ವಿಂಬಲ್ಡನ್ ಗ್ರ್ಯಾನ್‌ ಸ್ಲಾಂನಲ್ಲಿ ಮುಂದುವರೆದ ಜೋಕೋವಿಚ್ ಗೆಲುವಿನ ನಾಗಾಲೋಟ13ನೇ ಬಾರಿಗೆ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ ಸರ್ಬಿಯಾದ ಟೆನಿಸ್ ದಿಗ್ಗಜಟೂರ್ನಿಯಲ್ಲಿ ಸತತ 25ನೇ ಜಯ ದಾಖಲಿಸಿದ ಜೋಕೋ

ಲಂಡನ್‌(ಜು.05): ಸತತ 4ನೇ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮಾಜಿ ವಿಶ್ವ ನಂ.1 ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಟೂರ್ನಿಯಲ್ಲಿ 13ನೇ ಬಾರಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಭಾನುವಾರ ಪುರುಷರ ಸಿಂಗಲ್ಸ್‌ 4ನೇ ಸುತ್ತಿನ ಸ್ಪರ್ಧೆಯಲ್ಲಿ 20 ಗ್ರ್ಯಾನ್‌ಸ್ಲಾಂಗಳ ಒಡೆಯ ಜೋಕೋ ನೆದರ್ಲೆಂಡ್ಸ್‌ನ ಟಿಮ್‌ ವ್ಯಾನ್‌ ರಿತೋವೆನ್‌ ವಿರುದ್ಧ 6-2, 4-6, 6-1, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದ್ದು, ಟೂರ್ನಿಯಲ್ಲಿ ಸತತ 25ನೇ ಜಯ ದಾಖಲಿಸಿದರು.

ವೈಲ್ಡ್‌ ಕಾರ್ಡ್‌ ಮೂಲಕ ಟೂರ್ನಿ ಪ್ರವೇಶಿಸಿದ್ದ ಟಿಮ್‌, ಜೋಕೋಗೆ 2ನೇ ಸೆಟ್‌ನಲ್ಲಿ ಆಘಾತ ನೀಡಿದರೂ ಪಂದ್ಯ ಗೆಲ್ಲಲು ವಿಫಲರಾದರು. 7ನೇ ಬಾರಿ ವಿಂಬಲ್ಡನ್‌ ಚಾಂಪಿಯನ್‌ ಆಗುವ ಕಾತರದಲ್ಲಿರುವ ನೋವಾಕ್ ಜೋಕೋವಿಚ್ (Novak Djokovic) ಅಂತಿಮ 8ರ ಘಟ್ಟದಲ್ಲಿ ಇಟಲಿಯ ಜನಿಕ್‌ ಸಿನ್ನರ್‌ ವಿರುದ್ಧ ಸೆಣಸಲಿದ್ದಾರೆ. ಸಿನ್ನರ್‌, 4ನೇ ಸುತ್ತಲ್ಲಿ ಸ್ಪೇನ್‌ನ ಯುವ ತಾರೆ ಕಾರ್ಲೊಸ್‌ ಆಲ್ಕರಾಜ್‌ರನ್ನು ಸೋಲಿಸಿದ್ದರು. ಮಹಿಳಾ ಸಿಂಗಲ್ಸ್‌ನಲ್ಲಿ 3ನೇ ಶ್ರೇಯಾಂಕಿತ ಟ್ಯನೀಶಿಯಾದ ಒನ್ಸ್‌ ಜಬುರ್‌ 7-6, 6-4 ಸೆಟ್‌ಗಳಿಂದ ಬೆಲ್ಜಿಯಂನ ಎಲೈಸ್‌ ಮೆರ್ಟನ್ಸ್‌ರನ್ನು ಮಣಿಸಿ ಸತತ 2ನೇ ಬಾರಿ ಕ್ವಾರ್ಟರ್‌ ಪ್ರವೇಶಿಸಿದರು.

ಇಂದಿನಿಂದ ಮಲೇಷ್ಯಾ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌

ಕೌಲಾಲಂಪುರ: ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಮತ್ತು ಎಚ್‌.ಎಸ್‌.ಪ್ರಣಯ್‌ ಮಂಗಳವಾರದಿಂದ ಆರಂಭಗೊಳ್ಳಲಿರುವ ಮಲೇಷ್ಯಾ ಮಾಸ್ಟ​ರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಕಳೆದ ವಾರ ನಡೆದ ಮಲೇಷ್ಯಾ ಓಪನ್‌ ಸೂಪರ್‌ 750 ಟೂರ್ನಿಯಲ್ಲಿ ಈ ಇಬ್ಬರೂ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡಿದ್ದರು. ಈ ಟೂರ್ನಿಯಲ್ಲಿ ಸುಧಾರಿತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. 

