ವೆಸ್ಟ್ಇಂಡೀಸ್ ವಿರುದ್ದದ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಬರೆಯಲು ರೆಡಿಯಾಗಿದ್ದಾರೆ. ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ದಾಖಲೆ ಪುಡಿ ಮಾಡಲು ಕೊಹ್ಲಿ ಸಜ್ಜಾಗಿದ್ದಾರೆ. 

ನವದೆಹಲಿ(ಅ.01): ಏಷ್ಯಾಕಪ್ ಟೂರ್ನಿಯಿಂದ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ವೆಸ್ಟ್ಇಂಡೀಸ್ ವಿರುದ್ಧದ ಸರಣಿಗೆ ಸಜ್ಜಾಗಿದ್ದಾರೆ. ಅಕ್ಟೋಬರ್ 4 ರಿಂದ ಆರಂಭಗೊಳ್ಳಲಿರುವ ಟೆಸ್ಟ್ ಸರಣಿ ಕೊಹ್ಲಿ ಮತ್ತೆ ಟೀಂ ಇಂಡಿಯಾವನ್ನ ಮುನ್ನಡೆಸಲಿದ್ದಾರೆ.

2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಹಲವು ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ದಾಖಲೆ ಪುಡಿ ಮಾಡಲು ರೆಡಿಯಾಗಿದ್ದಾರೆ. ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಮೊಹಮ್ಮದ್ ಅಜರುದ್ದೀನ್ 539 ರನ್ ಸಿಡಿಸಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧ ಈಗಾಗಲೇ 502 ರನ್ ಸಿಡಿಸಿದ್ದಾರೆ. ಅಜರ್ ದಾಖಲೆ ಮುರಿಯಲು ಕೊಹ್ಲಿಗೆ ಇನ್ನು 37 ರನ್ ಅವಶ್ಯಕತೆ ಇದೆ. ಹೀಗಾಗಿ ಈ ಬಾರಿಯ ವೆಸ್ಟ್ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ, ಮಾಜಿ ನಾಯಕ ಅಜರ್ ದಾಖಲೆ ಮುರಿಯೋದು ಬಹುತೇಕ ಖಚಿತ.

ವೆಸ್ಟ್ಇಂಡೀಸ್ ವಿರುದ್ಧ ಗರಿಷ್ಠ ರನ್ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಗವಾಸ್ಕರ್ ವಿಂಡೀಸ್ ವಿರುದ್ಧ 2746 ರನ್ ಸಿಡಿಸಿದ್ದಾರೆ. ಮಾಜಿ ನಾಯಕ ರಾಹುಲ್ ದ್ರಾವಿಡ್ 1978 , ಮಾಜಿ ಕ್ರಿತೆಟಿಗ ವಿವಿಎಲ್ ಲಕ್ಷ್ಮಣ್ 1715 ರನ್ ಸಿಡಿಸಿ ನಂತ್ರದ ಸ್ಥಾನ ಪಡೆದಿದ್ದಾರೆ.