Asianet Suvarna News Asianet Suvarna News

Wimbledon 2022 ಎಲೈನಾ ರಬೈಕೆನಾ ವಿಂಬಲ್ಡನ್‌ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌..!

* ಚೊಚ್ಚಲ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ಎಲೈನಾ ರಬೈಕೆನಾ
* ವಿಂಬಲ್ಡನ್ ಮಹಿಳಾ ಸಿಂಗಲ್ಸ್‌ನಲ್ಲಿ ಹೊಸ ಚಾಂಪಿಯನ್ ಉದಯ
* ಕಜಕಸ್ತಾನದ 23 ವರ್ಷದ ಎಲೈನಾ ರಬೈಕೆನಾ ಮುಡಿಗೆ ವಿಂಬಲ್ಡನ್ ಗುರಿ

Wimbledon Womens Singles Final Elena Rybakina Beats Ons Jabeur To Win Maiden Grand Slam Title kvn
Author
Bengaluru, First Published Jul 10, 2022, 9:21 AM IST

ಲಂಡನ್(ಜು.10)‌: ಮಹಿಳಾ ಗ್ರ್ಯಾನ್‌ ಸ್ಲಾಂ ಟೆನಿಸ್‌ನಲ್ಲಿ ಹೊಸ ಹೊಸ ಚಾಂಪಿಯನ್ನರು ಉದಯಿಸುವುದು ಸಾಮಾನ್ಯವಾಗಿದೆ. ಕಳೆದೊಂದು ದಶಕದಲ್ಲಿ ಹತ್ತಕ್ಕೂ ಹೆಚ್ಚು ಆಟಗಾರ್ತಿಯರು ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆದ್ದು ಸಂಭ್ರಮಿಸಿದ್ದಾರೆ. ಆ ಸಾಲಿಗೆ ಕಜಕಸ್ತಾನದ 23 ವರ್ಷದ ಎಲೈನಾ ರಬೈಕೆನಾ (Elena Rybakina) ಸೇರ್ಪಡೆಗೊಂಡಿದ್ದಾರೆ. ವಿಂಬಲ್ಡನ್‌ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮುವ ಮೂಲಕ ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಜೊತೆಗೆ ಗ್ರ್ಯಾನ್‌ ಸ್ಲಾಂ ಗೆದ್ದ ಕಜಕಸ್ತಾನದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೂ ಪಾತ್ರರಾದರು.

ಶನಿವಾರ ನಡೆದ ಫೈನಲ್‌ನಲ್ಲಿ ಟ್ಯುನೀಶಿಯಾದ ಒನ್ಸ್‌ ಜಬುರ್‌ (Ons Jabeur) ವಿರುದ್ಧ 3-6, 6-2, 6-2 ಸೆಟ್‌ಗಳಲ್ಲಿ ಜಯಗಳಿಸಿದರು. ಸುಮಾರು 2 ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಮೊದಲ ಸೆಟ್‌ನಲ್ಲಿ ಅಬ್ಬರಿಸಿದ ಜಬುರ್‌, 2ನೇ ಸೆಟ್‌ನಲ್ಲಿ ಮಂಕಾದರು. ಅನಿರೀಕ್ಷಿತವಾಗಿ ಪುಟಿದೆದ್ದ ರಬೈಕೆನಾ, ಸುಲಭವಾಗಿ ಸೆಟ್‌ ಜಯಿಸಿದರು. 3ನೇ ಸೆಟ್‌ನ ಆರಂಭದಲ್ಲೇ ಜಬುರ್‌ ಮೇಲೆ ಪ್ರಾಬಲ್ಯ ಮೆರೆದ ರಬೈಕೆನಾ, ಯಾವುದೇ ಹಂತದಲ್ಲೂ ಹಿಂದೆ ಬೀಳಲಿಲ್ಲ. ಆಕ್ರಮಣಕಾರಿ ಆಟವಾಡಿದ ಕಜಕಸ್ತಾನದ ಆಟಗಾರ್ತಿ ಗೆದ್ದ ಬಳಿಕ ಬಹಳ ಸರಳವಾಗಿ ಸಂಭ್ರಮಿಸಿದರು. ಜಬುರ್‌ ಕಣ್ಣೀರಿಡುತ್ತಲ್ಲೇ ರನ್ನರ್‌-ಅಪ್‌ ಟ್ರೋಫಿ ಸ್ವೀಕರಿಸಿದರು.

ರಬೈಕೆನಾಗೆ ವರವಾದ ಎತ್ತರ!