Wimbledon 2022: ರಾಫೆಲ್ ನಡಾಲ್‌ 4ನೇ ಸುತ್ತಿಗೆ ಲಗ್ಗೆ

ಸಿಂಧು ಈ ವರ್ಷ ಎರಡು ಸೂಪರ್‌ 300 ಟೂರ್ನಿಗಳನ್ನು ಗೆದ್ದಿದ್ದರೆ, ಪ್ರಣಯ್‌ ಕಳೆದ 5 ವರ್ಷದಲ್ಲಿ ಒಂದೂ ಪ್ರಶಸ್ತಿ ಗೆದ್ದಿಲ್ಲ. ಉಳಿದಂತೆ ಸೈನಾ ನೆಹ್ವಾಲ್‌, ಸಾಯಿ ಪ್ರಣೀತ್‌, ಪಾರುಪಳ್ಳಿ ಕಶ್ಯಪ್‌, ತ್ರೀಸಾ-ಗಾಯತ್ರಿ, ಅಶ್ವಿನಿ-ಸಿಕ್ಕಿ ಕಣಕ್ಕಿಳಿಯಲಿದ್ದಾರೆ.

ಹಾಕಿ ವಿಶ್ವಕಪ್‌: ಭಾರತಕ್ಕೆ ಇಂದು ಚೀನಾ ಸವಾಲು

ಆ್ಯಮ್‌ಸ್ಟಲ್ವೀನ್‌(ನೆದರ್‌ಲೆಂಡ್‌್ಸ): ಉತ್ತಮ ರಕ್ಷಣಾತ್ಮಕ ಆಟದೊಂದಿಗೆ ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಒಲಿಂಪಿಕ್ಸ್‌ ಕಂಚು ವಿಜೇತ ಇಂಗ್ಲೆಂಡ್‌ ವಿರುದ್ಧ 1-1ರ ಡ್ರಾ ಸಾಧಿಸಿದ್ದ ಭಾರತ, ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಲು ಎದುರು ನೋಡುತ್ತಿದ್ದು ಮಂಗಳವಾರ ಚೀನಾ ವಿರುದ್ಧ ಸೆಣಸಲಿದೆ. ‘ಬಿ’ ಗುಂಪಿನಲ್ಲಿರುವ ಭಾರತ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.

ಮಹಿಳೆಯರ ಹಾಕಿ ವಿಶ್ವಕಪ್‌: ಇಂಗ್ಲೆಂಡ್-ಭಾರತ ಪಂದ್ಯ ಡ್ರಾ

ನಾಯಕಿ ಸವಿತಾ ಪೂನಿಯಾ ಮುಂದಾಳತ್ವದ ರಕ್ಷಣಾ ಪಡೆ ಮತ್ತೊಂದು ಆಕರ್ಷಕ ಪ್ರದರ್ಶನ ತೋರಲು ಎದುರು ನೋಡುತ್ತಿದ್ದು, ಫಾರ್ವರ್ಡ್‌ ಆಟಗಾರ್ತಿಯರು ಹಾಗೂ ಡ್ರ್ಯಾಗ್‌ ಫ್ಲಿಕರ್‌ ಗುರ್ಜೀತ್‌ ಕೌರ್‌ರಿಂದ ಸುಧಾರಿತ ಪ್ರದರ್ಶನ ನಿರೀಕ್ಷೆ ಮಾಡಲಾಗುತ್ತಿದೆ. ಇಂಗ್ಲೆಂಡ್‌ ವಿರುದ್ಧ ದೊರೆತ ಒಟ್ಟು 7 ಪೆನಾಲ್ಟಿಕಾರ್ನರ್‌ಗಳಲ್ಲಿ ಭಾರತ ಕೇವಲ 1ರಲ್ಲಿ ಮಾತ್ರ ಗೋಲು ದಾಖಲಿಸಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಚೀನಾ ವಿರುದ್ಧ ಭಾರತ ಉತ್ತಮ ದಾಖಲೆ ಹೊಂದಿದ್ದರೂ ಚೀನಾ ಉತ್ತಮ ಲಯದಲ್ಲಿದ್ದು ಭಾರತ ಎಚ್ಚರಿಕೆಯಿಂದ ಆಡಬೇಕಿದೆ.

ಪಂದ್ಯ ಆರಂಭ: ರಾತ್ರಿ 8ಕ್ಕೆ