* ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಲ್ಲೇ ಸೋಲುಂಡ ಇಗಾ ಸ್ವಿಯಾಟೆಕ್* ಇಗಾ ಸ್ವಿಯಾಟೆಕ್ ಮಹಿಳಾ ಸಿಂಗಲ್ಸ್‌ನ ನಂ.1 ಶ್ರೇಯಾಂಕಿತ ಆಟಗಾರ್ತಿ* ಇಗಾ ಸ್ವಿಯಾಟೆಕ್ ಸತತ 37 ಗೆಲುವಿನ ನಾಗಾಲೋಟಕ್ಕೆ ಬ್ರೇಕ್
ಲಂಡನ್(ಜು.03): ಸತತ 37 ಗೆಲುವುಗಳೊಂದಿಗೆ ಸೋಲರಿಯದ ಆಟಗಾರ್ತಿ ಎಂದೇ ಬಿಂಬಿತವಾಗಿದ್ದ ವಿಶ್ವ ನಂ.1 ಇಗಾ ಸ್ವಿಯಾಟೆಕ್ (Iga Swiatek) ಅವರ ಗೆಲುವಿನ ಓಟಕ್ಕೆ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟನಿಸ್ ಟೂರ್ನಿಯಲ್ಲಿ ಬ್ರೇಕ್ ಬಿದ್ದಿದೆ. ಶನಿವಾರ ಮಹಿಳಾ ಸಿಂಗಲ್ಸ್ 3ನೇ ಸುತ್ತಿನ ಪಂದ್ಯದಲ್ಲಿ ಪೋಲೆಂಡ್‌ನ ಸ್ವಿಯಾಟೆಕ್, ಫ್ರಾನ್ಸ್‌ನ ಶ್ರೇಯಾಂಕ ರಹಿತ ಅಲೈಜ್ ಕಾರ್ನೆಟ್ ವಿರುದ್ಧ 4-6, 2-6 ನೇರ ಸೆಟ್‌ಗಳಲ್ಲಿ ಪರಾಭವಗೊಂಡು ನಿರಾಸೆ ಮೂಡಿಸಿದರು. ಇತ್ತೀಚೆಗಷ್ಟೇ ಫ್ರೆಂಚ್ ಓಪನ್ (French Open) ಪ್ರಶಸ್ತಿ ಗೆದ್ದಿದ್ದ ಸ್ವಿಯಾಟೆಕ್ ಮತ್ತೊಂದು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರು. ಆದರೆ ಅವರ ಕನಸಿಗೆ 32 ವರ್ಷದ ಕಾರ್ನೆಟ್ ಅಡ್ಡಿಯಾದರು.
ಇದೇ ವೇಳೆ ಸ್ಪೇನ್‌ನ ಯುವ ಟೆನಿಸ್ ತಾರೆ ಕಾರ್ಲೋಸ್ ಆಲ್ಕರಾಜ್, 2019ರ ವಿಂಬಲ್ಡನ್ (Wimbledon) ಚಾಂಪಿಯನ್ ರೊಮೇನಿಯಾದ ಸಿಮೋನಾ ಹಾಲೆಪ್ ವಿಂಬಲ್ಡನ್ 4ನೇ ಸುತ್ತು ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ 3ನೇ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.5 ಆಲ್ಕರಾಜ್ ಜರ್ಮನಿಯ ಆಸ್ಕರ್ ಒಟ್ಟೆವಿರುದ್ಧ 6-3, 6-1, 6-2 ಸೆಟ್‌ಗಳಲ್ಲಿ ಜಯಿಸಿದರು. ಈ ವರ್ಷ 4 ಪ್ರಶಸ್ತಿಗಳನ್ನು ಗೆದ್ದಿರುವ 19 ವರ್ಷದ ಆಲ್ಕರಾಜ್ ಅಂತಿಮ 16ರ ಸುತ್ತಿನಲ್ಲಿ ಇಟಲಿಯ ಜೆನ್ನಿಕ್ ಸಿನ್ನರ್ ವಿರುದ್ಧ ಸೆಣಸಾಡಲಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ 3ನೇ ಸುತ್ತಿನ ಹಣಾಹಣಿಯಲ್ಲಿ 18ನೇ ಶ್ರೇಯಾಂಕಿತ ಹಾಲೆಪ್, ಪೋಲೆಂಡ್‌ನ ಮ್ಯಾಗ್ಡಲೀನಾ ಪ್ರೆಚ್ ವಿರುದ್ಧ 6-4, 6-1ರಿಂದ ಗೆಲುವು ಸಾಧಿಸಿದರು.
