ವಿಂಬಲ್ಡನ್ ಗ್ರ್ಯಾನ್‌ಸ್ಲಾಂನಲ್ಲಿ ಜೋಕೋವಿಚ್ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಎಮ್ಮಾ ರಾಡುಕಾನು ಕೂಡಾ ಗೆಲುವು ಸಾಧಿಸಿದ್ದಾರೆ. ಭಾರತದ ಶ್ರೀರಾಮ್ ಬಾಲಾಜಿ ಜೋಡಿ ಕೂಡಾ 2ನೇ ಸುತ್ತಿಗೆ ಪ್ರವೇಶ.
ಲಂಡನ್: ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್‌ನಲ್ಲಿ 7 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್ 3ನೇ ಸುತ್ತು ಪ್ರವೇಶಿಸಿದ್ದಾರೆ.
ಅವರು ಗುರುವಾರ ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಬ್ರಿಟನ್ ಡ್ಯಾನ್ ಎವಾನ್ಸ್ ವಿರುದ್ಧ 6-3, 6-2, 6-0 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ 2021ರ ಯುಎಸ್ ಓಪನ್ ಚಾಂಪಿಯನ್, ಬ್ರಿಟನ್‌ನ ಎಮ್ಮಾ ರಾಡುಕಾನು ಅವರು 2023ರ ವಿಂಬಲ್ಡನ್ ಚಾಂಪಿಯನ್, ಚೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೋವಾ ವಿರುದ್ಧ 6-3, 6-3 ನೇರ ಸೆಟ್‌ಗಳಲ್ಲಿ ಜಯಗಳಿಸಿದರು. 2022ರ ವಿಂಬಲ್ಡನ್ ಚಾಂಪಿಯನ್, ಕಜಕಸ್ತಾನದ ಎಲೆನಾ ರಬೈಕೆನಾ 2ನೇ ಸುತ್ತಿನಲ್ಲಿ ಗ್ರೀಸ್‌ನ ಮರಿಯಾ ಸಕ್ಕಾರಿ ವಿರುದ್ಧ 6-3, 6-1ರಲ್ಲಿ ಗೆದ್ದರು. ಮಾಜಿ ವಿಶ್ವ ನಂ.1, ಜಪಾನ್‌ನ ನವೊಮಿ ಒಸಾಕ, 14ನೇ ಶ್ರೇಯಾಂಕಿತ ಸ್ವಿಟೋಲಿನಾ ಕೂಡಾ 3ನೇ ಸುತ್ತಿಗೇರಿದರು.
ಶ್ರೀರಾಮ್ ಜೋಡಿ 2ನೇ ಸುತ್ತಿಗೆ ಲಗ್ಗೆ
ಭಾರತದ ಶ್ರೀರಾಮ್ ಬಾಲಾಜಿ ಹಾಗೂ ಮೆಕ್ಸಿಕೋದ ರೆಯೆಸ್ ವೆರೆಲ್ ಜೋಡಿ ಪುರುಷರ ಡಬಲ್ಸ್‌ನಲ್ಲಿ 2ನೇ ಸುತ್ತು ಪ್ರವೇಶಿಸಿದೆ. ಮೊದಲ ಸುತ್ತಿನಲ್ಲಿ ಈ ಜೋಡಿ ಅಮೆರಿಕದ ಲರ್ನರ್ ಟೀನ್ ಹಾಗೂ ಅಲೆಕ್ಸಾಂಡರ್ ಕೊವಾಸೆವಿಚ್ ವಿರುದ್ಧ 6-4, 6-4 ಸೆಟ್‌ಗಳಲ್ಲಿ ಜಯಗಳಿಸಿತು. ಭಾರತದ ಯೂಕಿ ಭಾಂಭ್ರಿ, ರಿಥ್ವಿಕ್ ಬೊಲ್ಲಿಪಲ್ಲಿ ಜೋಡಿಗಳು ಕೂಡಾ ಶುಭಾರಂಭ ಮಾಡಿವೆ.
ಕೆನಡಾ ಓಪನ್: ಶ್ರೀಕಾಂತ್ ಕ್ವಾಟರ್ ಫೈನಲ್ ಪ್ರವೇಶ
ಕ್ಯಾಲ್ಗರಿ(ಕೆನಡಾ): ಕೆನಡಾ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್ ಕಿದಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮಾಜಿ ವಿಶ್ವ ನಂ.1 ಶ್ರೀಕಾಂತ್ ಗುರುವಾರ ನಡೆದ ಪುರುಷರ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೆಯ ವಾಂಗ್ ಪೊ ವೀ ವಿರುದ್ಧ 21-19, 21-14 ನೇರ ಗೇಮ್‌ಗಳಲ್ಲಿ ಜಯಗಳಿಸಿದರು. ಈ ಪಂದ್ಯ 40 ನಿಮಿಷಗಳಲ್ಲೇ ಕೊನೆಗೊಂಡಿತು.
