Asianet Suvarna News Asianet Suvarna News

Wimbledon 2022 ಸತತ 36 ಪಂದ್ಯ ಗೆದ್ದು ದಾಖಲೆ ಬರೆದ ಇಗಾ ಸ್ವಿಯಾಟೆಕ್‌

ಟೆನಿಸ್ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌
ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ವಿಂಬಲ್ಡನ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶ'
ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಜಯಿಸಿದ್ದ ಇಗಾ ಸ್ವಿಯಾಟೆಕ್

Wimbledon 2022 Iga Swiatek enters Second Round with 36th Successive Win kvn
Author
Bengaluru, First Published Jun 29, 2022, 9:35 AM IST

ಲಂಡನ್(ಜೂ.29)‌: ಇತ್ತೀಚೆಗಷ್ಟೇ ಫ್ರೆಂಚ್‌ ಓಪನ್‌ (French Open 2022) ಪ್ರಶಸ್ತಿ ಗೆದ್ದಿದ್ದ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ (Iga Swiatek) ತಮ್ಮ ಗೆಲುವಿನ ಓಟವನ್ನು ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲೂ (Wimbledon Tennis Grand Slam) ಮುಂದುವರಿಸಿದ್ದು, ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ. ಮಂಗಳವಾರ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಕ್ರೊವೇಷಿಯಾದ ಜಾನ ಫೆಟ್‌ ವಿರುದ್ಧ 6-0, 6-3 ಅಂತರದಲ್ಲಿ ನೇರ ಸೆಟ್‌ಗಳಲ್ಲಿ ಗೆದ್ದು 2ನೇ ಸುತ್ತಿಗೆ ಲಗ್ಗೆ ಇಟ್ಟರು.

ಇದರೊಂದಿಗೆ ಅವರು 2000ರ ನಂತರ ಸತತವಾಗಿ ಅತಿ ಹೆಚ್ಚು ಗೆಲುವು ಸಾಧಿಸಿದ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಇಗಾ ಒಟ್ಟಾರೆ 36 ಸತತ ಪಂದ್ಯಗಳಲ್ಲಿ ಜಯಗಳಿಸಿದ್ದು, ಅಮೆರಿಕದ ವೀನಸ್‌ ವಿಲಿಯಮ್ಸ್‌ ಅವರ ದಾಖಲೆ ಮುರಿದಿದ್ದಾರೆ. 7 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ ವೀನಸ್‌ ವಿಲಿಯಮ್ಸ್ 2000ರಲ್ಲಿ ಸತತವಾಗಿ 35 ಜಯ ಕಂಡಿದ್ದರು.

ಇನ್ನು, ಫ್ರೆಂಚ್‌ ಓಪನ್‌ ರನ್ನರ್‌-ಅಪ್‌, ಅಮೆರಿಕದ 18ರ ಕೊಕೊ ಗಾಫ್‌ ರೊಮಾನಿಯಾದ ಗ್ಯಾಬ್ರಿಯೆಲ್‌ ರ್ಯುಸ್‌ ವಿರುದ್ಧ 2-6, 6-3, 7-5 ಸೆಟ್‌ಗಳಲ್ಲಿ ಗೆದ್ದು ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂನಲ್ಲಿ ಶುಭಾರಂಭ ಮಾಡಿದರು. ವಿಶ್ವ ನಂ.4 ಸ್ಪೇನ್‌ ಪೌಲಾ ಬಡೋಸಾ ಅಮೆರಿಕದ ಚಿರಿಕೋ ವಿರುದ್ಧ ಗೆಲುವು ಕಂಡರು. ರೊಮಾನಿಯಾದ ಸಿಮೋನಾ ಹಾಲೆಪ್‌ ಚೆಕ್‌ ಗಣರಾಜ್ಯದ ಕರೋಲಿನಾ ಮುಚೋವಾ ವಿರುದ್ಧ ಗೆದ್ದು 2ನೇ ಸುತ್ತಿಗೆ ಲಗ್ಗೆ ಇಟ್ಟರು.

ಕಳೆದ ವರ್ಷದ ವಿಂಬಲ್ಡನ್‌ ರನ್ನರ್‌-ಅಪ್‌ ಇಟಲಿಯ ಬೆರೆಟ್ಟಿನಿ ಕೋವಿಡ್‌ ದೃಢಪಟ್ಟ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಂಗಳವಾರ ಮೊದಲ ಸುತ್ತಿನ ಪಂದ್ಯಕ್ಕೂ ಮುನ್ನ ಅವರಲ್ಲಿ ಸೋಂಕು ಪತ್ತೆಯಾಗಿದ್ದು, ಹೀಗಾಗಿ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಸೋಮವಾರ 2017ರ ವಿಂಬಲ್ಡನ್‌ ರನ್ನರ್‌-ಅಪ್‌ ಮರಿನ್‌ ಸಿಲಿಚ್‌ ಕೂಡಾ ಕೋವಿಡ್‌ನಿಂದಾಗಿ ಟೂರ್ನಿಯಿಂದ ಹೊರನಡೆದಿದ್ದರು.

ಮಲೇಷ್ಯಾ ಓಪನ್‌: ಪ್ರಣಯ್‌ ಶುಭಾರಂಭ

ಜಕಾರ್ತ: ಮಂಗಳವಾರ ಆರಂಭಗೊಂಡ ಮಲೇಷ್ಯಾ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಎಚ್‌.ಎಸ್‌.ಪ್ರಣಯ್‌ ಶುಭಾರಂಭ ಮಾಡಿದ್ದಾರೆ. ಅದರೆ ಸಮೀರ್‌ ವರ್ಮಾ, ಸಾಯಿ ಪ್ರಣೀತ್‌ ಸೋತು ಹೊರಬಿದ್ದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.21 ಪ್ರಣೀತ್‌ ಅವರು ಮಲೇಷ್ಯಾದ ಲೀವ್‌ ಡ್ಯಾರೆನ್‌ ವಿರುದ್ಧ 21-14, 17-21, 21-18 ಗೇಮ್‌ಗಳಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದರು. 

Wimbledon 2022: ಶುಭಾರಂಭ ಮಾಡಿದ ಜೋಕೋವಿಚ್, ರಾಡುಕಾನು

ಮುಂದಿನ ಸುತ್ತಿನಲ್ಲಿ ಅವರು ಚೈನೀಸ್‌ ತೈಪೆಯ ಚೊಯು ತೀನ್‌ ಚೆನ್‌ ವಿರುದ್ಧ ಸೆಣಸಾಡಲಿದ್ದಾರೆ. ಆದರೆ 19ನೇ ಶ್ರೇಯಾಂಕಿತ ಪ್ರಣೀತ್‌ ಅವರು ವಿಶ್ವ ನಂ.1 ಇಂಡೋನೇಷ್ಯಾದ ಸಿನಿಸುಕಾ ಗಿಂಟಿಂಕ್‌ ವಿರುದ್ಧ ಪರಾಭವಗೊಂಡರು. ಸಮೀರ್‌ ವಿಶ್ವ ನಂ.8 ಇಂಡೋನೇಷ್ಯಾದ ಜೋನಾಥನ್‌ ಕ್ರಿಸ್ಟೀ ವಿರುದ್ಧ ಸೋತು ಹೊರಬಿದ್ದರು. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಸೋಲನುಭವಿಸಿದರು.

Follow Us:
Download App:
  • android
  • ios