Wimbledon 2022: ಶುಭಾರಂಭ ಮಾಡಿದ ಜೋಕೋವಿಚ್, ರಾಡುಕಾನು
ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಹಾಲಿ ಚಾಂಪಿಯನ್ ಜೋಕೋವಿಚ್
ದಕ್ಷಿಣ ಕೊರಿಯಾದ ಸೂನ್ವೂ ಕೊನ್ ವಿರುದ್ಧ 6-3, 3-6, 6-3, 6-4 ಸೆಟ್‌ಗಳಲ್ಲಿ ಜಯ
ಎಲ್ಲಾ 4 ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ 80 ಜಯ ಕಂಡ ಮೊದಲ ಟೆನಿಸಿಗ ಜೋಕೋ
ಲಂಡನ್(ಜೂ.28): 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಚ್ (Novak Djokovic) ಹಾಗೂ ಹಾಲಿ ಯುಎಸ್ ಚಾಂಪಿಯನ್ ಎಮ್ಮಾ ರಾಡುಕಾನು (Emma Raducanu) ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ (Wimbledon Tennis Grand slam) ಶುಭಾರಂಭ ಮಾಡಿದ್ದಾರೆ. ಸೋಮವಾರ ಆರಂಭವಾದ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಜೋಕೋವಿಚ್ ದಕ್ಷಿಣ ಕೊರಿಯಾದ ಸೂನ್ವೂ ಕೊನ್ ವಿರುದ್ಧ 6-3, 3-6, 6-3, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಎಲ್ಲಾ 4 ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ 80 ಜಯ ಕಂಡ ಮೊದಲ ಟೆನಿಸಿಗ ಎಂಬ ದಾಖಲೆ ಬರೆದರು.
ಸ್ಪೇನ್‌ನ ಯುವ ಟೆನಿಸಿಗ ಕಾರ್ಲೋಸ್ ಆಲ್ಕರಾಜ್, ಜರ್ಮನಿಯ ಜಾನ್ ಲೆನಾರ್ಡ್ ವಿರುದ್ದ 4-6, 7-5, 4-6, 7-6, 6-4 ಸೆಟ್‌ಗಳಿಂದ ರೋಚಕ ಜಯ ಸಾಧಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.11ನೇ ಶ್ರೇಯಾಂಕಿತೆ ಬ್ರಿಟನ್‌ನ ಎಲ್ಲಾ ರಾಡುಕಾನು, ಬೆಲ್ಜಿಯಂನ ಅಲಿಸನ್ ವ್ಯಾನ್ ವಿರುದ್ದ 6-4, 6-4 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದರು.
ಫ್ರೆಂಚ್ ಓಪನ್ ರನ್ನರ್-ಅಪ್ ನಾರ್ವೆಯ ಕ್ಯಾಸ್ಪೆರ್ ರುಡ್, ಸ್ಪೇನ್‌ನ ರಾಮೊಸ್ ವಿನೋಲಸ್ ವಿರುದ್ಧ ಗೆಲುವು ಸಾಧಿಸಿದರು. ಇನ್ನು, ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.2 ಟ್ಯುನೀಶಿಯಾದ ಒನ್ಸ್ ಜಬುಯೆರ್, ಸ್ವೀಡನ್‌ನ ಬೊರ್ಕ್ಲಂಡ್ ವಿರುದ್ಧ ಗೆದ್ದು 2ನೇ ಸುತ್ತು ಪ್ರವೇಶಿಸಿದರು. ಮಂಗಳವಾರ ಫ್ರೆಂಚ್ ಓಪನ್ ಚಾಂಪಿಯನ್‌ಗಳಾದ ಸ್ಪೇನ್‌ನ ರಾಫೆಲ್ ನಡಾಲ್ (Rafael Nadal), ಫೋಲೆಂಡ್‌ನ ಇಗಾ ಸ್ವಿಯಾಟೆಕ್ ಕಣಕ್ಕಿಳಿಯಲಿದ್ದಾರೆ.
ಈ ವರ್ಷ ಈಗಾಗಲೇ ಆಸ್ಪ್ರೇಲಿಯನ್ ಓಪನ್ ಹಾಗೂ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ ಸ್ಪೇನ್‌ನ ರಾಫೆಲ್ ನಡಾಲ್ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಗ್ರ್ಯಾನ್‌ಸ್ಲಾಂ ಸಂಖ್ಯೆಯನ್ನು 23ಕ್ಕೆ ಏರಿಸಲು ಎದುರು ನೋಡುತ್ತಿದ್ದಾರೆ. ಅಲ್ಲದೇ 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿರುವ, ಹಾಲಿ ವಿಂಬಲ್ಡನ್ ಚಾಂಪಿಯನ್ ನೋವಾಕ್ ಜೋಕೋವಿಚ್ ಸತತ 2ನೇ ಪ್ರಶಸ್ತಿ ಗೆಲ್ಲಲುವ ತವಕದಲ್ಲಿದ್ದಾರೆ. ಈ ಇಬ್ಬರೂ ಈ ಬಾರಿ ಕ್ವಾರ್ಟರ್ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ.
ಇಂದಿನಿಂದ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್
ಕೌಲಾಲಂಪುರ: ಮಲೇಷ್ಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರದಿಂದ ಆರಂಭವಾಗಲಿದ್ದು, 2 ಬಾರಿ ಒಲಿಂಪಿಕ್ಸ್ ಪದಕ ವಿಜೇತ ಪಿ.ವಿ.ಸಿಂಧು (PV Sindhu) ಹಾಗೂ ಎಚ್.ಎಸ್.ಪ್ರಣಯ್ ಪದಕ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಡೆದಿದ್ದ ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಸಿಂಧು ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದರು. ಈ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಅವರು ಥಾಯ್ಲೆಂಡ್‌ನ ಚೊಚುವಾಂಗ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಇನ್ನು, ಲಂಡನ್ ಒಲಿಂಪಿಕ್ಸ್ ಕಂಚು ವಿಜೇತ ಸೈನಾ ನೆಹ್ವಾಲ್ ಕೂಡಾ ಕಣದಲ್ಲಿದ್ದು, ಅವರು ಅಮೆರಿಕದ ಐರಿಸ್ ವಾಂಗ್ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ.
Wimbledon 2022: ಇಂದಿನಿಂದ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಕದನ
ಪುರುಷರ ಸಿಂಗಲ್ಸ್‌ನಲ್ಲಿ ಥಾಮಸ್ ಕಪ್ ವಿಜೇತ ತಂಡದಲ್ಲಿದ್ದ ಪ್ರಣಯ್ ಅವರು ಮಲೇಷ್ಯಾದ ಡ್ಯಾರೆನ್ ಲೀವ್ ವಿರುದ್ಧ ಮೊದಲ ಸುತ್ತಲ್ಲಿ ಸೆಣಸಲಿದ್ದಾರೆ. ಸಾಯಿ ಪ್ರಣೀತ್, ಸಮೀರ್ ವರ್ಮಾ, ಪಾರುಪಳ್ಳಿ ಕಷ್ಯಪ್ ಕೂಡಾ ಸ್ಪರ್ಧಿಸಲಿದ್ದಾರೆ.