ಗ್ರ್ಯಾಂಡ್ ಚೆಸ್ ಟೂರ್: ಕಾರ್ಲ್‌ಸನ್ ಜತೆ ಜಂಟಿ ಅಗ್ರಸ್ಥಾನಕ್ಕೇರಿದ ಗುಕೇಶ್
ಜಾಗ್ರೆಬ್(ಕ್ರೊವೇಷಿಯಾ): ಗ್ರ್ಯಾಂಡ್ ಚೆಸ್ ಟೂರ್‌ನ ಭಾಗವಾಗಿರುವ ಸೂಪರ್ ಯುನೈಟೆಡ್ ರ್‍ಯಾಪಿಡ್ ಹಾಗೂ ಬ್ಲಿಟ್ಜ್ ಚೆಸ್ ಟೂರ್ನಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಮೊದಲ 3 ಸುತ್ತಿನ ಪಂದ್ಯಗಳ ಬಳಿಕ ಗುಕೇಶ್ ಅವರು ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ಹಾಗೂ ಪೋಲೆಂಡ್ ಅಮೆರಿಕನ್ ಡ್ಯುಡಾ ಜಾನ್ ಜೊತೆ ನಂ.1 ಸ್ಥಾನ ಹಂಚಿಕೊಂಡಿದ್ದಾರೆ. ರ್‍ಯಾಪಿಡ್ ವಿಭಾಗದಲ್ಲಿ ಇನ್ನೂ 6 ಸುತ್ತಿನ ಪಂದ್ಯಗಳು ಬಾಕಿಯಿದ್ದು, ಬ್ಲಿಟ್ಜ್‌ನಲ್ಲಿ 18 ಸುತ್ತಿನ ಪಂದ್ಯಗಳು ನಡೆಯಬೇಕಿವೆ.
ಭೀಕರ ಕಾರು ಅಪಘಾತ: ಲಿವರ್‌ಪೂಲ್ ಫುಟ್ಬಾಲಿಗ ಜೋಟಾ, ಸೋದರ ಸಾವು
ಮ್ಯಾಡ್ರಿಡ್: ಇಂಗ್ಲೆಂಡ್‌ನ ಲಿವರ್‌ಪೂಲ್ ಕ್ಲಬ್‌ನ ಪ್ರಸಿದ್ಧ ಆಟಗಾರ, ಪೋರ್ಚುಗಲ್ ದೇಶದ ಡಿಯಾಗೋ ಜೋಟಾ(28 ವರ್ಷ) ಹಾಗೂ ಅವರ ಸಹೋದರ ಆ್ಯಂಡ್ರೆ ಸಿಲ್ವ(26 ವರ್ಷ) ಸ್ಪೇನ್‌ನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರಿಬ್ಬರು ಸಂಚರಿಸುತ್ತಿದ್ದ ಲ್ಯಾಂಬೋರ್ಗಿನಿ ಕಾರು ಸ್ಪೇನ್‌ನ ವಾಯುವ್ಯ ಭಾಗದ ಸೆರ್ನಾಡಿಲಾ ಎಂಬಲ್ಲಿ ಅಪಘಾತಕ್ಕೀಡಾಗಿ, ಬೆಂಕ ಹೊತ್ತಿಕೊಂಡಿದೆ. ಇದರಿಂದಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎದುರಿದ್ದ ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಕಾರಿನ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಜೋಟಾ ಸಾವಿಗೆ ಫುಟ್ಬಾಲ್ ಲೋಕ ದಿಗ್ಭ್ರಮೆ ವ್ಯಕ್ತಪಡಿಸಿದೆ.
ಜೂ.22ರಂದು ಜೋಟಾ ತಮ್ಮ ದೀರ್ಘಕಾಲದ ಪ್ರೇಯಸಿ ರ್‍ಯುಟ್ ಕಾರ್ಡೊಸೊ ಅವರನ್ನು ವಿವಾಹವಾಗಿದ್ದರು. 2013ರಿಂದಲೂ ಜೊತೆಯಾಗಿ ವಾಸಿಸುತ್ತಿರುವ ಇವರಿಗೆ ಮೂವರು ಮಕ್ಕಳಿದ್ದಾರೆ.
