Asianet Suvarna News Asianet Suvarna News

ಕೊಹ್ಲಿ-ರವಿ ಶಾಸ್ತ್ರಿಗೆ ಕಾದಿದೆ ಸಂಕಷ್ಟ-ಕ್ರಮಕ್ಕೆ ಮುಂದಾದ ಬಿಸಿಸಿಐ

ಇಂಗ್ಲೆಂಡ್ ವಿರುದ್ಧದ ಆರಂಭಿಕ 2 ಟೆಸ್ಟ್ ಪಂದ್ಯ ಸೋತಿರುವ ಟೀಂ ಇಂಡಿಯಾ ಇದೀಗ 3ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆದರೆ 3ನೇ ಪಂದ್ಯ ಭಾರತಕ್ಕೆ ಮಾಡು ಇಲ್ಲವೆ ಮಡಿ. ಜೊತೆಗೆ ಈ ಪಂದ್ಯದ ಫಲಿತಾಂಶದ ಮೇಲೆ ಬಿಸಿಸಿಐ ತಂಡದಲ್ಲಿ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿದೆ. 

Virat kohli and shastri might face tough question from BCCI
Author
Bengaluru, First Published Aug 14, 2018, 11:18 AM IST

ಮುಂಬೈ(ಆ.14): ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿರುವ ಭಾರತ ತಂಡಕ್ಕೆ ಬಿಸಿಸಿಐ ಚಾಟಿ ಬೀಸಲು ಸಿದ್ಧಗೊಳ್ಳುತ್ತಿದೆ. ಸೋಲಿನ ಹೊಣೆಯನ್ನು ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಹೊರಬೇಕಿದ್ದು, ಬಿಸಿಸಿಐ ಬಿಗ್‌ಬಾಸ್‌ಗಳು ಕೇಳುವ ಕಠಿಣ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಬೇಕಿದೆ. 

ಆ.18 ರಿಂದ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ 3ನೇ ಟೆಸ್ಟ್‌ನ ಫಲಿತಾಂಶವನ್ನು ನೋಡಿಕೊಂಡು ಕ್ರಮದ ಬಗ್ಗೆ ನಿರ್ಧರಿಸುವುದಾಗಿ ಬಿಸಿಸಿಐ ತಿಳಿಸಿದೆ. 3ನೇ ಟೆಸ್ಟ್ ಮುಕ್ತಾಯದ ಬಳಿಕ 4, 5ನೇ ಟೆಸ್ಟ್‌ಗೆ ತಂಡವನ್ನು ಆಯ್ಕೆ ಮಾಡಲಿರುವ ಬಿಸಿಸಿಐ, ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಚಿಂತಿಸುತ್ತಿದೆ. ಬಿಸಿಸಿಐ ಅಂಗಳದಲ್ಲಿ ಜರುಗುತ್ತಿರುವ ಬೆಳವಣಿಗೆಗಳ ಅರಿವಿರುವ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಕೇಳಿದೆಲ್ಲವನ್ನೂ ಕೊಟ್ಟಿದ್ದೇವೆ: ಭಾರತ ತಂಡ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಇಟ್ಟ ಬೇಡಿಕೆಗಳನ್ನೆಲ್ಲಾ ಪೂರೈಸಿದ್ದೇವೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ‘ದ.ಆಫ್ರಿಕಾ ಸರಣಿಯಲ್ಲಿ ಸೋಲುಂಡಿದ್ದಕ್ಕೆ, ಸಿದ್ಧತೆಗೆ ಸಮಯಾವಕಾಶದ ಕೊರತೆ ಎದುರಾಗಿದ್ದರ ಕಾರಣ ನೀಡಿದ್ದ ತಂಡ ಈ ಬಾರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆಟಗಾರರನ್ನು
ಸಂಪರ್ಕಿಸಿದ ಬಳಿಕವೇ ಮೊದಲು ಸೀಮಿತ ಓವರ್ ಸರಣಿಯನ್ನು ಮೊದಲು ನಡೆಸಿ ನಂತರ ಟೆಸ್ಟ್ ಸರಣಿ ಆಯೋಜಿಸಲು ತೀರ್ಮಾನಿಸಲಾಯಿತು. 

