ವಿಶ್ವ ಮಹಿಳಾ ಬಾಕ್ಸಿಂಗ್ ಕೂಟದಲ್ಲಿ ಭಾರತೀಯ ಬಾಕ್ಸರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಮೇರಿ ಕೋಮ್ ಸೇರಿದಂತೆ ನಾಲ್ವರು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ 4 ಪದಕ ಖಚಿತಪಡಿಸಿದ್ದಾರೆ.

ನವದೆಹಲಿ(ನ.21): ಮೇರಿ ಕೋಮ್‌ ಮಂಗಳವಾರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಇತಿಹಾಸದ ಅತ್ಯಂತ ಯಶಸ್ವಿ ಬಾಕ್ಸರ್‌ ಎನ್ನುವ ಹಿರಿಮೆಗೆ ಪಾತ್ರರಾದರು. 48 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿರುವ ಮೇರಿ ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇದು ಅವರ 7ನೇ ಪದಕವಾಗಲಿದೆ. ಚೀನಾದ ವು ಯು ವಿರುದ್ಧ ಮೇರಿ 5-0 ಅಂತರದಲ್ಲಿ ಗೆಲುವು ಸಾಧಿಸಿದರು. 2001ರ ಆವೃತ್ತಿಯಲ್ಲಿ ಬೆಳ್ಳಿ ಗೆದ್ದಿದ್ದ ಮೇರಿ, ಆ ಬಳಿಕ 5 ಬಾರಿ ಚಿನ್ನ ಹೆಕ್ಕಿದ್ದರು. ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕೊನೆ ಬಾರಿಗೆ ಪದಕ ಗೆದ್ದಿದ್ದು 2010ರಲ್ಲಿ.

ಮೇರಿ ಜತೆ ಇನ್ನೂ ಮೂರು ಬಾಕ್ಸರ್‌ಗಳು ಅಂತಿಮ 4ರ ಘಟ್ಟಕ್ಕೆ ಕಾಲಿಟ್ಟು ಪದಕ ಖಚಿತಪಡಿಸಿಕೊಂಡರು. ಲೋವ್ಲಿನಾ (69 ಕೆ.ಜಿ), ಸೋನಿಯಾ ಚಹಲ್‌ (57 ಕೆ.ಜಿ) ಹಾಗೂ ಸಿಮ್ರನ್‌ಜಿತ್‌ ಕೌರ್‌ (64 ಕೆ.ಜಿ) ವಿಭಾಗದಲ್ಲಿ ಸೆಮೀಸ್‌ಗೇರಿದರು. ಮೂವರು ಬಾಕ್ಸರ್‌ಗಳಿಗೆ ಇದು ಮೊದಲ ವಿಶ್ವ ಚಾಂಪಿಯನ್‌ಶಿಪ್‌. 21 ವರ್ಷದ ಲೊವ್ಲಿನಾ ಆಸ್ಪ್ರೇಲಿಯಾ ಸ್ಕಾಟ್‌ ಫ್ರಾನ್ಸೆಸ್‌ ವಿರುದ್ಧ 5-0ಯಲ್ಲಿ ಗೆದ್ದರೆ, 21ರ ಸೋನಿಯಾ ಕೊಲಂಬಿಯಾದ ಮೆಸೆಲಾ ಎನಿ ವಿರುದ್ಧ 4-1ರಲ್ಲಿ ಜಯಿಸಿದರು. 

23 ವರ್ಷದ ಸಿಮ್ರನ್‌ಜಿತ್‌ ಐರ್ಲೆಂಡ್‌ನ ಆಮಿ ಸಾರಾ ವಿರುದ್ಧ 3-1ರಲ್ಲಿ ಗೆಲುವು ಪಡೆದರು. ಭಾರತದ 8 ಬಾಕ್ಸರ್‌ಗಳು ಮಂಗಳವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಕಣಕ್ಕಿಳಿದಿದ್ದರು. ಪಿಂಕಿ ರಾಣಿ(51 ಕೆ.ಜಿ), ಮನೀಶಾ (54 ಕೆ.ಜಿ), ಕಚಾರಿ (81 ಕೆ.ಜಿ) ಹಾಗೂ ಸೀಮಾ ಪೂನಿಯಾ (+81 ಕೆ.ಜಿ) ಸೋಲುಂಡರು.