ವಿರಾಟ್ ಕೊಹ್ಲಿ ಭಾರಿಸಿರುವ ಮೂರೂ ದ್ವಿಶತಕಗಳು ಒಂದೇ ವರ್ಷದಲ್ಲಿ ಬಂದಿರುವುದು ಗಮನಾರ್ಹ.

ಮುಂಬೈ(ಡಿ. 11): ವಿರಾಟ್ ಕೊಹ್ಲಿ ರನ್ ದಾಹ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ನಿನ್ನೆ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್'ನಲ್ಲಿ ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾವನ್ನು ಪಾರು ಮಾಡಿದ್ದ ವಿರಾಟ್ ಕೊಹ್ಲಿ ಇಂದು ತಮ್ಮ 3ನೇ ದ್ವಿಶತಕ ಭಾರಿಸಿದ್ದಾರೆ. ಜಯಂತ್ ಯಾದವ್ ಜೊತೆ ಸೇರಿ ತಂಡವನ್ನು ಸುಸ್ಥಿತಿಯತ್ತ ಕೊಂಡೊಯ್ದಿದ್ದಾರೆ. ಕೊಹ್ಲಿ ಮತ್ತು ಜಯಂತ್ ಭರ್ಜರಿ ಜೊತೆಯಾಟದ ಪ್ರಭಾವದಿಂದ ಲಂಚ್ ವಿರಾಮದ ವೇಳೆ ಭಾರತ ತನ್ನ ಮೊದಲ ಇನ್ನಿಂಗ್ಸಲ್ಲಿ 7 ವಿಕೆಟ್ ನಷ್ಟಕ್ಕೆ 579 ರನ್ ಸೇರಿಸಿ 179 ರನ್'ಗ ಬೃಹತ್ ಮುನ್ನಡೆ ಪಡೆದುಕೊಂಡಿದೆ. ಕೊಹ್ಲಿ ಮತ್ತು ಜಯಂತ್ 8ನೇ ವಿಕೆಟ್'ಗೆ 215 ರನ್ ಮುರಿಯದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ವಿರಾಟ್ ಕೊಹ್ಲಿ ಭಾರಿಸಿರುವ ಮೂರೂ ದ್ವಿಶತಕಗಳು ಒಂದೇ ವರ್ಷದಲ್ಲಿ ಬಂದಿರುವುದು ಗಮನಾರ್ಹ.

ಈ ವೇಳೆ ಜಯಂತ್ ಯಾದವ್ ಕೂಡ ದಾಖಲೆಯ ಆಟವಾಡಿದ್ದಾರೆ. 9ನೇ ಕ್ರಮಾಂಕದಲ್ಲಿ ಬಂದ ಜಯಂತ್ ಯಾದವ್ ಲಂಚ್ ವಿರಾಮದ ವೇಳೆ ಅಜೇಯ 92 ರನ್ ಗಳಿಸಿದ್ದರು. ಇನ್ನಿಂಗ್ಸ್'ವೊಂದರಲ್ಲಿ ಈ ಕ್ರಮಾಂಕದಲ್ಲಿ ಅತೀ ಹೆಚ್ಚು ರನ್ ಭಾರಿಸಿದ ಭಾರತೀಯರ ಪಟ್ಟಿಯಲ್ಲಿ ಜಯಂತ್ ಯಾದವ್ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ 51 ವರ್ಷಗಳ ದಾಖಲೆಯನ್ನು ಜಯಂತ್ ಅಳಿಸಿಹಾಕಿದ್ದಾರೆ. ಫಾರೂಕ್ ಎಂಜಿನಿಯರ್ ಅವರು 1965ರಲ್ಲಿ ಚೆನ್ನೈನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 90 ರನ್ ಗಳಿಸಿದ್ದು ಈವರೆಗೆ ದಾಖಲೆಯಾಗಿ ಉಳಿದಿತ್ತು.