ಮುಂಬೈ(ಮಾ.16): ಶಶಾಂಕ್ ಮನೋಹರ್ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡುತ್ತಿದ್ದಂತೆ ಅವರ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗಿದ್ದು, ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಮತ್ತೊಂದು ಬಾರಿ ಐಸಿಸಿ ಹುದ್ದೆಗೇರುವ ಸಂಭವವಿದೆ ಎಂದು ‘ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಅಂದಹಾಗೆ ಐಸಿಸಿ ಅಧ್ಯಕ್ಷಗಾದಿಗೇರಲು ಅರ್ಹತೆ ಹಾಗೂ ಆಸಕ್ತಿ ಇರುವ ಹಲವರ ಹೆಸರುಗಳು ಈಗಾಗಲೇ ಕೇಳಿಬರುತ್ತಿದ್ದು, ಐಸಿಸಿ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಹೆಸರು ಸಹ ಆ ಪಟ್ಟಿಯಲ್ಲಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಬಿಸಿಸಿಐ ಅಧಿಕಾರ ತೊರೆದಿದ್ದ ಶ್ರೀನಿವಾಸನ್, ಐಸಿಸಿ ಹುದ್ದೆಗೇರಲು ತಮಿಳುನಾಡು ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಶ್ರೀನಿ ಅವರ ಅಪ್ತ ಮೂಲಗಳ ಪ್ರಕಾರ, ಈಗಾಗಲೇ ಈ ಕುರಿತು ಅವರು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಬಿಸಿಸಿಐ ಹಾಗೂ ವಿವಿಧ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಹಲವು ಅರ್ಜಿಗಳನ್ನಿಟ್ಟುಕೊಂಡು ಮಾರ್ಚ್ 20ರಂದು ನ್ಯಾಯಾಲಯದ ಮೆಟ್ಟಿಲೇರಲಿವೆ. ಅಂದಿನ ಬೆಳವಣಿಗೆಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಲು ಶ್ರೀನಿವಾಸನ್ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.