇದಾ ಹಲವರಿಂದ ಟೀಕೆಗೆ ಗುರಿಯಾಗಿದ್ದರು. ಈ ಇಬ್ಬರ ನಿಧಾನಗತಿ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್‌ ಆಟಗಾರ್ತಿ ಡೇನಿಯಲ್‌ ವ್ಯಾಟ್‌ ಮೇಲೆ ಹೆಚ್ಚು ಒತ್ತಡ ಬೀಳಲಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ

 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಸ್ಥಳ: ಜೈಪುರ