ವಿಂಬಲ್ಡನ್‌ನಲ್ಲಿ ಮತ್ತೊಂದು ಅಚ್ಚರಿ. 6ನೇ ಶ್ರೇಯಾಂಕಿತೆ ಮ್ಯಾಡಿಸನ್‌ ಕೀಸ್‌ 3ನೇ ಸುತ್ತಿನಲ್ಲಿ ಹೊರಬಿದ್ದಿದ್ದಾರೆ. ಯಾನ್ನಿಕ್‌ ಸಿನ್ನರ್‌ ಹಾಗೂ ಇಗಾ ಸ್ವಿಯಾಟೆಕ್‌ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಲಂಡನ್‌: ಈ ಬಾರಿ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯು ಹಲವು ಅಚ್ಚರಿ, ಆಘಾತಗಳಿಗೆ ಸಾಕ್ಷಿಯಾಗುತ್ತಿದ್ದು, ಮತ್ತೊಬ್ಬ ಶ್ರೇಯಾಂಕಿತ ಆಟಗಾರ್ತಿ 3ನೇ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

6ನೇ ಶ್ರೇಯಾಂಕಿತೆ ಅಮೆರಿಕದ ಮ್ಯಾಡಿಸನ್‌ ಕೀಸ್‌ ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಿನಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 104ನೇ ಸ್ಥಾನದಲ್ಲಿರುವ ಜರ್ಮನಿಯ ಲಾರಾ ಸೀಜ್‌ಮಂಡ್‌ ವಿರುದ್ಧ 3-6, 3-6 ನೇರ ಸೆಟ್‌ಗಳಲ್ಲಿ ಪರಭಾವಗೊಂಡರು.

ಇನ್ನು ಚೊಚ್ಚಲ ವಿಂಬಲ್ಡನ್‌ ಮೇಲೆ ಕಣ್ಣಿಟ್ಟಿರುವ ಯಾನ್ನಿಕ್‌ ಸಿನ್ನರ್‌ ಹಾಗೂ ಇಗಾ ಸ್ವಿಯಾಟೆಕ್‌ 2ನೇ ಸುತ್ತಿನಲ್ಲಿ ಸುಲಭ ಗೆಲುವಿನೊಂದಿಗೆ 3ನೇ ಸುತ್ತಿಗೇರಿದ್ದಾರೆ.

ವಿಶ್ವ ನಂ.1 ಹಾಗೂ 3 ಗ್ರ್ಯಾನ್‌ ಸ್ಲಾಂ ಟ್ರೋಫಿಗಳ ಒಡೆಯ ಸಿನ್ನರ್‌, ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಅಲೆಕ್ಸಾಂಡರ್‌ ವುಕಿಚ್‌ ವಿರುದ್ಧ 6-1, 6-1, 6-3 ಸೆಟ್‌ಗಳಲ್ಲಿ ಜಯಿಸಿದರೆ, ಮಾಜಿ ವಿಶ್ವ ನಂ.1 ಹಾಗೂ 5 ಗ್ರ್ಯಾನ್‌ಸ್ಲಾಂಗಳ ಒಡತಿ ಇಗಾ ಸ್ವಿಯಾಟೆಕ್‌ ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಅಮೆರಿಕದ ಕೇಟಿ ಮೆಕ್‌ನೇಲಿ ವಿರುದ್ಧ 5-7, 6-2, 6-1 ಸೆಟ್‌ಗಳಲ್ಲಿ ಗೆದ್ದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಸ್ವಿಯಾಟೆಕ್‌ ಕೊನೆ 2 ಸೆಟ್‌ಗಳನ್ನು ನಿರಾಯಾಸವಾಗಿ ತಮ್ಮದಾಗಿಸಿಕೊಂಡರು.

ಇನ್ನು, 4 ಗ್ರ್ಯಾನ್‌ ಸ್ಲಾಂಗಳ ವಿಜೇತೆ ಜಪಾನ್‌ನ ನವೊಮಿ ಒಸಾಕಗೆ 3ನೇ ಸುತ್ತಿನಲ್ಲಿ ಸೋಲು ಎದುರಾಯಿತು. ರಷ್ಯಾದ ಅನಸ್ತಾಸಿಯಾ ಪಾವ್ಲೊಚೆಂಕೊ ವಿರುದ್ಧ 6-3, 4-6, 4-6 ಸೆಟ್‌ಗಳಲ್ಲಿ ಸೋತು ಹೊರಬಿದ್ದರು.

