ಬೆಂಗಳೂರು(ಮಾ.30): ಲಸಿತ್‌ ಮಾಲಿಂಗ ನೋಬಾಲ್‌ ಮಾಡಿದ್ದರೂ ಅಂಪೈರ್‌ ಗಮನಿಸದ ಕಾರಣ, ಆರ್‌ಸಿಬಿ ಸೋಲು ಅನುಭವಿಸಿತು. ಈ ಪ್ರಸಂಗದಿಂದ ಕೆಂಡಾಮಂಡಲಗೊಂಡ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ, ಮ್ಯಾಚ್‌ ರೆಫ್ರಿ ಮನು ನಾಯ್ಯರ್‌ ಕೊಠಡಿಗೆ ನುಗ್ಗಿ ಕೂಗಾಡಿದರು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. 

ಇದನ್ನೂ ಓದಿ: IPL 2019: ಕೊಹ್ಲಿ, ABD ಜೊತೆ ಚಹಾಲ್ ಗಲ್ಲಿ ಡ್ಯಾನ್ಸ್

‘ಅಂಪೈರ್‌ ವಿರುದ್ಧ ಅವಾಚ್ಯ ಶಬ್ಧಗಳ ಬಳಕೆ ಮಾಡಿದರು. ನನಗೆ ದಂಡ ವಿಧಿಸಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕೊಹ್ಲಿ ಹರಿಹಾಯ್ದರು’ ಎನ್ನಲಾಗಿದೆ.  ಇದಕ್ಕೂ ಮುನ್ನ ಪ್ರಶಸ್ತಿ ಸಮಾರಂಭ ವೇಳೆ ಕೊಹ್ಲಿ, ಅಂಪೈರ್‌ ಎಸ್‌.ರವಿ ವಿರುದ್ಧ ಕಿಡಿಕಾಡಿದ್ದರು. ‘ನಾವು ಐಪಿಎಲ್‌ ಆಡುತ್ತಿದ್ದೇವೆ. ಕ್ಲಬ್‌ ಪಂದ್ಯವಲ್ಲ. ಅಂಪೈರ್‌ ಕಣ್ಣು ಬಿಟ್ಟು ನೋಡಬೇಕು’ ಎಂದು ತಮ್ಮ ಆಕ್ರೋಶ ಹೊರಹಾಕಿದ್ದರು.

 ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಕೊಹ್ಲಿ ರೆಫ್ರಿ ಕೊಠಡಿಗೆ ಹೋಗಿ ಕೂಗಾಡಿದ್ದಾರೆ ಎನ್ನುವ ಸುದ್ದಿ ಸುಳ್ಳು. ಆ ರೀತಿ ಯಾವ ಪ್ರಸಂಗವೂ ನಡೆದಿಲ್ಲ ಎಂದಿದ್ದಾರೆ. ‘ಅಂಪೈರ್‌ ರವಿ, ಕೊಹ್ಲಿ ಜತೆ ಮಾತುಕತೆ ನಡೆಸಿದರು. ಘಟನೆ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು’ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: IPL 2019: ಕ್ರಿಸ್ ಗೇಲ್ ಅದ್ಭುತ ಡ್ಯಾನ್ಸ್- ನಾಚಿ ನೀರಾದ ಕೊರಿಯೋಗ್ರಾಫರ್!

ಇದೇ ವೇಳೆ ಕೊನೆ ಎಸೆತದ ವೇಳೆ ಅಂಪೈರ್‌ ಕ್ರೀಸ್‌ ನೋಡುತ್ತಿರಲಿಲ್ಲ, ಅವರ ಗಮನ ಬ್ಯಾಟ್ಸ್‌ಮನ್‌ನ ಮೇಲಿತ್ತು ಎಂದು ಸ್ಟಾರ್‌ ಸ್ಪೋರ್ಟ್ಸ್ ವಾಹಿನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಅಂಪೈರ್‌ಗಳ ಕೊರತೆ ಇರುವ ಕಾರಣ, ತಪ್ಪು ನಿರ್ಣಯ ಪ್ರಕಟಿಸಿದ ಅಂಪೈರ್‌ ವಿರುದ್ಧ ಬಿಸಿಸಿಐ ಕ್ರಮಕೈಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.