ಕೊಹ್ಲಿಯನ್ನು ಗಮನಿಸುತ್ತಾ ಬಂದವರಿಗೆ ಅವರ ಕೆಚ್ಚು, ಕ್ರಿಕೆಟ್ ಪ್ರೇಮ ಹಾಗೂ ದೇಶಪ್ರೇಮ ಎಂಥದ್ದು ಎಂಬುದು ಚೆನ್ನಾಗಿ ಗೊತ್ತಿದೆ.

ರಾಂಚಿ(ಮಾ. 17): ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಎಲ್ಲರಿಗೂ ಆತಂಕ ತಂದಿರುವುದು ವಿರಾಟ್ ಕೊಹ್ಲಿಗಾದ ಗಾಯ. ಮೊದಲ ದಿನದಂದು ಮಿಡಾನ್ ಬೌಂಡರಿ ಕೊನೆಯಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಡೈವ್ ಮಾಡಿದಾಗ ಬಲ ಭುಜಕ್ಕೆ ತೀವ್ರ ಪೆಟ್ಟು ಮಾಡಿಕೊಂಡರು. ಎರಡನೇ ದಿನವೂ ಅವರು ಫೀಲ್ಡಿಗಿಳಿಯಲಿಲ್ಲ. ನಾಳೆ ಮೂರನೇ ದಿನದಂದು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಾರೋ ಇಲ್ಲವೋ ಎಂಬ ಆತಂಕ ಕ್ರಿಕೆಟ್ ಪ್ರೇಮಿಗಳಲ್ಲಿ ಮಡುಗಟ್ಟಿದ್ದಂತೂ ಹೌದು. ಅದೃಷ್ಟಕ್ಕೆ ಕೊಹ್ಲಿ ನಾಳೆ ಶನಿವಾರದಂದು ಬ್ಯಾಟಿಂಗ್ ಮಾಡಬಹುದು ಎಂದು ಬಿಸಿಸಿಐ ಮೂಲಗಳು ಹೇಳುತ್ತಿವೆ. ಆದರೆ, ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಗಾಯದ ಭೂತವನ್ನು ಹೇಗೆ ಮೆಟ್ಟಿನಿಂತರು ಎಂಬುದನ್ನು ನೆನಸಿಕೊಂಡರೆ ನಾಳೆ ಅವರು ಬ್ಯಾಟಿಂಗ್ ಮಾಡುವುದು ಖಚಿತ ಎನಿಸುತ್ತದೆ.

ಐಪಿಎಲ್'ನಲ್ಲಿ ಏನಾಗಿತ್ತು?
ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಆರ್'ಸಿಬಿ ವರ್ಸಸ್ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಕೈಬೆರಳಿಗೆ ತೀವ್ರ ಗಾಯ ಮಾಡಿಕೊಂಡಿದ್ದರು. ಅವರ ಎಡಗೈನ ಬೆರಳಿಗೆ 10 ಹೊಲಿಗೆಗಳನ್ನು ಹಾಕಲಾಗಿತ್ತು. ಆರ್'ಸಿಬಿಗೆ ಆ ಪಂದ್ಯ ಬಹಳ ಮಹತ್ವದ್ದಾಗಿತ್ತು. ನಾಕೌಟ್ ಹಂತ ಪ್ರವೇಶಿಸಲು ಅದು ಡೂ ಆರ್ ಡೈ ಪಂದ್ಯವಾಗಿತ್ತು. ಇಂಥ ಮಹತ್ವದ ಪಂದ್ಯದಲ್ಲಿ ಕೊಹ್ಲಿ ಆಡಲೇಬೇಕಿತ್ತು. ಕೈಗೆ ಗಂಭೀರವಾಗಿ ಗಾಯವಾಗಿದ್ದರೂ ಲೆಕ್ಕಿಸದೆ ತಮ್ಮ ತಂಡಕ್ಕೋಸ್ಕರ ವಿರಾಟ್ ಕೊಹ್ಲಿ ಫೀಲ್ಡಿಗೆ ಇಳಿದುಬಿಟ್ಟರು. ಅಷ್ಟೇ ಅಲ್ಲ, ಅದ್ಭುತವಾಗಿ ಆಡಿ ಅಜೇಯ 75 ರನ್ ಗಳಿಸಿದರು. ಎಬಿ ಡೀವಿಲಿಯರ್ಸ್ ಜೊತೆಗೂ ಬೆಂಗಳೂರು ತಂಡಕ್ಕೆ ಅತ್ಯವಶ್ಯಕ ಗೆಲುವು ದಕ್ಕಿಸಿಕೊಟ್ಟರು.

ಅಂಥ ವೀರೋಚಿತ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಈಗ ರಾಷ್ಟ್ರೀಯ ತಂಡದ ಕ್ಯಾಪ್ಟನ್ ಆಗಿ ಅಖಾಡಕ್ಕೆ ಇಳಿಯದೇ ಇರುತ್ತಾರೆಯೇ? ಕೊಹ್ಲಿಯನ್ನು ಗಮನಿಸುತ್ತಾ ಬಂದವರಿಗೆ ಅವರ ಕೆಚ್ಚು, ಕ್ರಿಕೆಟ್ ಪ್ರೇಮ ಹಾಗೂ ದೇಶಪ್ರೇಮ ಎಂಥದ್ದು ಎಂಬುದು ಚೆನ್ನಾಗಿ ಗೊತ್ತಿದೆ.