"ಈ ಮಟ್ಟದಲ್ಲಿ ಆಡಲು ಕೋಟ್ಯಂತರ ಭಾರತೀಯರಲ್ಲಿ ನಮ್ಮನ್ನು ಆಯ್ಕೆ ಮಾಡಲಾಗಿದೆ. ಹೀಗಿರುವಾಗ ಮಾಡಿದ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುವುದು ಎಷ್ಟು ಸರಿ? ನೀವು ಪ್ರಾಮಾಣಿಕವಾಗಿರಬೇಕಾಗುತ್ತದೆ. ನೋಯುವಂಥ ಮಾತುಗಳನ್ನ ಕೆಲವೊಮ್ಮೆ ಆಡಬೇಕಾಗುತ್ತದೆ," ಎಂದು ಕೊಹ್ಲಿ ಹೇಳಿದ್ದಾರೆ.

ಲಂಡನ್(ಜೂನ್ 12): ಶ್ರೀಲಂಕಾ ವಿರುದ್ಧ ಬೃಹತ್ ಮೊತ್ತ ಕಲೆಹಾಕಿಯೂ ಕೈಸುಟ್ಟುಕೊಂಡಿದ್ದ ಟೀಮ್ ಇಂಡಿಯಾ ಹರಿಣಗಳ ಪಡೆಯ ಮೇಲೆ ಗೆಲ್ಲುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ. ದಕ್ಷಿಣ ಆಫ್ರಿಕಾದ ಬಲಿಷ್ಠ ಬ್ಯಾಟಿಂಗ್ ಪಡೆಯ ಮುಂದೆ ಬ್ಲೂಬಾಯ್ಸ್ ಆಟ ಎಳ್ಳಷ್ಟೂ ಸಾಗಲ್ಲ ಎಂದು ಅನೇಕರು ಅಂದುಕೊಂಡಿದ್ದರು. ಆದರೆ, ನಿನ್ನೆ ದಕ್ಷಿಣ ಆಫ್ರಿಕಾವನ್ನು ಟೀಮ್ ಇಂಡಿಯಾ ಅದ್ಭುತ ರೀತಿಯಲ್ಲಿ ಬಗ್ಗುಬಡಿಯಿತು. ಆಟದ ಎಲ್ಲಾ ವಿಭಾಗಗಳಲ್ಲೂ ಭಾರತೀಯರು ಅಮೋಘ ಪ್ರದರ್ಶನ ನೀಡಿದರು. ಲಂಕಾ ವಿರುದ್ಧದ ಸೋಲಿನ ಕಹಿ ಎಲ್ಲಿಯೂ ಕಾಣಲಿಲ್ಲ. ಅಕ್ಷರಶಃ ಚಾಂಪಿಯನ್ನರ ರೀತಿ ಭಾರತೀಯ ಆಟಗಾರರು ಆಡಿದರು. ಟೀಮ್ ಇಂಡಿಯಾದ ಇಂಥ ಭರ್ಜರಿ ಕಂಬ್ಯಾಕ್'ಗೆ ಕಾರಣವೇನು? ನಿಸ್ಸಂಶಯವಾಗಿ ಇದರ ಹಿಂದಿದ್ದಾರೆ ವಿರಾಟ್ ಕೊಹ್ಲಿ.

ಸರಿ ಮಾಡಲು ನೋಯಿಸಲೂ ಸಿದ್ಧ ಈ ಕೊಹ್ಲಿ:
ಪಂದ್ಯಕ್ಕೆ ಮುನ್ನ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡಕ್ಕೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ತಂಡದ ಪ್ರತಿಯೊಬ್ಬರೂ ಆಟದ ಮಟ್ಟವನ್ನೇ ಏರಿಸಿಕೊಳ್ಳಲೇ ಬೇಕು ಎಂದು ಹೇಳಿದ್ದಾರೆ. ಮಾಧ್ಯಮಗಳ ಮುಂದೆ ಕೊಹ್ಲಿಯವರೇ ಈ ವಿಚಾರವನ್ನು ಅರುಹಿದ್ದಾರೆ.

"ಈ ಮಟ್ಟದಲ್ಲಿ ಆಡಲು ಕೋಟ್ಯಂತರ ಭಾರತೀಯರಲ್ಲಿ ನಮ್ಮನ್ನು ಆಯ್ಕೆ ಮಾಡಲಾಗಿದೆ. ಹೀಗಿರುವಾಗ ಮಾಡಿದ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುವುದು ಎಷ್ಟು ಸರಿ? ನೀವು ಪ್ರಾಮಾಣಿಕವಾಗಿರಬೇಕಾಗುತ್ತದೆ. ನೋಯುವಂಥ ಮಾತುಗಳನ್ನ ಕೆಲವೊಮ್ಮೆ ಆಡಬೇಕಾಗುತ್ತದೆ," ಎಂದು ಕೊಹ್ಲಿ ಹೇಳಿದ್ದಾರೆ.

"ನನ್ನನ್ನೂ ಸೇರಿದಂತೆ ನಾವು ಇಂತಿಂಥ ತಪ್ಪು ಮಾಡಿದೆವು ಎಂದು ಅವರ ಮುಂದೆ ಬಿಚ್ಚಿಡಬೇಕಾಯಿತು. ಈ ತಪ್ಪುಗಳನ್ನ ಒಪ್ಪಿಕೊಂಡು ತಿದ್ದಿ ಸರಿಪಡಿಸಬೇಕಾದ್ದು ನಮ್ಮ ಕರ್ತವ್ಯ ಎಂದು ತಿಳಿಹೇಳಿದೆ," ಎಂದು ವಿರಾಟ್ ವಿವರಿಸಿದ್ದಾರೆ.

"ಒಬ್ಬರು, ಇಬ್ಬರು, ಮೂವರು ಆಟಗಾರರಿಗೆ ಬೊಟ್ಟು ಮಾಡಿ ತೋರಿಸಲಿಲ್ಲ. ಪ್ರತಿಯೊಬ್ಬರನ್ನೂ ಹೊಣೆಯಾಗಿಸಬೇಕಾಯಿತು. ಎಲ್ಲರೂ ತಕ್ಕ ರೀತಿಯಲ್ಲೇ ಸ್ಪಂದಿಸಿದರು," ಎಂದು ಕೊಹ್ಲಿ ತಿಳಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಯನ್ನು ಕೊಹ್ಲಿ ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಜಸ್'ಪ್ರೀತ್ ಬುಮ್ರಾ ಅವರ ಬೌಲಿಂಗ್'ನ್ನು ಕೊಂಡಾಡಿದ್ದಾರೆ. ಹೇಗೆ ಬೇಕಾದರೂ ಬಾಲ್ ಹಾಕು ಎಂದು ಬುಮ್ರಾಗೆ ಕೊಹ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರಂತೆ. ಅದು ವರ್ಕೌಟ್ ಆಗಿದೆ.