ಕೊಹ್ಲಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಎರಡು ವಿವಿಧ ಬ್ರ್ಯಾಂಡ್‌'ನ ಅಧಿಕಾರಿಗಳು ಶುಲ್ಕ ಹೆಚ್ಚಳವನ್ನು ಖಚಿತಪಡಿಸಿದ್ದು, ಈ ಬೆಳವಣಿಗೆಯಿಂದ ಕೊಹ್ಲಿ ಕೇವಲ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಮಾತ್ರವಲ್ಲ, ಬಾಲಿವುಡ್ ನಾಯಕರಾದ ಶಾರೂಕ್ ಖಾನ್ ಹಾಗೂ ಅಮೀರ್ ಖಾನ್ ಅವರನ್ನೂ ಹಿಂದಿಕ್ಕಿದ್ದಾರೆ.
ನವದೆಹಲಿ(ಮಾ.31): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಜಾಹೀರಾತು ಶುಲ್ಕವನ್ನು ದಿನವೊಂದಕ್ಕೆ ಐದು ಕೋಟಿ ರುಪಾಯಿಗೆ ಹೆಚ್ಚಿಸಿಕೊಂಡಿದ್ದು, ಈ ಮೂಲಕ ದೇಶದಲ್ಲೇ ಅತಿಹೆಚ್ಚು ಶುಲ್ಕ ಪಡೆಯುವ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.
ಇಲ್ಲಿವರೆಗೆ ಅವರ ಜಾಹೀರಾತು ಶುಲ್ಕ ದಿನಕ್ಕೆ ಎರಡೂವರೆಯಿಂದ ನಾಲ್ಕು ಕೋಟಿವರೆಗೂ ಇತ್ತು. ತಂಪು ಪಾನೀಯ ಸಂಸ್ಥೆ ಪೆಪ್ಸಿಕೋ ಜತೆಗಿನ ಒಪ್ಪಂದ ನವೀಕರಿಸುವ ಸಮಯ ಹತ್ತಿರವಾಗುತ್ತಿದ್ದಂತೆ ವಿರಾಟ್ ಈ ನಿರ್ಧಾರ ತಳೆದಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಇನ್ನು ಕೊಹ್ಲಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಎರಡು ವಿವಿಧ ಬ್ರ್ಯಾಂಡ್'ನ ಅಧಿಕಾರಿಗಳು ಶುಲ್ಕ ಹೆಚ್ಚಳವನ್ನು ಖಚಿತಪಡಿಸಿದ್ದು, ಈ ಬೆಳವಣಿಗೆಯಿಂದ ಕೊಹ್ಲಿ ಕೇವಲ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಮಾತ್ರವಲ್ಲ, ಬಾಲಿವುಡ್ ನಾಯಕರಾದ ಶಾರೂಕ್ ಖಾನ್ ಹಾಗೂ ಅಮೀರ್ ಖಾನ್ ಅವರನ್ನೂ ಹಿಂದಿಕ್ಕಿದ್ದಾರೆ.
ಜರ್ಮನಿಯ ಕ್ರೀಡಾ ಉತ್ಪನ್ನ ಸಂಸ್ಥೆ ಪೂಮಾದೊಂದಿಗೆ ಕಳೆದ ತಿಂಗಳು 8 ವರ್ಷದ ಅವಧಿಗೆ 110 ಕೋಟಿ ರುಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ್ದ ವಿರಾಟ್, ಸದ್ಯ ಆಡಿ ಕಾರ್, ಎಂಆರ್'ಎಫ್ ಟೈಯರ್, ಟಿಸ್ಸಾಟ್ ಕೈಗಡಿಯಾರ ಸೇರಿದಂತೆ 18 ಸಂಸ್ಥೆಗಳಿಗೆ ರಾಯಭಾರಿಯಾಗಿದ್ದಾರೆ.
ಪ್ರತಿಷ್ಠಿತ ಡಫ್ಸ್ ಹಾಗೂ ಫೆಲ್ಪ್ಸ್ ಸಂಸ್ಥೆಯ ಸಮೀಕ್ಷೆಯ ವರದಿ ಪ್ರಕಾರ, 2016ರ ಅಕ್ಟೋಬರ್'ನಲ್ಲಿ ಕೊಹ್ಲಿಯ ಬ್ರ್ಯಾಂಡ್ ಮೌಲ್ಯ 92 ಮಿಲಿಯನ್ ಡಾಲರ್ (596 ಕೋಟಿ ರುಪಾಯಿ)ನಷ್ಟಿತ್ತು. ಸದ್ಯ ಅದು ಶೇಖಡ 30ರಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.
ಭಾರತದ ಅಗ್ರ ನಾಲ್ವರು ಸೆಲೆಬ್ರಿಟಿಗಳ ಜಾಹೀರಾತು ಶುಲ್ಕ (ದಿನಕ್ಕೆ)
ವಿರಾಟ್ ಕೊಹ್ಲಿ : 5 ಕೋಟಿ
ಶಾರೂಕ್ ಖಾನ್: 3.5 ಕೋಟಿ
ಎಂ.ಎಸ್.ಧೋನಿ : 3.35 ಕೋಟಿ
ಅಮೀರ್ ಖಾನ್ : 3.35 ಕೋಟಿ
ಪಿ.ವಿ.ಸಿಂಧು : 1.125 ಕೋಟಿ
