ಬೆಂಗಳೂರು[ಏ.05]: ಸೋಲಿನ ಕೂಪಕ್ಕೆ ಬಿದ್ದು ಒದ್ದಾಡುತ್ತಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ-ಆಫ್‌ಗೇರಬೇಕಿದ್ದರೆ ಗೆಲುವಿನ ದಾರಿ ಹುಡುಕಿಕೊಳ್ಳಬೇಕಿದೆ. ಶುಕ್ರವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ ಸೆಣಸಲಿರುವ ವಿರಾಟ್‌ ಕೊಹ್ಲಿ ಪಡೆ, ಗೆಲುವಿನ ಖಾತೆ ತೆರೆಯಲು ಶತಾಯ ಗತಾಯ ಹೋರಾಟ ನಡೆಸಲಿದೆ.

ಆರ್‌ಸಿಬಿ ತಂಡದ ಪ್ರದರ್ಶನ ಹೀನಾಯವಾಗಿದೆ. ತಂಡ ಸತತ 4 ಪಂದ್ಯಗಳಲ್ಲಿ ಸೋಲುಂಡಿದ್ದು, ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆಯೇ ಅನುಮಾನಗಳು ಶುರುವಾಗಿದೆ. ಕೊಹ್ಲಿ ಇನ್ನೂ ಸರಿಯಾದ ಸಂಯೋಜನೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಅವರ ನಡೆಸುತ್ತಿರುವ ಪ್ರಯೋಗಗಳೆಲ್ಲವೂ ಕೈಕೊಡುತ್ತಿದೆ. ಹೀಗಾಗಿ ಈ ಪಂದ್ಯದಲ್ಲೂ ಕೆಲ ಬದಲಾವಣೆಗೆ ಬೆಂಗಳೂರು ನಾಯಕ ಮುಂದಾಗುವ ನಿರೀಕ್ಷೆ ಇದೆ.

ಕ್ಲಾಸನ್‌, ಸುಂದರ್‌ಗೆ ಅವಕಾಶ?: ಪಾರ್ಥೀವ್‌ ಪಟೇಲ್‌ ರನ್‌ ಗಳಿಸುತ್ತಿದ್ದಾರೆ ಆದರೂ ವೇಗವಾಗಿ ಬ್ಯಾಟ್‌ ಮಾಡುತ್ತಿಲ್ಲ. ತಂಡ ಪವರ್‌-ಪ್ಲೇನಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾಗುತ್ತಿದೆ. ದ.ಆಫ್ರಿಕಾದ ಸ್ಫೋಟಕ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಹೆನ್ರಿಚ್‌ ಕ್ಲಾಸೆನ್‌ರನ್ನು ಬೆಂಚ್‌ನಲ್ಲಿಟ್ಟಿರುವ ಆರ್‌ಸಿಬಿ, ಪಾರ್ಥೀವ್‌ ಬದಲು ಅವರನ್ನು ಕಣಕ್ಕಿಳಿಸಬೇಕಿದೆ. ಜತೆಗೆ ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ರನ್ನು ಆಡಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ವಾಷಿಂಗ್ಟನ್‌, ಪುಣೆ ತಂಡದಲ್ಲಿ ಆಡುತ್ತಿದ್ದಾಗ ಅವರನ್ನು ಧೋನಿ, ಪವರ್‌-ಪ್ಲೇನಲ್ಲಿ ಸಮರ್ಪಕವಾಗಿ ಬಳಸಿಕೊಂಡಿದ್ದರು. ಧೋನಿಯ ನಂಬಿಕೆ ಉಳಿಸಿಕೊಂಡಿದ್ದ ವಾಷಿಂಗ್ಟನ್‌ಗೆ ಕೊಹ್ಲಿ ಅವಕಾಶ ಕೊಡುತ್ತಿಲ್ಲವೇಕೆ ಎನ್ನುವ ಕುತೂಹಲ ಕಾಡುತ್ತಿದೆ.

ನ್ಯೂಜಿಲೆಂಡ್‌ನ ಅನುಭವಿ ವೇಗಿ ಟಿಮ್‌ ಸೌಥಿಯನ್ನೂ ಆರ್‌ಸಿಬಿ ಕಣಕ್ಕಿಳಿಸುತ್ತಿಲ್ಲ. ಈ ಪಂದ್ಯದಲ್ಲಿ ಸೌಥಿ ಆಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ವಿಂಡೀಸ್‌ನ ಶಿಮ್ರೊನ್‌ ಹೆಟ್ಮೇಯರ್‌ ನಾಲ್ಕೂ ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದು, ಅವರ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ.

