ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಿಯೆಟ್ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೋಮವಾರ ರಾತ್ರಿ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಪ್ರಶಸ್ತಿ ಸಮಾರಂಭ ನಡೆಯಿತು. ಕೊಹ್ಲಿ ಗೈರು ಹಾಜರಿಯಲ್ಲಿ ರೋಹಿತ್ ಶರ್ಮಾ ಪ್ರಶಸ್ತಿ ಪಡೆದರು. ಭಾರತದ ಮಾಜಿ ಕ್ರಿಕೆಟಿಗ ಫಾರೂಕ್ ಇಂಜಿನಿಯರ್ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಪಡೆದರು. ಶಿಖರ್ ಧವನ್ ವರ್ಷದ ಬ್ಯಾಟ್ಸ್‌ಮನ್ ಗೌರವಕ್ಕೆ ಪಾತ್ರರಾದರು.

ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ವರ್ಷದ ಬೌಲರ್ ಪ್ರಶಸ್ತಿ ಪಡೆದರೆ, ಐಪಿಎಲ್‌ನಲ್ಲಿ ಅದ್ಭುತ ಬೌಲಿಂಗ್‌ನಿಂದ ಗಮನಸೆಳೆದ ಆಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ವರ್ಷದ ಟಿ20 ಬೌಲರ್ ಪ್ರಶಸ್ತಿಗೆ ಪಾತ್ರರಾದರು. ಐಪಿಎಲ್‌ನಲ್ಲಿ ರಶೀದ್ 21 ವಿಕೆಟ್ ಪಡೆದು ಮಿಂಚಿದ್ದರು. ನ್ಯೂಜಿಲೆಂಡ್ ಆಟಗಾರ ಕಾಲಿನ್ ಮನ್ರೊ ಟಿ20 ಬ್ಯಾಟ್ಸ್‌ಮನ್ ಪ್ರಶಸ್ತಿ ಪಡೆದರು. ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್, ವರ್ಷದ ಅತ್ಯದ್ಭುತ ಇನ್ನಿಂಗ್ಸ್ ಪ್ರಶಸ್ತಿ ಪಡೆದರೆ, ದೇಶಿಯ ಕ್ರಿಕೆಟ್‌ನುದ್ದಕ್ಕೂ ಅತ್ಯದ್ಭುತ ಪ್ರದರ್ಶನ ತೋರಿದ ಕರ್ನಾಟಕದ ಬ್ಯಾಟ್ಸ್ ಮನ್ ಮಯಾಂಕ್ ಅಗರ್‌ವಾಲ್ ವರ್ಷದ ದೇಶಿಯ ಕ್ರಿಕೆಟಿಗ ಪ್ರಶಸ್ತಿ ಪಡೆದರು. 19 ವರ್ಷದೊಳಗಿನ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಶುಭ್‌ಮನ್ ಗಿಲ್ ಪಾತ್ರರಾದರು.