"ಏನೇ ಮಾಡಿದರೂ ಅದನ್ನು ಮುಚ್ಚಿಟ್ಟುಕೊಳ್ಳಬೇಡ. ಅದರಿಂದ ಸುಮ್ಮನೆ ಒತ್ತಡ ಬರುತ್ತದೆ. ಅಲ್ಲದೇ, ನೀನು ರಿಲೇಷನ್'ಶಿಪ್ ಬೆಳೆಸಿಕೊಳ್ಳುತ್ತಿದ್ದೀಯೇ ಹೊರತು ಯಾವ ತಪ್ಪನ್ನೂ ಮಾಡುತ್ತಿಲ್ಲ," ಎಂದು ಜಹೀರ್ ತಮಗೆ ಸಲಹೆ ಕೊಟ್ಟಿದ್ದಾಗಿ ಕೊಹ್ಲಿ ಹೇಳುತ್ತಾರೆ.
ನವದೆಹಲಿ(ನ. 04): ಪ್ರೀತಿ ಮಾಯೆ ಹುಷಾರು ಎಂದು ಹೇಳುವುದುಂಟು. ಆದರೂ ಪ್ರೀತಿಯ ಬಲೆಗೆ ಬೀಳದವರು ವಿರಳ. ಕ್ರಿಕೆಟ್ ಸ್ಟಾರ್'ಗಳು, ಅದರಲ್ಲೂ ಈ ತಲೆಮಾರಿನ ಕ್ರಿಕೆಟಿಗರಿಗೆ ಚೆಂಡಿನ ಜೊತೆಗೆ ಲವ್ ಕೂಡ ಅಂಟಿಕೊಂಡುಬಿಡುತ್ತದೆ. ಕ್ರಿಕೆಟ್ ಮತ್ತು ಸಿನಿಮಾ ನಟಿಯರ ನಡುವಿನ ಅಫೇರ್'ಗಳ ಕಥೆ ಬಹಳ ಫೇಮಸ್. ಆದರೆ, ಯಾವುದೂ ಕೂಡ ಓಪನ್ ಅಲ್ಲ, ಅವೊಂದು ರೀತಿ ಗುಪ್ತ್ ಗುಪ್ತ್... ಅಥವಾ ಓಪನ್ ಸೀಕ್ರೆಟ್. ಈ ವಿಚಾರದಲ್ಲಿ ವಿರಾಟ್ ಕೊಹ್ಲಿ ನೇರಾನೇರ. ಅನುಷ್ಕಾ ಶರ್ಮಾ ಜೊತೆ ಸುತ್ತಾಡುವುದನ್ನು ಕೊಹ್ಲಿ ಎಂದೂ ನಿರಾಕರಿಸುವ ಗೋಜಿಗೆ ಹೋಗಿಲ್ಲ. ಆಕೆ ತನ್ನ ಬಾಳಲ್ಲಿ ಎಷ್ಟು ಮುಖ್ಯ ಎಂಬುದನ್ನು ಕೊಹ್ಲಿ ಹಲವು ಬಾರಿ ವಿವರಿಸಿರುವುದುಂಟು. ಅನುಷ್ಕಾ ಜೊತೆಗಿನ ಸಂಬಂಧವನ್ನು ಕೊಹ್ಲಿ ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಎಂದೂ ಮಾಡಲಿಲ್ಲ.
ಕೊಹ್ಲಿಗೆ ಈ ಪರಿಯ ಧೈರ್ಯ ಬಂದಿದ್ದು ಜಹೀರ್ ಖಾನ್ ಅವರಿಂದ. ಈ ವಿಷಯವನ್ನು ಸ್ವತಃ ಕೊಹ್ಲಿಯೇ ಬಹಿರಂಗಪಡಿಸಿದ್ದಾರೆ. ಅನುಷ್ಕಾ ಶರ್ಮಾ ಜೊತೆ ಸ್ನೇಹವಾದ ಹೊಸದರಲ್ಲಿ ಆ ವಿಚಾರವನ್ನು ಕೊಹ್ಲಿ ಮೊದಲು ತಿಳಿಸಿದ್ದು ಜಹೀರ್ ಖಾನ್ ಅವರಿಗಂತೆ. ಆಗ ಜಹೀರ್ ಕೊಟ್ಟ ಸಲಹೆಯನ್ನು ತಾನು ಈಗಲೂ ಪಾಲಿಸುತ್ತಿದ್ದೇನೆ. ಆರಂಭದಲ್ಲೇ ಜಹೀರ್ ಭಾಯ್ ಸಲಹೆ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ ಎಂದು ವಿರಾಟ್ ಕೊಹ್ಲಿ ಹೇಳುತ್ತಾರೆ.
ಜಹೀರ್ ಕೊಟ್ಟ ಸಲಹೆ ಏನು?
