WFI Elections ಮತ್ತೆ ಮುಂದೂಡಿಕೆ; ಜುಲೈ 11ಕ್ಕೆ ಮರು ನಿಗದಿ
ಭಾರತೀಯ ಕುಸ್ತಿ ಒಕ್ಕೂಟ ಚುನಾವಣೆ ಮತ್ತೆ ಮುಂದೂಡಿಕೆ
ಜುಲೈ 11ರಂದು ಚುನಾವಣೆ ನಡೆಸಲು ಡಬ್ಲ್ಯುಎಫ್ಐಗೆ ನೇಮಿಸಲಾಗಿದ್ದ ತಾತ್ಕಾಲಿಕ ಸಮಿತಿ ತೀರ್ಮಾನ
ಈ ಮೊದಲು ಜುಲೈ 6ಕ್ಕೆ ಡಬ್ಲ್ಯುಎಫ್ಐಗೆ ಚುನಾವಣೆ ನಿಗದಿಯಾಗಿತ್ತು
ನವದೆಹಲಿ(ಜೂ.22): ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್) ಚುನಾವಣೆ ಮತ್ತೆ ಮುಂದೂಡಿಕೆಯಾಗಿದ್ದು, ಜುಲೈ 11ರಂದು ಚುನಾವಣೆ ನಡೆಸಲಾಗುವುದು ಎಂದು ಡಬ್ಲ್ಯುಎಫ್ಐಗೆ ನೇಮಿಸಲಾಗಿದ್ದ ತಾತ್ಕಾಲಿಕ ಸಮಿತಿ ಬುಧವಾರ ಪ್ರಕಟಿಸಿದೆ. ಈ ಮೊದಲು ಜುಲೈ 6ಕ್ಕೆ ಡಬ್ಲ್ಯುಎಫ್ಐಗೆ ಚುನಾವಣೆ ನಿಗದಿಯಾಗಿತ್ತು. ಆದರೆ ಡಬ್ಲ್ಯುಎಫ್ಐನಿಂದ ಅನರ್ಹಗೊಂಡಿರುವ ಮಹಾರಾಷ್ಟ್ರ, ಹರ್ಯಾಣ, ತೆಲಂಗಾಣ, ರಾಜಸ್ಥಾನ ಹಾಗೂ ಹಿಮಾಚಲ ಪ್ರದೇಶ ರಾಜ್ಯ ಸಂಸ್ಥೆಗಳು ತಮಗೆ ಮತದಾನ ಹಕ್ಕು ನೀಡಬೇಕೆಂದು ಒತ್ತಾಯಿಸಿತ್ತು.
ಈ ಬಗ್ಗೆ ನಿವೃತ್ತ ಹೈಕೋರ್ಚ್ ನ್ಯಾಯಾದೀಶ ಎಂ.ಎಂ.ಕುಮಾರ್ ಅವರನ್ನೊಳಗೊಂಡ 3 ಮಂದಿಯ ಸಮಿತಿ ಈ ಐದು ಸಂಸ್ಥೆಗಳ ಮನವಿ ಬಗ್ಗೆ ವಿಚಾರಣೆ ನಡೆಸಿದ್ದು, ಇನ್ನಷ್ಟೇ ಆದೇಶ ಹೊರಡಿಸಬೇಕಿದೆ. ಹೀಗಾಗಿ ಚುನಾವಣೆಯನ್ನು ಮುಂದೂಡಲಾಗಿದೆ.
ವರ್ಷದ ಬಳಿಕ ಮತ್ತೆ ಕುಸ್ತಿ ಸ್ಪರ್ಧೆಗೆ ವಿನೇಶ್ ಫೋಗಾಟ್!
ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ನಿರ್ಗಮಿತ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ತಾರಾ ಕುಸ್ತಿಪಟು ವಿನೇಶ್ ಫೋಗಾಟ್ ಸುಮಾರು 1 ವರ್ಷದ ಬಳಿಕ ಮತ್ತೆ ಸ್ಪರ್ಧಾತ್ಮಕ ಕುಸ್ತಿಗೆ ಮರಳುತ್ತಿದ್ದು, ಜುಲೈ 13ರಿಂದ ಹಂಗೇರಿಯ ಬೂಡಾಪೆಸ್ಟ್ನಲ್ಲಿ ಆರಂಭವಾಗಲಿರುವ ರ‍್ಯಾಂಕಿಂಗ್ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿನೇಶ್ ಕಳೆದ ವರ್ಷ ಆಗಸ್ಟ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕೊನೆ ಬಾರಿ ಆಡಿದ್ದರು. ವಿನೇಶ್ ಹೊರತುಪಡಿಸಿ ಪ್ರತಿಭಟನೆಯಲ್ಲಿ ಇತರ ಕುಸ್ತಿಪಟುಗಳು ಬೂಡಾಪೆಸ್ಟ್ನಲ್ಲಿ ಆಡದೆ, ಏಷ್ಯನ್ ಗೇಮ್ಸ್ ಟ್ರಯಲ್ಸ್ನತ್ತ ಹೆಚ್ಚು ಗಮನ ಹರಿಸಲಿದ್ದಾರೆ ಎಂದು ತಿಳಿದುಬಂದಿದೆ.
ವಾಟರ್ ಪೋಲೋ: ಕರ್ನಾಟಕ ವನಿತಾ ತಂಡ ಶುಭಾರಂಭ
ಬೆಂಗಳೂರು: ಭಾರತೀಯ ಈಜು ಸಂಸ್ಥೆ(ಎಸ್ಎಫ್ಐ) ಮೊದಲ ಬಾರಿ ಈಜಿನಿಂದ ಪ್ರತ್ಯೇಕವಾಗಿ ಆಯೋಜಿಸುತ್ತಿರುವ ರಾಷ್ಟ್ರೀಯ ವಾಟರ್ ಪೋಲೋ ಹಾಗೂ ಡೈವಿಂಗ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ಮೊದಲ ದಿನ ಮಿಶ್ರ ಫಲ ಅನುಭವಿಸಿದೆ. ನಗರದ ಬಸವನಗುಡಿ ಈಜು ಕೇಂದ್ರದಲ್ಲಿ ಬುಧವಾರ ಆರಂಭಗೊಂಡ ವಾಟರ್ ಪೋಲೋ ಸ್ಪರ್ಧೆಯಲ್ಲಿ ಮಹಿಳೆಯರ ತಂಡ ಹರ್ಯಾಣ ವಿರುದ್ಧ 18-0 ಅಂತರದಲ್ಲಿ ಗೆಲುವು ಸಾಧಿಸಿತು. ರೋಶಿನಿ ಎಸ್. ಅವರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
90ನೇ ಗೋಲು: ಸಕ್ರಿಯ ಫುಟ್ಬಾಲಿಗರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಚೆಟ್ರಿ!
ಇನ್ನು, ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಬಂಗಾಳ ವಿರುದ್ಧ 4-13 ಅಂಕಗಳ ಅಂತರದಲ್ಲಿ ಸೋಲನುಭವಿಸಿತು. ವಾಟರ್ ಪೋಲೋ ಸ್ಪರ್ಧೆಗಳು ಭಾನುವಾರ ಕೊನೆಗೊಳ್ಳಲಿವೆ. ಇನ್ನು ಕೂಟದ ಡೈವಿಂಗ್ ಸ್ಪರ್ಧೆಗಳು ಗುರುವಾರ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಕೇಂದ್ರದಲ್ಲಿ ಆರಂಭವಾಗಲಿದೆ. ವಾಟರ್ ಪೋಲೋ ಪುರುಷರ ವಿಭಾಗದಲ್ಲಿ 12, ಮಹಿಳಾ ವಿಭಾಗದಲ್ಲಿ 9 ತಂಡಗಳು ಸ್ಪರ್ಧಿಸುತ್ತಿವೆ. ಡೈವಿಂಗ್‌ನಲ್ಲಿ 9 ರಾಜ್ಯಗಳ 54 ಸ್ಪರ್ಧಿಗಳಿದ್ದಾರೆ.
