ಈ ಮೂಲಕ ಲಂಕಾ ಸರಣಿಯಲ್ಲಿ ಎಲ್ಲಾ 9 ಪಂದ್ಯಗಳನ್ನು ಗೆದ್ದು ಲಂಕಾ ದಹನ ಮಾಡುವಲ್ಲಿ ಕೊಹ್ಲಿ ಪಡೆ ಸಫಲವಾಗಿದೆ.

ಕೊಲಂಬೊ(ಸೆ.06): ನಾಯಕ ವಿರಾಟ್ ಕೊಹ್ಲಿ (82) ಮತ್ತು ಮನೀಶ್ ಪಾಂಡೆ (51) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ, ಏಕೈಕ ಟಿ20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್‌'ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಲಂಕಾ ಸರಣಿಯಲ್ಲಿ ಎಲ್ಲಾ 9 ಪಂದ್ಯಗಳನ್ನು ಗೆದ್ದು ಲಂಕಾ ದಹನ ಮಾಡುವಲ್ಲಿ ಕೊಹ್ಲಿ ಪಡೆ ಸಫಲವಾಗಿದೆ.

ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಏಕೈಕ ಟಿ20 ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‌'ಗಳಲ್ಲಿ 7 ವಿಕೆಟ್‌'ಗೆ 170 ರನ್‌'ಗಳಿಸಿತು.

ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ಮುಗ್ಗರಿಸಿತು. ಭರವಸೆ ಬ್ಯಾಟ್ಸ್‌'ಮನ್ ರೋಹಿತ್ ಶರ್ಮಾ 9 ರನ್‌'ಗಳಿಸಿ ಮಾಲಿಂಗ ಬೌಲಿಂಗ್‌ನಲ್ಲಿ ಪೆರೇರಾಗೆ ಕ್ಯಾಚಿತ್ತು ನಿರ್ಗಮಿಸಿದರು. ನಂತರ ಬಂದ ರಾಹುಲ್ 24 ರನ್‌'ಗಳಿಸಿ ಪೆವಿಲಿಯನ್ ಸೇರಿದರು. 42 ರನ್‌'ಗಳಿಗೆ ಆರಂಭಿಕ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ಕೊಹ್ಲಿ ಮತ್ತು ಪಾಂಡೆ 3ನೇ ವಿಕೆಟ್ ಜತೆಯಾಟದ ಮೂಲಕ ಚೇತರಿಕೆ ನೀಡಿದರು. ವಿರಾಟ್ ಕೊಹ್ಲಿ ಮತ್ತು ಕರ್ನಾಟಕದ ಮನೀಶ್ ಪಾಂಡೆ, ಲಂಕಾದ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ 119 ರನ್‌'ಗಳ ಜತೆಯಾಟ ನಿರ್ವಹಿಸುವ ಮೂಲಕ ಭಾರತ ತಂಡವನ್ನು ಜಯದತ್ತ ಕೊಂಡೊಯ್ದರು.

ಟಿ20 ಪಂದ್ಯದಲ್ಲಾದರೂ ಗೆದ್ದು ಮಾನ ಉಳಿಸಿಕೊಳ್ಳುವ ಇರಾದೆಯಿಂದ ಕಣಕ್ಕಿಳಿದಿದ್ದ ಲಂಕಾಗೆ ಅಷ್ಟೇನು ಉತ್ತಮ ಆರಂಭ ಲಭಿಸಲಿಲ್ಲ. ನಾಯಕ ತರಂಗ 4ರನ್ ಗಳಿಸಿ ಭುವನೇಶ್ವರ್ ಕುಮಾರ್'ಗೆ ವಿಕೆಟ್ ಒಪ್ಪಿಸಿದರೆ, ಡಿಕ್'ವೆಲ್ಲಾ ಆಟ 17 ರನ್'ಗೆ ಸೀಮಿತವಾಯಿತು.

ಮಾಜಿ ನಾಯಕ ಏಂಜೆಲೋ ಮ್ಯಾಥ್ಯೂಸ್ 7 ರನ್‌ಗಳಿಸಿ ನಿರಾಸೆ ಮೂಡಿಸಿದರು. ಈ ವೇಳೆ ವೇಗದ ಆಟಕ್ಕೆ ಮೊರೆಹೋದ ದಿಲ್ಶಾನ್ ಮುನವೀರ 4 ಸಿಕ್ಸರ್, 5 ಬೌಂಡರಿಗಳಿಂದ ಕೇವಲ 29 ಎಸೆತಗಳಲ್ಲಿ 53 ರನ್ ಸಿಡಿಸಿ, ಚೈನಾಮನ್ ಕುಲ್ದೀಪ್ ಮೋಡಿಗೆ ಬೌಲ್ಡ್ ಆದರು. ಮುರಿಯದ 8ನೇ ವಿಕೆಟ್‌'ಗೆ ಜತೆಯಾದ ಪ್ರಿಯಾಂಜನ್ (40) ಮತ್ತು ಉದಾನ (19) ರನ್‌ಗಳಿಸಿ 36 ರನ್‌'ಗಳ ಜತೆಯಾಟ ನಿರ್ವಹಿಸಿ ತಂಡದ ಮೊತ್ತ ಹೆಚ್ಚಿಸಿದರು. ಭಾರತದ ಪರ ಚಾಹಲ್ 3, ಕುಲ್ದೀಪ್ 2, ಭುವನೇಶ್ವರ್, ಬುಮ್ರಾ ತಲಾ 1 ವಿಕೆಟ್ ಪಡೆದರು.