ರಷ್ಯಾದಲ್ಲಿ ಜನಿಸಿದ ರಬೈಕೆನಾ ಬಾಲ್ಯದಲ್ಲಿ ಜಿಮ್ನಾಸ್ಟಿಕ್ಸ್‌ ಮತ್ತು ಐಸ್‌ ಸ್ಕೇಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಅವರ ವಯಸ್ಸಿಗೆ ಮೀರಿದ ಎತ್ತರವಿದ್ದ ಕಾರಣ ಈ ಕ್ರೀಡೆಗಳಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಅವರ ತಂದೆ ತಮಗೆ ಇಷ್ಟ ಎನ್ನುವ ಕಾರಣಕ್ಕೆ ಮಗಳನ್ನು ಟೆನಿಸ್‌ಗೆ ಪರಿಚಯಿಸಿದರು. 6 ವರ್ಷವಿದ್ದಾಗ ಟೆನಿಸ್‌ ಆಡಲು ಆರಂಭಿಸಿದ ರಬೈಕೆನಾ ಒಂದೊಂದೇ ಹಂತ ಮೇಲೇರುತ್ತ ಸಾಗಿದರು. ರಬೈಕೆನಾಗೆ 19 ವರ್ಷ ತುಂಬಿದ ಬಳಿಕ ಕಜಕಸ್ತಾನದಿಂದ ನಾಗರಿಕತ್ವದ ಆಫರ್‌ ದೊರೆಯಿತು. ಅದನ್ನು ಸ್ವೀಕರಿಸಿ ಕಜಕಸ್ತಾನದ ಪ್ರಜೆಯಾದ ರಬೈಕೆನಾ ಟೆನಿಸ್‌ನಲ್ಲಿ ಮತ್ತಷ್ಟು ಎತ್ತರಕ್ಕೇರಿದರು.

Wimbledon Final ವಿಂಬಲ್ಡನ್ ಟ್ರೋಫಿಗಾಗಿಂದು ಜಬುರ್-ರೈಬಕಿನಾ ಸೆಣಸಾಟ

ಗೆಲುವು ಅನಿರೀಕ್ಷಿತ

ಟೂರ್ನಿಯಲ್ಲಿ ಆಟ ಆರಂಭಿಸಿದಾಗ 2ನೇ ವಾರಕ್ಕೆ ಕಾಲಿಡುವ ನಂಬಿಕೆ ಇರಲಿಲ್ಲ. ಆದರೆ ವಿಂಬಲ್ಡನ್‌ ಟ್ರೋಫಿಯೊಂದಿಗೆ ನಿಂತಿದ್ದೇನೆ. ನನ್ನ ಈ ಸಾಧನೆ ಬಗ್ಗೆ ಬಹಳ ಹೆಮ್ಮೆ ಇದೆ. ನನಗೆ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ.

-ಎಲೈನಾ ರಬೈಕೆನಾ, ವಿಂಬಲ್ಡನ್‌ ಚಾಂಪಿಯನ್‌

ನಿರಾಸೆ ಆಗಿದೆ

ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಡಿದ ನಾನು ಪ್ರಶಸ್ತಿ ಗೆಲ್ಲದೆ ಹಿಂದಿರುಗುತ್ತೇನೆ ಎನ್ನುವ ನಂಬಿಕೆ ಇತ್ತು. ಸೋಲಿನಿಂದ ಬೇಸರವಾಗಿದೆ. ಮುಂದಿನ ವರ್ಷ ಟ್ರೋಫಿ ಗೆಲ್ಲಲು ಪ್ರಯತ್ನ ನಡೆಸಲಿದ್ದೇನೆ. ಎಲೈನಾಗೆ ಅಭಿನಂದನೆ.

-ಒನ್ಸ್‌ ಜಬುರ್‌, ವಿಂಬಲ್ಡನ್‌ ರನ್ನರ್‌-ಅಪ್‌

19.44 ಕೋಟಿ ರುಪಾಯಿ: ರಬೈಕೆನಾಗೆ ದೊರೆತ ಬಹುಮಾನ ಮೊತ್ತ.

9.74 ಕೋಟಿ ರು: ಜಬುರ್‌ಗೆ ಬಹುಮಾನ ಮೊತ್ತ.

ಮಲೇಷ್ಯಾ ಮಾಸ್ಟ​ರ್ಸ್ ಬ್ಯಾಡ್ಮಿಂಟನ್‌: ಪ್ರಣಯ್‌ಗೆ ಸೆಮಿಫೈನಲ್‌ನಲ್ಲಿ ಸೋಲು

ಕೌಲಾಲಂಪುರ: ಭಾರತದ ತಾರಾ ಶಟ್ಲರ್‌ ಎಚ್‌.ಎಸ್‌.ಪ್ರಣಯ್‌ ಮಲೇಷ್ಯಾ ಮಾಸ್ಟ​ರ್ಸ್ ಸೂಪರ್‌ 500 ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಹಾಂಕಾಂಗ್‌ನ ಲಾಂಗ್‌ ಆ್ಯಂಗುಸ್‌ ವಿರುದ್ಧ 21-17, 9-21, 17-21 ಗೇಮ್‌ಗಳಲ್ಲಿ ಸೋಲುಂಡರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿತು. 

ಒಂದು ಗಂಟೆ ನಾಲ್ಕು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮೊದಲ ಗೇಮ್‌ ಗೆದ್ದ ಪ್ರಣಯ್‌, ಬಳಿಕ ನಿರಂತರವಾಗಿ ತಪ್ಪುಗಳನ್ನು ಮಾಡುತ್ತ ಸುಲಭವಾಗಿ ಅಂಕಗಳನ್ನು ಬಿಟ್ಟುಕೊಟ್ಟರು. ಹಲವು ಸಂದರ್ಭದಲ್ಲಿ ಉತ್ತಮ ಮುನ್ನಡೆ ಹೊಂದಿದ್ದರೂ ಅದರ ಲಾಭವೆತ್ತದೆ ಪಂದ್ಯ ಕೈಚೆಲ್ಲಿದರು.

Follow Us:
Download App:
  • android
  • ios