ಹಿರಿಯ ಆಟಗಾರರ ಒತ್ತಾಯದ ಮೇರೆಗೆ ಭಾರತ ‘ಎ’ ತಂಡವನ್ನು ಇಂಗ್ಲೆಂಡ್ ಪ್ರವಾಸಕ್ಕೆ ಕಳುಹಿಸಿ ವಿಜಯ್, ರಹಾನೆಗೆ ಆಡಲು ಅವಕಾಶ ಕಲ್ಪಿಸಲಾಯಿತು. ಪೂಜಾರ, ಇಶಾಂತ್, ಅಶ್ವಿನ್ ಕೆಲ ತಿಂಗಳುಗಳಿಂದಲೇ ಕೌಂಟಿಯಲ್ಲಿ ಆಡುತ್ತಿದ್ದಾರೆ. ಅವರು ಕೇಳಿದ್ದೆಲ್ಲವನ್ನೂ ನೀಡಿದ ಹೊರತಾಗಿಯೂ ಫಲಿತಾಂಶ ಬರದಿದ್ದಾಗ, ಕ್ರಿಕೆಟ್ ಮಂಡಳಿ ಪ್ರಶ್ನಿಸುವ ಅಧಿಕಾರ ಹೊಂದಿದೆ’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಕೊಹ್ಲಿ-ಶಾಸ್ತ್ರಿ ಅಧಿಕಾರಕ್ಕೆ ಕತ್ತರಿ?: ಕೊಹ್ಲಿ ಹಾಗೂ ಶಾಸ್ತ್ರಿಗೆ ಸಂಪೂರ್ಣ ಅಧಿಕಾರ ನೀಡಿರುವ ಬಗ್ಗೆ ಬಿಸಿಸಿಐನಲ್ಲೇ ಅಪಸ್ವರ ಎದ್ದಿದೆ. ಭಾರತ ಒಂದೊಮ್ಮೆ ಸರಣಿ ಸೋತರೆ ಕೋಚ್ -ನಾಯಕನಿಗಿರುವ ಬಹುತೇಕ ಅಧಿಕಾರಗಳನ್ನು ಬಿಸಿಸಿಐ ಕಿತ್ತುಕೊಳ್ಳುವ ಸಾಧ್ಯತೆ ಇದೆ. ‘ಶಾಸ್ತ್ರಿ ಮುಂದಾಳತ್ವದಲ್ಲಿ ಭಾರತ 2 ಮಹತ್ವದ ಸರಣಿಗಳನ್ನು ಕೈಚೆಲ್ಲಿದೆ ಎನ್ನುವುದನ್ನು ಮರೆಯುವ ಹಾಗಿಲ್ಲ. 2014 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 0-2 ರಲ್ಲಿ, 2017-19 ರಲ್ಲಿ ದ.ಆಫ್ರಿಕಾ ವಿರುದ್ಧ 1-2 ರಲ್ಲಿ ಪರಾಭವೊಂಡಿತ್ತು. 

ಇದೀಗ ಇಂಗ್ಲೆಂಡ್ ನಲ್ಲೂ ಸೋಲೇ ಗತಿ ಎನ್ನುವಂತಾಗಿದೆ. ಡಂಕನ್ ಫ್ಲೆಚರ್ ಕೋಚ್ ಆಗಿದ್ದಾಗ, ಇಂಗ್ಲೆಂಡ್‌ನಲ್ಲಿ 1-3ರ ಅಂತರದಲ್ಲಿ ಸರಣಿ ಸೋತಾಗ ಅವರ ಜತೆಗಿದ್ದ ಸಹಾಯಕ ಕೋಚ್‌ಗಳನ್ನು ಬಿಸಿಸಿಐ ವಜಾಗೊಳಿಸಿತ್ತು. ಇದೀಗ ಶಾಸ್ತ್ರಿ ಸಹ ಅದೇ ಪರಿಸ್ಥಿತಿ ಎದುರಿಸಬೇಕಾಗಬಹುದು. ತಾವು ಆಯ್ಕೆ ಮಾಡಿಕೊಂಡ ಸಹಾಯಕ ಕೋಚ್‌ಗಳಾದ ಆರ್.ಶ್ರೀಧರ್ ಹಾಗೂ ಸಂಜಯ್ ಬಾಂಗರ್ ಹುದ್ದೆ ತೂಗುಯ್ಯಾಲೆಯಲ್ಲಿದೆ’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. 

ಶ್ರೀಧರ್, ಬಾಂಗರ್ ಔಟ್? : ಆರ್.ಶ್ರೀಧರ್ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲು ಆರಂಭಿಸಿದ ಮೇಲೆ ಭಾರತ ತಂಡದ ಸ್ಲಿಪ್ ಫೀಲ್ಡರ್‌ಗಳು 50ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ. ಶ್ರೀಧರ್ ತಂಡದ ಫೀಲ್ಡಿಂಗ್‌ನಲ್ಲಿ ಯಾವುದೇ ಸುಧಾರಣೆ ತಂದಿಲ್ಲ. ಇನ್ನು ವಿದೇಶಿ ಪ್ರವಾಸಗಳಿಗೆ ತಂಡದ ಬ್ಯಾಟ್ಸ್‌ಮನ್ ಗಳನ್ನು ಸಿದ್ಧಗೊಳಿಸುವುದು ಬಾಂಗರ್ ಮುಂದಿದ್ದ ದೊಡ್ಡ ಸವಾಲು. 4 ವರ್ಷಗಳಾದರೂ ಅವರಿಂದ ತಂಡದ ಬ್ಯಾಟಿಂಗ್ ಸುಧಾರಿಸುವಂತೆ ಮಾಡಲು ಸಾಧ್ಯವಾಗಿಲ್ಲ. ಕೇವಲ ನೆಟ್ಸ್‌ಗಳಲ್ಲಿ ಅಭ್ಯಾಸಕ್ಕೆ ನೆರವಾಗುವುದಕ್ಕಷ್ಟೇ ಸೀಮಿತಗೊಂಡಿದ್ದಾರೆ. ಹೀಗಾಗಿ, ಇಂಗ್ಲೆಂಡ್‌ನಲ್ಲಿ ಭಾರತ ಸರಣಿ ಸೋತರೆ, ಶ್ರೀಧರ್ ಹಾಗೂ ಬಾಂಗರ್ ಕೋಚ್ ಹುದ್ದೆಯನ್ನು ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Follow Us:
Download App:
  • android
  • ios