ನವದೆಹಲಿ(ಸೆ.28): ಏಷ್ಯಾಕಪ್‌ ಟೂರ್ನಿಯಿಂದ ವಿಶ್ರಾಂತಿ ಪಡೆದಿದ್ದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ತಮ್ಮ ಫಿಟ್ನೆಸ್‌ ಸಾಬೀತು ಪಡಿಸಬೇಕಿದ್ದು ಇಂದು ಯೋ-ಯೋ ಟೆಸ್ಟ್‌ಗೆ ಒಳಗಾಗಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. 

ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಸೆ.28ರ ಬಳಿಕ ಬಿಸಿಸಿಐ ತಂಡವನ್ನು ಪ್ರಕಟಿಸಲಿದ್ದು, ತಂಡದಲ್ಲಿ ಸ್ಥಾನ ಪಡೆಯಲು ಯೋ-ಯೋ ಟೆಸ್ಟ್‌ನಲ್ಲಿ ಪಾಸಾಗುವುದು ಕಡ್ಡಾಯವಾಗಿದೆ. ಸ್ಪಿನ್ನರ್‌ ಅಶ್ವಿನ್‌ ಮತ್ತು ಇಶಾಂತ್‌ ಶರ್ಮಾ ಸೆ.29ರಂದು ಫಿಟ್ನೆಸ್‌ ಟೆಸ್ಟ್‌ಗೆ ಒಳಗಾಗಲಿದ್ದಾರೆ. ಇಶಾಂತ್ ಶರ್ಮಾ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದರು, ಆದರೆ ಅಶ್ವಿನ್ ಗಾಯದ ಸಮಸ್ಯೆಯಿಂದಾಗಿ ಕೊನೆಯ ಪಂದ್ಯದಿಂದ ಹೊರಬಿದ್ದಿದ್ದರು. 

ಇದನ್ನು ಓದಿ: ರದ್ದಾಗುತ್ತಾ ಟೀಂ ಇಂಡಿಯಾದ ಯೋ-ಯೋ ಟೆಸ್ಟ್?

ಟೀಂ ಇಂಡಿಯಾ ಕ್ರಿಕೆಟಿಗರು ಯೋ ಯೋ ಟೆಸ್ಟ್’ನಲ್ಲಿ 16.1 ಅಂಕ ಗಳಿಸಿದರೆ ಮಾತ್ರ ಆಯ್ಕೆ ಸಮಿತಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. 

ಅಷ್ಟಕ್ಕೂ ಯೋ ಯೋ ಟೆಸ್ಟ್ ಅಂದ್ರೇನು..?
ಕ್ರಮಬದ್ಧ ಮತ್ತು ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯ ನಿರೂಪಿಸುವುದೇ ಯೋ ಯೋ ಫಿಟ್ನೆಸ್. 20 ಮೀ. ಅಳತೆಯಲ್ಲಿ 2 ಕೋನ್‌ಗಳನ್ನು ನೇರ ಲೈನ್‌ನ ಒಳಗೆ ಇರಿಸಲಾಗಿರುತ್ತದೆ. ಆಟಗಾರ ಒಂದು ಲೈನ್‌ನಿಂದ ಓಟವನ್ನು ಆರಂಭಿಸಬೇಕು. ಎರಡೂ ಲೈನ್‌ನ ಅಂತರದಲ್ಲಿ ಇಟ್ಟ ಕೋನ್‌ಗಳನ್ನು ಬೀಪ್ ಧ್ವನಿ ಅನುಸರಿಸಿ ಸುತ್ತುವರಿಯಬೇಕು. ಒಟ್ಟು 3 ಬೀಪ್ ಧ್ವನಿಗಳ ಅಂತರದಲ್ಲಿ ಸುತ್ತಬೇಕು. ಇವು ಸ್ಟಾರ್ಟ್, ಟರ್ನ್ ಹಾಗೂ ಫಿನಿಶ್‌ನ ಸೂಚನೆ ಆಗಿರುತ್ತವೆ. ಪ್ರತಿ ಬಾರಿ ಸುತ್ತಿದಾಗಲೂ ಬೀಪ್ ಧ್ವನಿಗಳ ನಡುವಿನ ಅಂತರ ಕಡಿಮೆ ಆಗುತ್ತಿರುತ್ತದೆ. 2 ಬಾರಿ ಬೀಪ್ ಸಮಯದೊಳಗೆ ಒಟ್ಟಾರೆ 40 ಮೀ. ಪೂರೈಸಲು ವಿಫಲರಾದರೆ ಪರೀಕ್ಷೆ ಕೊನೆಗೊಳ್ಳುತ್ತದೆ. ಲ್ಯಾಪ್ಸ್ ಮತ್ತು ಓಟದ ವೇಗ ಆಧರಿಸಿ ಅಂಕ ನೀಡಲಾಗುತ್ತದೆ.