Asianet Suvarna News Asianet Suvarna News

ಕರ್ನಾಟಕದ ಕೈತಪ್ಪಿದ ಟಿ20 ಟ್ರೋಫಿ!

ಇತಿಹಾಸ ರಚಿಸಲು ಮುಂದಾಗಿದ್ದ ಕರ್ನಾಟಕ ಮಹಿಳಾ ಟಿ20 ತಂಡ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಅಂತಿಮ ಓವರ್‌ನಲ್ಲಿ 6 ರನ್ ಗಳಿಸಲು ಪರದಾಡಿ ಸೋಲು ಅನುಭವಿಸಿದೆ. ಈ ಮೂಲಕ ಭಾರಿ ನಿರಾಸೆ ಅನುಭವಿಸಿದೆ.

Women t20 Punjab beat Karnataka by 4 runs and clinch the title
Author
Bengaluru, First Published Mar 14, 2019, 9:48 AM IST

ಮುಂಬೈ(ಮಾ.14): ಗೆಲುವಿಗೆ 131 ರನ್‌ ಗುರಿ ಬೆನ್ನತ್ತಿದ ಕರ್ನಾಟಕ, ಪಂಜಾಬ್‌ ವಿರುದ್ಧ ಅಂತಿಮ ಓವರ್‌ನಲ್ಲಿ 6 ರನ್‌ ಗಳಿಸಲು ಪರದಾಡಿ ಟ್ರೋಫಿ ಕೈಚೆಲ್ಲಿತು. ರಾಷ್ಟ್ರೀಯ ಟಿ20 ಲೀಗ್‌ ಫೈನಲ್‌ನಲ್ಲಿ 4 ರನ್‌ ಸೋಲು ಕಂಡು ರಾಜ್ಯ ತಂಡ ನಿರಾಸೆ ಅನುಭವಿಸಿತು. ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಜಸಿಯಾ ಅಖ್ತರ್‌ರ ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 131 ರನ್‌ ಗಳಿಸಿತು.

ಇದನ್ನೂ ಓದಿ: ಮುಷ್ತಾಕ್‌ ಅಲಿ ಟಿ20: ಇಂದು ಕರ್ನಾಟಕ-ಮಹಾರಾಷ್ಟ್ರ ಫೈನಲ್‌

ಸವಾಲಿನ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ವಿ.ಆರ್‌.ವನಿತಾ ಸ್ಫೋಟಕ ಆರಂಭ ಒದಗಿಸುವ ಸೂಚನೆ ನೀಡಿದರು. ಒಂದು ಸಿಕ್ಸರ್‌ ಹಾಗೂ ಬೌಂಡರಿಯೊಂದಿಗೆ 13 ರನ್‌ ಗಳಿಸಿದ ವನಿತಾ, ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಶುಭಾ (14), ನಾಯಕಿ ರಕ್ಷಿತಾ (07) ಬೇಗನೆ ಔಟಾದರು. ಆದರೆ ದಿವ್ಯಾ ಹಾಗೂ ಪ್ರತ್ಯುಷಾ 4ನೇ ವಿಕೆಟ್‌ಗೆ ಉತ್ತಮ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. 44 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್‌ನೊಂದಿಗೆ 41 ರನ್‌ ಗಳಿಸಿದ ದಿವ್ಯಾ, ತಂಡದ ಗೆಲುವಿಗೆ 29 ರನ್‌ ಅಗತ್ಯವಿದ್ದಾಗ ಔಟಾದರು. 19ನೆÜ ಓವರ್‌ನ ಕೊನೆ ಎಸೆತದಲ್ಲಿ ಆಕಾಂಕ್ಷ ಕೊಹ್ಲಿ (03) ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್‌ ಚೆಲ್ಲಿದ್ದು, ಕರ್ನಾಟಕಕ್ಕೆ ಹಿನ್ನಡೆಯಾಯಿತು.

ಇದನ್ನೂ ಓದಿ: ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಸಿಂಗ್‌

2 ಓವರ್‌ನಲ್ಲಿ 20ಕ್ಕೂ ಹೆಚ್ಚು ರನ್‌ ಚಚ್ಚಿಸಿಕೊಂಡಿದ್ದ ನೀಲಂ ಬಿಷ್ತ್ 20ನೇ ಓವರ್‌ ಎಸೆಯುವ ಅವಕಾಶ ಪಡೆದರು. ವಿಕೆಟ್‌ ಕೀಪರ್‌ ಪ್ರತ್ಯೂಷಾ ಮೊದಲ ಎಸೆತದಲ್ಲಿ ರನ್‌ ಗಳಿಸಲಿಲ್ಲ. 2ನೇ ಎಸೆತದಲ್ಲಿ ಅವರು ಔಟಾದರು. 3ನೇ ಎಸೆತದಲ್ಲಿ ಸಿಮ್ರನ್‌ ಹೆನ್ರಿ 1 ರನ್‌ ಗಳಿಸಿ ಪ್ರತ್ಯುಷಾಗೆ ಸ್ಟ್ರೈಕ್ ನೀಡಿದರು. ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದಿದ್ದ ಪ್ರತ್ಯುಷಾ ಕೊನೆ 3 ಎಸೆತಗಳಲ್ಲಿ ಒಂದೂ ರನ್‌ ಗಳಿಸಲಿಲ್ಲ. ಕರ್ನಾಟಕ ಕೊನೆ ಓವರಲ್ಲಿ ಕೇವಲ 1 ರನ್‌ ಗಳಿಸಿ ಸೋಲಿಗೆ ಶರಣಾಯಿತು. ಪ್ರತ್ಯುಷಾ 31 ಎಸೆತಗಳಲ್ಲಿ 35 ರನ್‌ ಗಳಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಕಳಪೆ ಕ್ಷೇತ್ರರಕ್ಷಣೆ: ಇದಕ್ಕೂ ಮುನ್ನ ಪಂಜಾಬ್‌ನ ಆರಂಭಿಕ ಆಟಗಾರ್ತಿ ಜಸಿಯಾಗೆ 5ಕ್ಕೂ ಹೆಚ್ಚು ಜೀವದಾನ ದೊರೆಯಿತು. ಕರ್ನಾಟಕ ಆಟಗಾರ್ತಿಯರ ಕ್ಷೇತ್ರರಕ್ಷಣೆ ಅತ್ಯಂತ ಕಳಪೆಯಾಗಿತ್ತು. ಇದರ ಸಂಪೂರ್ಣ ಲಾಭವೆತ್ತಿದ ಜಸಿಯಾ 54 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ನೊಂದಿಗೆ 56 ರನ್‌ ಗಳಿಸಿದರು. ನೀಲಂ ಬಿಷ್ತ್ 14 ಎಸೆತಗಳಲ್ಲಿ 27 ರನ್‌ ಸಿಡಿಸಿ ತಂಡಕ್ಕೆ ನೆರವಾದರು.

ಸ್ಕೋರ್‌: ಪಂಜಾಬ್‌ 20 ಓವರ್‌ಗಳಲ್ಲಿ 131/7 (ಜಸಿಯಾ 56, ನೀಲಂ 27, ಸಿಮ್ರನ್‌ 2-26), ಕರ್ನಾಟಕ 20 ಓವರ್‌ಗಳಲ್ಲಿ 127/7 (ದಿವ್ಯಾ 41, ಪ್ರತ್ಯುಷಾ 35, ಸುನಿತಾ 2-19)
 

Follow Us:
Download App:
  • android
  • ios