ಎಬಿಡಿ, ಕೊಹ್ಲಿ ಮೇಲೆ ಒತ್ತಡ: ಆರ್‌ಸಿಬಿಯ ಬಹುತೇಕ ಆಟಗಾರರು ಸತತ ವೈಫಲ್ಯ ಕಾಣುತ್ತಿರುವ ಕಾರಣ, ನಾಯಕ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯ​ರ್ಸ್ ಮೇಲೆ ಪಂದ್ಯದಿಂದ ಪಂದ್ಯಕ್ಕೆ ಒತ್ತಡ ಹೆಚ್ಚುತ್ತಿದೆ. ಇಬ್ಬರ ವಿಕೆಟ್‌ ಕಿತ್ತರೆ ಸಾಕು, ಪಂದ್ಯ ಗೆದ್ದಂತೆ ಎನ್ನುವ ತೀರ್ಮಾನಕ್ಕೆ ಎದುರಾಳಿಗಳು ಬಂದಂತಿದೆ. ಒತ್ತಡ ಹೆಚ್ಚಾದಂತೆ ಕೊಹ್ಲಿ, ಎಬಿಡಿ ಸಹ ಮಂಕಾಗುತ್ತಿದ್ದಾರೆ. ಸ್ಪಿನ್ನರ್‌ಗಳ ಎದುರು ಇಬ್ಬರೂ ಸಹ ತಿಣುಕಾಡುತ್ತಿದ್ದು, ಕೆಕೆಆರ್‌ ಮೂವರು ಸ್ಪಿನ್ನರ್‌ಗಳೊಂದಿಗೆ ಆಡುವ ಕಾರಣ ತಂಡದಲ್ಲಿ ಆತಂಕ ಹೆಚ್ಚಾಗಿದೆ.

ಕುಲ್ದೀಪ್‌, ನರೈನ್‌ ಹಾಗೂ ಚಾವ್ಲಾ ಮೂವರು ಗುಣಮಟ್ಟದ ಸ್ಪಿನ್ನರ್‌ಗಳಾಗಿದ್ದು, ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಿಗೆ ಕ್ರೀಸ್‌ನಲ್ಲಿ ಕಠಿಣ ಸಮಯ ಎದುರಾಗಲಿದೆ. ಜತೆಗೆ ವೇಗಿಗಳಾದ ಪ್ರಸಿದ್ಧ್ ಕೃಷ್ಣ, ಲಾಕಿ ಫಗ್ರ್ಯೂಸನ್‌ ಸಹ ಅತ್ಯುತ್ತಮ ಲಯದಲ್ಲಿದ್ದಾರೆ. ಆ್ಯಂಡ್ರೆ ರಸೆಲ್‌ ಬ್ಯಾಟಿಂಗ್‌ ಮಾತ್ರವಲ್ಲದೆ ಪರಿಣಾಮಕಾರಿ ಬೌಲಿಂಗ್‌ ದಾಳಿಯನ್ನೂ ನಡೆಸಬಲ್ಲರು. ಕೆಕೆಆರ್‌ನಲ್ಲಿ ಆರು ಮಂದಿ ತಜ್ಞ ಬೌಲರ್‌ಗಳಿದ್ದಾರೆ. ಆರ್‌ಸಿಬಿಗೆ 6ನೇ ಬೌಲರ್‌ ಸಮಸ್ಯೆ ಬಲವಾಗಿ ಕಾಡುತ್ತಿದೆ.

ರಾಣಾ, ರಸೆಲ್‌ ಭೀತಿ: ಆರ್‌ಸಿಬಿ ಬೌಲರ್‌ಗಳು ಪವರ್‌-ಪ್ಲೇ ಹಾಗೂ ಡೆತ್‌ ಓವರ್‌ ಎರಡರಲ್ಲೂ ದುಬಾರಿಯಾಗುತ್ತಿದ್ದಾರೆ. ಯಜುವೇಂದ್ರ ಚಹಲ್‌ ವಿಕೆಟ್‌ ಕಬಳಿಸುವ ಜತೆಗೆ ರನ್‌ ನಿಯಂತ್ರಿಸುವುದರಲ್ಲೂ ಯಶಸ್ಸು ಕಾಣುತ್ತಿದ್ದಾರೆ. ಆದರೆ ಅವರಿಗೆ ಉಳಿದವರಿಂದ ಬೆಂಬಲ ಸಿಗುತ್ತಿಲ್ಲ. ನಿತೀಶ್‌ ರಾಣಾ ಆರಂಭಿಕನಾಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಎಲ್ಲೇ ಆಡಿಸಿದರೂ ಯಶಸ್ಸು ಕಾಣುತ್ತಿದ್ದಾರೆ. ರಾಬಿನ್‌ ಉತ್ತಪ್ಪ, ದಿನೇಶ್‌ ಕಾರ್ತಿಕ್‌, ಶುಭ್‌ಮನ್‌ ಗಿಲ್‌ ಸಹ ಲಯದಲ್ಲಿದ್ದಾರೆ. ರಸೆಲ್‌ ಸಿಡಿದರೆ ಆರ್‌ಸಿಬಿ ಬೌಲರ್‌ಗಳಿಗೆ ಖಂಡಿತವಾಗಿಯೂ ಉಳಿಗಾಲವಿಲ್ಲ. ಆರಂಭಿಕ ನರೈನ್‌ ತಂಡಕ್ಕೆ ಸ್ಫೋಟಕ ಆರಂಭ ನೀಡುವಲ್ಲಿ ಎತ್ತಿದ ಕೈ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರು ವೇಗದ ಅರ್ಧಶತಕ ಬಾರಿಸಿದ್ದರು. ಆ ಪ್ರದರ್ಶನವನ್ನು ಮತ್ತೆ ತೋರಿದರೆ ಆರ್‌ಸಿಬಿಗೆ ಸೋಲು ಖಚಿತ.