ಇದೇ ವೇಳೆ ಮೊದಲ ಸುತ್ತಲ್ಲಿ 23 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್‌ಗೆ ಸೋಲುಣಿಸಿದ್ದ ಫ್ರಾನ್ಸ್‌ನ ಹಾರ್ಮೊನಿ ತಾನ್ ಮಹಿಳಾ ಸಿಂಗಲ್ಸ್‌ನಲ್ಲಿ 4ನೇ ಸುತ್ತಿಗೆ ಮುನ್ನಡೆದಿದ್ದಾರೆ. 3ನೇ ಸುತ್ತಿನ ಪಂದ್ಯದಲ್ಲಿ ಅವರು ಬ್ರಿಟನ್‌ನ ಬೌಲ್ಟರ್‌ರನ್ನು ಮಣಿಸಿದರು. ಅವರು ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ 4ನೇ ಸುತ್ತು ತಲುಪಿದ ಸಾಧನೆ ಮಾಡಿದರು. ಆದರೆ 2021ರ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಚೆಕ್ ಗಣರಾಜ್ಯದ ಬಾರ್ಬರಾ ಕ್ರೆಜಿಕೋವಾ ನಿರಾಸೆ ಮೂಡಿಸಿದರು. ಅವರು ಮೂರನೇ ಸುತ್ತಿನ ಪಂದ್ಯದಲ್ಲಿ ಆಸ್ಪ್ರೇಲಿಯಾದ ತೊಮ್ಜಾನೊವಿಚ್ ವಿರುದ್ಧ 6-2, 4-6, 3-6 ಸೆಟ್‌ಗಳಿಂದ ಪರಾಭವಗೊಂಡರು.
Wimbledon 2022: ನಾಲ್ಕನೇ ಸುತ್ತಿಗೆ ಜೋಕೋವಿಚ್ ಲಗ್ಗೆ
ಕಾಮನ್ವೆಲ್ತ್‌ನಲ್ಲೂ ಪದಕ: ಗೋಪಿಚಂದ್ ವಿಶ್ವಾಸ
ಕೋಲ್ಕತಾ: ಥಾಮಸ್ ಕಪ್‌ನಂತೆಯೇ ಭಾರತ ಪುರುಷ ಶಟ್ಲರ್‌ಗಳು ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಹೆಚ್ಚಿನ ಪದಕದ ಸಾಧನೆ ಮಾಡಲಿದ್ದಾರೆ ಎಂದು ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಬ್ಯಾಡ್ಮಿಂಟನ್‌ನಲ್ಲಿ 2 ಚಿನ್ನ ಸೇರಿ 6 ಪದಕ ಗೆದ್ದಿತ್ತು.
‘ಥಾಮಸ್ ಕಪ್‌ನಲ್ಲಿ ನಮ್ಮ ಪ್ರದರ್ಶನ ಅತ್ಯುತ್ತಮವಾಗಿತ್ತು. ತಂಡ ವಿಭಾಗದಲ್ಲಿ ಆ ರೀತಿಯ ಪ್ರದರ್ಶನ ನಾವು ಮೊದಲ ನೀಡಿರಲಿಲ್ಲ. ಕಳೆದ ಬಾರಿ ಕಾಮನ್‌ವೆಲ್ತ್‌ನಲ್ಲಿ 2 ಚಿನ್ನ ಗೆದ್ದಿದ್ದೆವು. ಖಂಡಿತಾ ಈ ಬಾರಿ ಸಿಂಗಲ್ಸ್ ಜೊತೆ ಡಬಲ್ಸ್‌ನಲ್ಲೂ ಶ್ರೇಷ್ಠ ಪ್ರದರ್ಶನ ನೀಡುವ ಭರವಸೆ ಇದೆ’ ಎಂದು ಹೇಳಿದ್ದಾರೆ.
