ಬೆಂಗಳೂರು[ಏ.05]: 12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ 4 ಸೋಲು ಅನುಭವಿಸಿ ಕಂಗೆಟ್ಟಿರುವ RCB, ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಬಲಿಷ್ಠ ಕೋಲ್ಕತಾ ನೈಟ್’ರೈಡರ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ.

ಆಡಿರುವ ಮೂರು ಪಂದ್ಯಗಳಲ್ಲಿ 2 ಗೆಲುವು ಹಾಗೂ ಒಂದು ಸೋಲು ಕಂಡಿರುವ ಕೆಕೆಆರ್, ಇದೀಗ ತನ್ನ ನೆಚ್ಚಿನ ಮೈದಾನಗಳಲ್ಲಿ ಒಂದಾದ ಚಿನ್ನಸ್ವಾಮಿ ಮೈದಾನದಲ್ಲಿ ರನ್ ಹೊಳೆಹರಿಸಲು ಸಜ್ಜಾಗಿದೆ. ಮೇಲ್ನೋಟಕ್ಕೆ ಕೆಕೆಆರ್ ಬಲಿಷ್ಠವಾಗಿ ಕಂಡರೂ ಆರ್’ಸಿಬಿ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿರುವುದರಿಂದ ಪಂದ್ಯ ರೋಚಕತೆಯನ್ನು ಹುಟ್ಟುಹಾಕಿದೆ.

ಈ ಪಂದ್ಯದಲ್ಲಿ ಆರ್’ಸಿಬಿ ನಾಯಕ ವಿರಾಟ್ ಕೊಹ್ಲಿ ದಾಖಲೆಯ ಸನಿಹದಲ್ಲಿದ್ದರೆ, ಮತ್ತೋರ್ವ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಕೆಕೆಆರ್ ಬೌಲರ್’ಗಳನ್ನು ಹೇಗೆ ಎದುರಿಸಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಈ ಪಂದ್ಯದ ಕುರಿತಾದ ಕೆಲವು ಅಪರೂಪದ ಅಂಕಿ-ಅಂಶಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

IPL 2019: ಇಲ್ಲಿದೆ KKR ವಿರುದ್ಧದ ಪಂದ್ಯಕ್ಕೆ RCB ಸಂಭವನೀಯ ತಂಡ!

* ವಿರಾಟ್ ಕೊಹ್ಲಿ: RCB ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್’ನಲ್ಲಿ 7,983 ರನ್ ಬಾರಿಸಿದ್ದು, ಇನ್ನು ಕೇವಲ 17 ರನ್ ಬಾರಿಸಿದರೆ 8 ಸಾವಿರ ರನ್ ಬಾರಿಸಿದ ಅತಿಕಿರಿಯ ಕ್ರಿಕೆಟಿಗ ಸಾಧನೆ ಮಾಡಲಿದ್ದಾರೆ. ಈ ಮೊದಲು ಸುರೇಶ್ ರೈನಾ 8 ಸಾವಿರ ಪೂರೈಸಿದ್ದರು. ಇದರ ಜತೆಗೆ ಟಿ20 ಕ್ರಿಕೆಟ್’ನಲ್ಲಿ ಈ ಸಾಧನೆ ಮಾಡಿದ 7ನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.

* ಎಬಿ ಡಿವಿಲಿಯರ್ಸ್: ಕೋಲ್ಕತಾ ನೈಟ್’ರೈಡರ್ಸ್ ವಿರುದ್ಧ ಸ್ಫೋಟಕ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಪ್ರದರ್ಶನ ಅಷ್ಟೇನು ಉತ್ತಮವಾಗಿಲ್ಲ. ಇದುವರೆಗೂ ಕೆಕೆಆರ್ ವಿರುದ್ಧ ಎಬಿಡಿ 16 ಇನ್ನಿಂಗ್ಸ್’ಗಳಲ್ಲಿ 24.91ರ ಸರಾಸರಿಯಲ್ಲಿ ಕೇವಲ 299 ರನ್ ಬಾರಿಸಿದ್ದಾರೆ.

IPL 12 ಇಂದಾದ್ರೂ ಗೆಲ್ಲುತ್ತಾ RCB..?

* RCB 4 ಸೋಲು: 12ನೇ ಆವೃತ್ತಿಯಲ್ಲಿ ಆರ್’ಸಿಬಿ ಸತತ 4 ಸೋಲು ಕಂಡಿದೆ. ಇನ್ನು ಕೆಕೆಆರ್ ವಿರುದ್ಧ ಆಡಿದ ಕೊನೆಯ 4 ಪಂದ್ಯಗಳಲ್ಲೂ ಆರ್’ಸಿಬಿ ಸೋಲಿನ ರುಚಿಯುಂಡಿದೆ.

* 35 ಬಾರಿ ವಿರಾಟ್ 50+: ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್’ನಲ್ಲಿ ಇದುವರೆಗೆ 35 ಬಾರಿ 50+ ರನ್[31 ಅರ್ಧಶತಕ, 4 ಶತಕ] ಬಾರಿಸಿದರೆ, ಇಂದಿನ ಪಂದ್ಯದಲ್ಲಿ ವಿರಾಟ್ 50 ಬಾರಿಸಿದರೆ, ನಾಯಕನಾಗಿ ಅತಿಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ಗೌತಮ್ ಗಂಭೀರ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಳ್ಳಲಿದ್ದಾರೆ.

* ವಿರಾಟ್, ಉತ್ತಪ್ಪ @85: ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರಾಬಿನ್ ಉತ್ತಪ್ಪ 85 ಬಾರಿ ಸೋಲಿನ ರುಚಿ ಅನುಭವಿಸಿದ್ದಾರೆ.[ಸೂಪರ್ ಓವರ್ ಫಲಿತಾಂಶ ಹೊರತುಪಡಿಸಿ]  ಈ ಪಂದ್ಯದಲ್ಲಿ ಒಬ್ಬರು ಇನ್ನೊಬ್ಬರನ್ನು ಹಿಂದಿಕ್ಕಲಿದ್ದಾರೆ.

* ಸುನಿಲ್ ನರೈನ್: ಕೆಕೆಆರ್ ಸ್ಪಿನ್ನರ್ ಸುನಿಲ್ ನರೈನ್ ಇದುವರೆಗೂ ಮೂರು ಐಪಿಎಲ್ ಪಂದ್ಯಗಳನ್ನಾಡಿದ್ದು ಒಂದು ವಿಕೆಟ್ ಪಡೆಯಲು ಸಫಲವಾಗಿಲ್ಲ.