Asianet Suvarna News Asianet Suvarna News

Wimbledon Final ವಿಂಬಲ್ಡನ್ ಟ್ರೋಫಿಗಾಗಿಂದು ಜಬುರ್-ರೈಬಕಿನಾ ಸೆಣಸಾಟ

* ವಿಂಬಲ್ಡನ್ ಮಹಿಳಾ ಸಿಂಗಲ್ಸ್‌ ಫೈನಲ್‌ಗೆ ಕ್ಷಣಗಣನೆ
* ವಿಂಬಲ್ಡನ್ ಟ್ರೋಫಿಗಾಗಿಂದು ಜಬುರ್-ರೈಬಕಿನಾ ಫೈಟ್
* ಇಬ್ಬರಿಗೂ ಇದು ಚೊಚ್ಚಲ ಗ್ರ್ಯಾನ್‌ಸ್ಲಾಂ ಫೈನಲ್‌

Ons Jabeur vs Elena Rybakina Set for Wimbledon 2022 Womens Singles Final kvn
Author
Bengaluru, First Published Jul 9, 2022, 9:51 AM IST

ಲಂಡನ್(ಜು.09)‌: 2022ರ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ ಫೈನಲ್‌ ಪಂದ್ಯ ಶನಿವಾರ ನಡೆಯಲಿದ್ದು, ಟ್ಯುನೀಶಿಯಾದ ಒನ್ಸ್‌ ಜಬುರ್‌ ಹಾಗೂ ಕಜಕಸ್ತಾನದ ಎಲೆನಾ ರೈಬಕಿನಾ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ. ಇಬ್ಬರಿಗೂ ಇದು ಚೊಚ್ಚಲ ಗ್ರ್ಯಾನ್‌ಸ್ಲಾಂ ಫೈನಲ್‌ ಆಗಿದ್ದು, ಮೊದಲ ಅವಕಾಶದಲ್ಲೇ ಪ್ರಶಸ್ತಿ ಗೆಲ್ಲಲು ಹೋರಾಡಲಿದ್ದಾರೆ.

ಯಾವುದೇ ಗ್ರ್ಯಾನ್‌ಸ್ಲಾಂನಲ್ಲಿ ಫೈನಲ್‌ಗೇರಿದ ಮೊದಲ ಅರಬ್‌ ಹಾಗೂ ಉತ್ತರ ಆಫ್ರಿಕನ್‌ ಆಟಗಾರ್ತಿ ಎನಿಸಿಕೊಂಡಿರುವ 27 ವರ್ಷದ ಜಬುರ್‌ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೆಚ್ಚಾಗಿ ಶ್ರೇಯಾಂಕ ರಹಿತ ಆಟಗಾರ್ತಿಯರ ವಿರುದ್ಧದೇ ಆಡಿದ್ದ ಜಬುರ್‌ ಗುರುವಾರ ನಡೆದ ಮೊದಲ ಸೆಮಿಫೈನಲ್‌ ಹಣಾಹಣಿಯಲ್ಲಿ ವಿಶ್ವ ರಾರ‍ಯಂಕಿಂಗ್‌ನಲ್ಲಿ 103ನೇ ಸ್ಥಾನದಲ್ಲಿರುವ ಜರ್ಮನಿಯ ಟಾಟನ ಮರಿಯಾ ಅವರನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು.

ಇನ್ನು, 2015ರ ಬಳಿಕ ವಿಂಬಲ್ಡನ್‌ ಫೈನಲ್‌ಗೇರಿದ (Wimbledon Final) ಅತಿ ಕಿರಿಯ ಅಟಗಾರ್ತಿ ಎನಿಸಿಕೊಂಡಿರುವ 23ರ ರೈಬಕಿನಾ, ಗ್ರ್ಯಾನ್‌ಸ್ಲಾಂ ಫೈನಲ್‌ ತಲುಪಿದ ಮೊದಲ ಕಜಕಸ್ತಾನದ ಆಟಗಾರ್ತಿಯೂ ಹೌದು. ಟೂರ್ನಿಯಲ್ಲಿ ಕೇವಲ ಒಂದು ಸೆಟ್‌ ಮಾತ್ರ ಕಳೆದುಕೊಂಡಿರುವ ಅವರು ಸೆಮೀಸ್‌ನಲ್ಲಿ 16ನೇ ಶ್ರೇಯಾಂಕಿತೆ, 2019ರ ಚಾಂಪಿಯನ್‌ ಸಿಮೋನಾ ಹಾಲೆಪ್‌ರನ್ನು ಸೋಲಿಸಿ ಗಮನ ಸೆಳೆದಿದ್ದರು.