ಎಲ್ಲಾ ವಿಭಾಗಗಳಲ್ಲೂ ಕೆಕೆಆರ್‌, ಆರ್‌ಸಿಬಿಗಿಂತ ಬಲಿಷ್ಠವಾಗಿ ತೋರುತ್ತಿದೆ. ತಂಡ ಸಮತೋಲನದಿಂದ ಕೂಡಿದೆ. ಸತತ ಸೋಲಿನ ಕಹಿಯನ್ನು ಮರೆತು ಗೆಲುವಿನ ಸಿಹಿ ಸವಿಯುವ ಆರ್‌ಸಿಬಿ ಕನಸು ಈಡೇರಲಿದೆಯೇ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಒಟ್ಟು ಮುಖಾಮುಖಿ: 22

ಆರ್‌ಸಿಬಿ: 09

ಕೆಕೆಆರ್‌: 13

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಪಾರ್ಥೀವ್‌ ಪಟೇಲ್‌, ವಿರಾಟ್‌ ಕೊಹ್ಲಿ(ನಾಯಕ), ಡಿವಿಲಿಯ​ರ್‍ಸ್, ಹೆಟ್ಮೇಯರ್‌, ಮೋಯಿನ್‌ ಅಲಿ, ಮಾರ್ಕಸ್‌ ಸ್ಟೋಯ್ನಿಸ್‌, ಶಿವಂ ದುಬೆ, ಉಮೇಶ್‌ ಯಾದವ್‌, ಸಿರಾಜ್‌, ನವ್‌ದೀಪ್‌ ಸೈನಿ, ಚಹಲ್‌.

ಕೆಕೆಆರ್‌: ಕ್ರಿಸ್‌ ಲಿನ್‌, ಸುನಿಲ್‌ ನರೈನ್‌, ರಾಬಿನ್‌ ಉತ್ತಪ್ಪ, ನಿತೀಶ್‌ ರಾಣಾ, ದಿನೇಶ್‌ ಕಾರ್ತಿಕ್‌, ಆ್ಯಂಡ್ರೆ ರಸೆಲ್‌, ಶುಭ್‌ಮನ್‌ ಗಿಲ್‌, ಪೀಯೂಷ್‌ ಚಾವ್ಲಾ, ಕುಲ್ದೀಪ್‌ ಯಾದವ್‌, ಲಾಕಿ ಫಗ್ರ್ಯೂಸನ್‌, ಪ್ರಸಿದ್ಧ್ ಕೃಷ್ಣ.

ಸ್ಥಳ: ಬೆಂಗಳೂರು 
ಪಂದ್ಯ ಆರಂಭ: ರಾತ್ರಿ 8ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಪಿಚ್‌ ರಿಪೋರ್ಟ್‌

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ ಸ್ನೇಹಿ. ಸಣ್ಣ ಬೌಂಡರಿ ಆಗಿರುವ ಕಾರಣ, ಸಿಕ್ಸರ್‌ ಬಾರಿಸುವ ಅವಕಾಶ ಹೆಚ್ಚಿರಲಿದೆ. ಇಲ್ಲಿ ಮೊದಲು ಬ್ಯಾಟ್‌ ಮಾಡುವ ತಂಡ ಕನಿಷ್ಠ 190 ರನ್‌ ಗಳಿಸಬೇಕಿದೆ. ಸ್ಪಿನ್ನರ್‌ಗಳಿಗೆ ನೆರವು ಸಿಗಲಿದ್ದು, ಯಜುವೇಂದ್ರ ಚಹಲ್‌ ಹಾಗೂ ಕುಲ್ದೀಪ್‌ ಯಾದವ್‌ ನಡುವಿನ ಪೈಪೋಟಿ ನಿರೀಕ್ಷೆ ಹೆಚ್ಚಿಸಿದೆ. ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡುವ ಸಾಧ್ಯತೆ ಹೆಚ್ಚು.