ಜೈಪುರ(ಮೇ.06): ಮಹಿಳಾ ಐಪಿಎಲ್ ಮೊದಲ ಪ್ರದರ್ಶನ ಪಂದ್ಯದಲ್ಲಿ ಟ್ರೈಲ್‌ಬ್ಲೇಜರ್ಸ್ ಶುಭಾರಂಭ ಮಾಡಿದೆ. ನಾಯಕಿ ಸ್ಮೃತಿ ಮಂಧಾನ ಸಿಡಿಸಿದ 90 ರನ್ ಹಾಗೂ ಕನ್ನಡಿತಿ ರಾಜೇಶ್ವರಿ ಗಾಯಕ್ವಾಡ್ ಸ್ಪಿನ್ ಮೋಡಿಯಿಂದ ಟ್ರೈಲ್‌ಬ್ಲೇಜರ್ಸ್, ಎದುರಾಳಿ  ಸೂಪರ್‌ನೋವಾಸ್ ವಿರುದ್ಧ 2 ರೋಚಕ ರನ್ ಗೆಲುವು ಸಾಧಿಸಿದೆ.

ಗೆಲುವಿಗೆ 141 ರನ್ ಟಾರ್ಗೆಟ್ ಪಡೆದ ಸೂಪರ್‌ನೋವಾಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು. ಪ್ರಿಯಾ ಪೂನಿಯಾ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಜೇಮಿ ರೋಡಿಗ್ರಸ್ ಹಾಗೂ ಚಾಮಾರಿ ಅಟ್ಟಪಟ್ಟು 49 ರನ್‌ಗಳ ಜೊತೆಯಾಟ ನೀಡಿದರು. ರೋಡಿಗ್ರಸ್ 24 ರನ್ ಸಿಡಿಸಿ ಔಟಾದರೆ, ಚಾಮಾರಿ 26 ರನ್ ಕಾಣಿಕೆ ನೀಡಿದರು.

ನಾಯಕಿ ಹರ್ಮನ್‌ಪ್ರೀತ್ ಕೌರ್ ತಂಡಕ್ಕೆ ಆಸರೆಯಾದರೆ, ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ನತಾಲಿ ಕ್ಸೇವಿಯರ್ 1 ರನ್ ಸಿಡಿಸಿ ಔಟಾದರು. ಇನ್ನು ಸೋಫಿ ಡಿವೈನ್ ಹಾಗೂ ಹರ್ಮನ್ ತಿರುಗೇಟು ನೀಡೋ ಪ್ರಯತ್ನ ಮಾಡಿದರು. ಹರ್ಮನ್‌ಪ್ರೀತ್ ಕೌರ್ ಏಕಾಂಗಿ ಹೋರಾಟ ನೀಡಿದರೂ ಗೆಲವು ಸಾಧಿಸಲಿಲ್ಲ. ಡಿವೈನ್ 32 ರನ್ ಸಿಡಿಸಿ ಔಟಾದರು. ಹರ್ಮನ್‌ಪ್ರೀತ್ ಕೌರ್ ಅಜೇಯ 46 ರನ್ ಸಿಡಿಸಿದರು. 6 ವಿಕೆಟ್ ನಷ್ಟಕ್ಕೆ 138 ರನ್ ಸಿಡಿಸಿ ಕೇವಲ 2 ರನ್‌ಗಳೊಂದಿಗೆ ಸೋಲೊಪ್ಪಿಕೊಂಡಿತು.