19.44 ಕೋಟಿ ರುಪಾಯಿ: ವಿಜೇತರಿಗೆ ಸಿಗುವ ಬಹುಮಾನ ಮೊತ್ತ

9.74 ಕೋಟಿ ರುಪಾಯಿ: ರನ್ನರ್‌-ಅಪ್‌ಗೆ ಸಿಗುವ ಬಹುಮಾನ ಮೊತ್ತ

ಜೋಕೋ ಫೈನಲ್‌ಗೆ ಲಗ್ಗೆ

ಲಂಡನ್‌: 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ನೋವಾಕ್‌ ಜೋಕೋವಿಚ್‌ (Novak Djokovic) ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ (Wimbledon Tennis Tournament) 8ನೇ ಬಾರಿ ಫೈನಲ್‌ ಪ್ರವೇಶಿಸಿದ್ದು, ಸತತ 4ನೇ ಪ್ರಶಸ್ತಿ ಗೆಲ್ಲುವತ್ತ ಮುನ್ನಡೆದಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಜೋಕೋವಿಚ್‌ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ 12ನೇ ಶ್ರೇಯಾಂಕಿತ ಬ್ರಿಟನ್‌ನ ಕ್ಯಾಮರೂನ್‌ ನೂರಿ ವಿರುದ್ಧ 2​-6, 6​-3, 6-​2, 6​-4 ಸೆಟ್‌ಗಳಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು. ಇದರೊಂದಿಗೆ ಚೊಚ್ಚಲ ಬಾರಿ ಫೈನಲ್‌ ತಲುಪುವ 26ರ ನೂರಿ ಕನಸು ಭಗ್ನಗೊಂಡಿತು. ಕಳೆದ ಮೂರೂ ಆವೃತ್ತಿಗಳಲ್ಲಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಜೋಕೋವಿಚ್‌ ಭಾನುವಾರ ಫೈನಲ್‌ನಲ್ಲಿ ಆಸ್ಪ್ರೇಲಿಯಾದ ನಿಕ್‌ ಕಿರಿಯೋಸ್‌ ವಿರುದ್ಧ ಸೆಣಸಾಡಲಿದ್ದಾರೆ.

Wimbledon 2022: ರೋಚಕವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟ ರಾಫೆಲ್ ನಡಾಲ್

ಕಿರಿಯೋಸ್‌ ಕ್ವಾರ್ಟರ್‌ನಲ್ಲಿ ಚಿಲಿಯ ಕ್ರಿಸ್ಟಿಯನ್‌ ಗರಿನ್‌ ವಿರುದ್ಧ 6-4,6-3,7-6(5)ರಲ್ಲಿ ಗೆದ್ದು ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಸೆಮೀಸ್‌ಗೇರಿದ್ದರು. ಸೆಮೀಸ್‌ನಲ್ಲಿ ಅವರು ದಾಖಲೆಯ 22 ಗ್ರ್ಯಾನ್‌ ಸ್ಲಾಂಗಳ ಒಡೆಯ ಸ್ಪೇನ್‌ನ ರಾಫೆಲ್‌ ನಡಾಲ್‌ ವಿರುದ್ಧ ಆಡಬೇಕಿತ್ತು. ಆದರೆ ಪಕ್ಕೆ ನೋವಿನಿಂದಾಗಿ ನಡಾಲ್‌ ಟೂರ್ನಿಯಿಂದ ಹೊರನಡೆದ ಕಾರಣ ಕಿರಿಯೋಸ್‌ ವಾಕ್‌ ಓವರ್‌ ಪಡೆದು ನೇರವಾಗಿ ಫೈನಲ್‌ಗೆ ಪ್ರವೇಶಿಸಿದ್ದರು.

ಮಲೇಷ್ಯಾ ಮಾಸ್ಟ​ರ್ಸ್‌: ಸಿಂಧು ಔಟ್‌, ಪ್ರಣಯ್‌ ಸೆಮೀಸ್‌ಗೆ

ಕೌಲಾಲಂಪುರ: ವಿಶ್ವ ನಂ.2 ಚೈನೀಸ್‌ ತೈಪೆಯ ತಾಯ್‌ ತ್ಸು ಯಿಂಗ್‌ಗೆ ಮತ್ತೊಮ್ಮೆ ಶರಣಾಗುವ ಮೂಲಕ ಭಾರತದ ಪಿ.ವಿ.ಸಿಂಧು ಮಲೇಷ್ಯಾ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ. ಕಳೆದ ವಾರ ಯಿಂಗ್‌ ವಿರುದ್ಧ ಮಲೇಷ್ಯಾ ಓಪನ್‌ ಟೂರ್ನಿಯಲ್ಲಿ ಕ್ವಾರ್ಟರ್‌ನಲ್ಲಿ ಪರಾಭವಗೊಂಡಿದ್ದ ಸಿಂಧು ಶುಕ್ರವಾರ 13​-21, 21-​12, 12-​21 ಗೇಮ್‌ಗಳಲ್ಲಿ ಸೋಲುಂಡರು. 

ಇದು ಯಿಂಗ್‌ ವಿರುದ್ಧ ಸಿಂಧುಗೆ ಸತತ 7ನೇ, ಒಟ್ಟಾರೆ 17ನೇ ಸೋಲು. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್‌ ಜಪಾನಿನ ಕಂಟಾ ಸುನೇಯಮ ವಿರುದ್ಧ 25-23, 22-20 ನೇರ ಗೇಮ್‌ಗಳಿಂದ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

Follow Us:
Download App:
  • android
  • ios