ಜೂನಿಯರ್ ಹಾಕಿ ವಿಶ್ವಕಪ್: ಪಾಕ್ ತಂಡ ಭಾರತಕ್ಕೆ ಬರಲು ಕೇಂದ್ರ ಸರ್ಕಾರ ಅನುಮತಿ

ನವದೆಹಲಿ: ಆಗಸ್ಟ್‌ 27ರಿಂದ ಬಿಹಾರದಲ್ಲಿ ಆರಂಭಗೊಳ್ಳಲಿರುವ ಹಾಕಿ ಏಷ್ಯಾಕಪ್‌ ಹಾಗೂ ನ.28ರಿಂದ ಚೆನ್ನೈ, ಮಧುರೈನಲ್ಲಿ ನಡೆಯಲಿರುವ ಜೂನಿಯರ್‌ ಹಾಕಿ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. 

ಬಹುರಾಷ್ಟ್ರೀಯ ಟೂರ್ನಿಗಳಲ್ಲಿ ನಿರ್ದಿಷ್ಟ ತಂಡವೊಂದಕ್ಕೆ ಅನುಮತಿ ನಿರಾಕರಿಸುವುದು ನಿಯಮಕ್ಕೆ ವಿರುದ್ಧ. ಹೀಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸುವುದನ್ನು ತಡೆಯುವುದಿಲ್ಲ ಎಂದು ಕ್ರೀಡಾ ಸಚಿವಾಲಯ ಮೂಲಗಳು ತಿಳಿಸಿವೆ. ಇದರೊಂದಿಗೆ ಭಾರತದಲ್ಲಿ ನಡೆಯಲಿರುವ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌, ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲೂ ಪಾಕಿಸ್ತಾನ ತಂಡಕ್ಕೆ ಪಾಲ್ಗೊಳ್ಳಲು ಅನುಮತಿ ಸಿಗುವುದು ಬಹುತೇಕ ಖಚಿತವಾಗಿದೆ.

ಎಎಫ್‌ಸಿ: ಭಾರತಕ್ಕಿಂದು ಥಾಯ್ಲೆಂಡ್‌ ಎದುರಾಳಿ

ಚಿಯಾಂಗ್‌ ಮೈ( ಥಾಯ್ಲೆಂಡ್‌): ಇಲ್ಲಿ ನಡೆಯುತ್ತಿರುವ ಎಎಫ್‌ಸಿ ಮಹಿಳಾ ಏಷ್ಯನ್‌ ಕಪ್‌ ಅರ್ಹತಾ ಪಂದ್ಯದಲ್ಲಿ ಭಾರತ ಫುಟ್ಬಾಲ್‌ ತಂಡ ಶನಿವಾರ ಥಾಯ್ಲೆಂಡ್‌ ಎದುರು ಕಠಿಣ ಸ್ಪರ್ಧೆಯನ್ನು ಎದುರಿಸಲಿದೆ. ಭಾರತವು ಇದುವರೆಗೆ ಕ್ವಾಲಿಫೈಯರ್‌ ಪಂದ್ಯಗಳ ಮೂಲಕ ಎಎಫ್‌ಸಿ ಏಷ್ಯನ್‌ ಕಪ್‌ಗೆ ಅರ್ಹತೆಯನ್ನು ಪಡೆದಿಲ್ಲ. ಮಾತ್ರವಲ್ಲದೆ ಇಲ್ಲಿಯ ತನಕ ಥಾಯ್ಲೆಂಡನ್ನು ಮಣಿಸಲು ಸಾಧ್ಯವಾಗಿಲ್ಲ. ಹಾಗಾಗಿ ಭಾರತಕ್ಕೆ ಶನಿವಾರ ಸವಾಲಿನ ಪಂದ್ಯವಾಗಿರಲಿದೆ. ಟೂರ್ನಿಯಲ್ಲಿ ಭಾರತ ಇದುವರೆಗೆ ಮಂಗೋಲಿಯಾ, ಟಿಮೋರ್‌ ಲೆಸ್ಟೆ, ಇರಾಕ್‌ ವಿರುದ್ಧ ಗೆಲುವು ಸಾಧಿಸಿದ್ದು, ಥಾಯ್ಲೆಂಡ್‌ ಅನ್ನು ಸೋಲಿಸಿ ಹೊಸ ದಾಖಲೆ ಬರೆಯುವ ತವಕದಲ್ಲಿದೆ.