"ಏನೇ ಮಾಡಿದರೂ ಅದನ್ನು ಮುಚ್ಚಿಟ್ಟುಕೊಳ್ಳಬೇಡ. ಅದರಿಂದ ಸುಮ್ಮನೆ ಒತ್ತಡ ಬರುತ್ತದೆ. ಅಲ್ಲದೇ, ನೀನು ರಿಲೇಷನ್'ಶಿಪ್ ಬೆಳೆಸಿಕೊಳ್ಳುತ್ತಿದ್ದೀಯೇ ಹೊರತು ಯಾವ ತಪ್ಪನ್ನೂ ಮಾಡುತ್ತಿಲ್ಲ," ಎಂದು ಜಹೀರ್ ತಮಗೆ ಸಲಹೆ ಕೊಟ್ಟಿದ್ದಾಗಿ ಕೊಹ್ಲಿ ಹೇಳುತ್ತಾರೆ.
ಗೌರವ್ ಕಪೂರ್ ಅವರ "ಬ್ರೇಕ್'ಫಾಸ್ಟ್ ವಿತ್ ಚಾಂಪಿಯನ್ಸ್" ಕಾರ್ಯಕ್ರಮದಲ್ಲಿ ಕೊಹ್ಲಿ ತಮ್ಮ ಆಂತರ್ಯವನ್ನು ಬಿಚ್ಚಿಟ್ಟಿದ್ದಾರೆ.
ಎಲ್ಲರ ಕ್ರಿಕೆಟಿಗರ ಜೀವನದಲ್ಲಿ ಲಯ ಕಳೆದುಕೊಳ್ಳುವ ಒಂದು ಅವಧಿ ಸಾಮಾನ್ಯವಾಗಿ ಬರುತ್ತದೆ. ರನ್ ಮೆಷೀನ್ ಎಂದೇ ಪರಿಗಣಿಸಲಾಗಿರುವ ವಿರಾಟ್ ಕೊಹ್ಲಿಗೆ 2014ರಲ್ಲಿ ಇಂಥ ಸ್ಥಿತಿ ಬಂದಿತ್ತು. ಭಾರತದ ಇಂಗ್ಲೆಂಡ್ ಪ್ರವಾಸದ ವೇಳೆ ಕೊಹ್ಲಿ ಎಲ್ಲಾ ಪಂದ್ಯಗಳಲ್ಲೂ ವಿಫಲರಾಗಿದ್ದರು. ಅನುಷ್ಕಾಳ ಹಿಂದೆ ಬಿದ್ದು ಕೊಹ್ಲಿ ಫಾರ್ಮ್ ಕಳೆದುಕೊಂಡರೆಂಬ ಮಾತುಗಳು, ಟೀಕೆಗಳು ಕೇಳಿಬಂದವು. ಆ ಸಂದರ್ಭವು ಅನುಷ್ಕಾ ಮತ್ತು ಕೊಹ್ಲಿ ಇಬ್ಬರ ಪಾಲಿಗೆ ಅಗ್ನಿಪರೀಕ್ಷೆಯ ಕಾಲ. ಕೊಹ್ಲಿಗೆ ಈ ವೇಳೆ ಮಾನಸಿಕ ಸ್ಥೈರ್ಯ ತುಂಬಿದ್ದು ಅನುಷ್ಕಾಳೇ. ಇದನ್ನೇ ಅಲ್ಲವಾ ಪ್ರೀತಿಯ ಶಕ್ತಿ ಎನ್ನುವುದು? ಕೆಲವೇ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಪುಟಿದೆದ್ದರು. ಬ್ಯಾಟಿಂಗ್ ಲಯ ಮತ್ತೊಮ್ಮೆ ಕಂಡುಕೊಂಡರು.
"ಕ್ರಿಕೆಟಿಗರು ಮದುವೆಯಾಗಬೇಕು ಅಥವಾ ಸಿಂಗಲ್ ಆಗಿರಬೇಕು ಎಂಬ ಅಘೋಷಿತ ನಿಯಮ ಕ್ರಿಕೆಟ್ ವಲಯದಲ್ಲಿದೆ. ಅವಿವಾಹಿತರು ತಮ್ಮ ಗರ್ಲ್'ಫ್ರೆಂಡ್ ಜೊತೆ ಇರುವುದೇ ಅಪರಾಧ ಎಂಬಂತೆ ಮಾತನಾಡುತ್ತಾರೆ. ರಿಲೇಶನ್'ಶಿಪ್ ಇಟ್ಟುಕೊಳ್ಳುವುದೇ ಅಪರಾಧವಾ? ತಾನೇನಾದರೂ ಬ್ಯಾಟಿಂಗ್ ಲಯ ಕಂಡುಕೊಳ್ಳದಿದ್ದರೆ ಇದೇ ಸತ್ಯವೆಂಬಂತಾಗುತ್ತಿತ್ತು," ಎಂದು ಕೊಹ್ಲಿ ಹೇಳುತ್ತಾರೆ.
ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮ ಬಿಟ್ಟು ಬೇರಾರೊಂದಿಗೂ ಅಫೇರ್ ಹೊಂದಿದವರಲ್ಲ. ಅಷ್ಟರಮಟ್ಟಿಗೆ ಅವರದ್ದು ಪರಿಶುದ್ಧ ಪ್ರೀತಿ ಮತ್ತು ಬದ್ಧತೆ.