ಮಹಿಳಾ ಫುಟ್ಬಾಲ್: 2ನೇ ಸೋಲು ಕಂಡ ಕರ್ನಾಟಕ
ಅಮೃತ್ಸರ್: 27ನೇ ರಾಷ್ಟ್ರೀಯ ಹಿರಿಯ ಮಹಿಳೆಯರ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್ ಸುತ್ತಿನಲ್ಲಿ ಕರ್ನಾಟಕ ಮತ್ತೊಂದು ಸೋಲನುಭವಿಸಿದ್ದು, ನಾಕೌಟ್‌ಗೇರುವ ಅವಕಾಶ ತಪ್ಪಿಸಿಕೊಂಡಿದೆ. ಬುಧವಾರ ‘ಎ’ ಗುಂಪಿನ 4ನೇ ಪಂದ್ಯದಲ್ಲಿ ಕರ್ನಾಟಕ ತಂಡ ಒಡಿಶಾ ವಿರುದ್ಧ 0-4 ಗೋಲುಗಳಿಂದ ಪರಾಭವಗೊಂಡಿತು.
ಇದರೊಂದಿಗೆ ಕರ್ನಾಟಕ ಸದ್ಯ 1 ಗೆಲುವು, 2 ಸೋಲು ಹಾಗೂ 1 ಡ್ರಾದೊಂದಿಗೆ ಕೇವಲ 4 ಅಂಕ ಸಂಪಾದಿಸಿ 4ನೇ ಸ್ಥಾನದಲ್ಲೇ ಬಾಕಿಯಾಗಿದೆ. ತಮಿಳುನಾಡು(12 ಅಂಕ) ಅಗ್ರಸ್ಥಾನ ಕಾಯ್ದುಕೊಂಡಿದ್ದು, ಒಡಿಶಾ(09), ಚಂಡೀಗಢ(04) ನಂತರದ 3 ಸ್ಥಾನಗಳಲ್ಲಿವೆ. ಕರ್ನಾಟಕ ಕೊನೆ ಪಂದ್ಯದಲ್ಲಿ ಶುಕ್ರವಾರ ಜಾರ್ಖಂಡ್ ವಿರುದ್ಧ ಆಡಲಿದೆ.
43ರ ವೀನಸ್‌ಗೆ ವಿಂಬಲ್ಡನ್ ವೈಲ್ಡ್ ಕಾರ್ಡ್ ಪ್ರವೇಶ!
ಲಂಡನ್: ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ, 43 ವರ್ಷದ ವೀನಸ್ ವಿಲಿಯಮ್ಸ್ 24ನೇ ಬಾರಿಗೆ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಬುಧವಾರ ವೀನಸ್‌ಗೆ ಟೂರ್ನಿ ಆಯೋಜಕರು ವೈಲ್ಡ್ ಕಾರ್ಡ್ ಪ್ರವೇಶ ನೀಡುವುದಾಗಿ ಘೋಷಿಸಿದ್ದಾರೆ. 5 ಬಾರಿ ವಿಂಬಲ್ಡನ್ ಸೇರಿ 7 ಗ್ರ್ಯಾನ್ ಸ್ಲಾಂಗಳನ್ನು ಗೆದ್ದಿರುವ ವೀನಸ್ ಸದ್ಯ ವಿಶ್ವ ರ‍್ಯಾಂಕಿಂಗ್‌ನಲ್ಲಿ 697ನೇ ಸ್ಥಾನದಲ್ಲಿದ್ದಾರೆ. ಜು.3ರಿಂದ ವಿಂಬಲ್ಡನ್ ಆರಂಭಗೊಳ್ಳಲಿದೆ.