ಬೆಂಗಳೂರಿನಲ್ಲಿಂದು ಖೇಲೋ ಇಂಡಿಯಾ ವಿವಿ ಗೇಮ್ಸ್ ಉದ್ಘಾಟನೆ
* ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಇಂದು ಅಧಿಕೃತ ಚಾಲನೆ
* 2ನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್ ಉದ್ಘಾಟಿಸಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
* ದೇಶದ 190ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳು ಪಾಲ್ಗೊಂಡಿರುವ ಈ ಕೂಟ
ಬೆಂಗಳೂರು(ಏ.24) 2ನೇ ಆವೃತ್ತಿಯ ಖೇಲೋ ಇಂಡಿಯಾ ವಿಶ್ವ ವಿದ್ಯಾಲಯ ಕ್ರೀಡಾಕೂಟಕ್ಕೆ (Khelo India University Games) ಭಾನುವಾರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು (Vice President M Venkaiah Naidu) ಅವರು ಅಧಿಕೃತ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ಸಂಜೆ 4ರಿಂದ ಆರಂಭಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವೆಂಕಯ್ಯ ನಾಯ್ಡು ಅವರು ಶನಿವಾರವೇ ಬೆಂಗಳೂರಿಗೆ ಆಗಮಿಸಿದರು. ರಾಜ್ಯಪಾಲ ಗೆಹಲೋತ್, ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಅವರು ಉಪರಾಷ್ಟ್ರಪತಿಯನ್ನು ಸ್ವಾಗತಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಉದ್ಘಾಟನಾ ಸಮಾರಂಭದ ವೇಳೆ ಕರ್ನಾಟಕದ ಕಲೆಗಳನ್ನು ಪ್ರದರ್ಶಿಸಲಾಗುತ್ತದೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಲವು ದಿನಗಳಿಂದ ಸಿದ್ಧತೆ ನಡೆದಿದ್ದು, ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ಸುತ್ತಿನ ತಯಾರಿ ನಡೆಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂದಾಜು 500ರಿಂದ 600 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ದೇಶದ 190ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳು ಪಾಲ್ಗೊಂಡಿರುವ ಈ ಕೂಟವು ಶನಿವಾರವೇ ಆರಂಭಗೊಂಡಿತು. ಬಾಸ್ಕೆಟ್‌ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್, ಮಲ್ಲಕಂಬ ಸ್ಪರ್ಧೆಗಳಿಗೆ ಚಾಲನೆ ದೊರೆಯಿತು.
ಜೈನ್ ವಿವಿ ಶುಭಾರಂಭ
ಬೆಂಗಳೂರು: ಶನಿವಾರ ಆರಂಭಗೊಂಡ ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್ ಸ್ಪರ್ಧೆಗಳಲ್ಲಿ ಆತಿಥೇಯ ಜೈನ್ ವಿವಿ ಗೆಲುವಿನ ಆರಂಭ ಪಡೆಯಿತು. ಮಹಿಳೆಯರ ತಂಡ ವಿಭಾಗದಲ್ಲಿ ಜೈನ್ ವಿವಿ 2-0 ಅಂತರದಲ್ಲಿ ಕೊಲ್ಹಾಪುರ ವಿವಿ ವಿರುದ್ಧ ಜಯಗಳಿಸಿತು. ಮಹಿಳೆಯರ ಬಾಸ್ಕೆಟ್‌ಬಾಲ್ ‘ಬಿ’ ಗುಂಪಿನ ಪಂದ್ಯದಲ್ಲಿ ಜೈನ್ ವಿವಿ 66-60ರಲ್ಲಿ ತಮಿಳುನಾಡಿನ ಎಸ್‌ಆರ್‌ಎಂ ವಿವಿ ವಿರುದ್ಧ ಜಯಗಳಿಸಿತು. ಪುರುಷರ ವಾಲಿಬಾಲ್ ‘ಎ’ ಗುಂಪಿನ ಪಂದ್ಯದಲ್ಲಿ ಮಂಗಳೂರು ವಿವಿ 1-3ರಲ್ಲಿ ಗುರುನಾನಕ್ ದೇವ್ ವಿವಿ ವಿರುದ್ಧ ಸೋತರೆ, ಮಹಿಳೆಯರ ‘ಎ’ ಗುಂಪಿನ ಪಂದ್ಯದಲ್ಲಿ ಮೈಸೂರು ವಿವಿ 0-3ರಲ್ಲಿ ಭಾರತೀಯಾರ್ ವಿವಿ ವಿರುದ್ಧ ಪರಾಭವಗೊಂಡಿತು.
ಆರ್ಚರಿ ವಿಶ್ವಕಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ
ಅಂತಾಲ್ಯ: ಆರ್ಚರಿ ವಿಶ್ವಕಪ್ ಮೊದಲ ಹಂತದಲ್ಲಿ ಭಾರತ ಚಿನ್ನದ ಪದಕ ಬಾಚಿಕೊಂಡಿದೆ. ಶನಿವಾರ ಪುರುಷರ ಕಾಂಪೌಂಡ್ ತಂಡ ವಿಭಾಗದಲ್ಲಿ ಅಭಿಷೇಕ್ ವರ್ಮಾ, ರಜತ್ ಚೌಹಾಣ್ ಮತ್ತು ಅಮನ್ ಸೈನಿ ಅವರನ್ನೊಳಗೊಂಡ ಜೋಡಿ ಫ್ರಾನ್ಸ್ ತಂಡವನ್ನು ಕೇವಲ 1 ಅಂಕದಿಂದ ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತು. ಇದು ಪುರುಷರ ಕಾಂಪೌಂಡ್ ತಂಡ ವಿಭಾಗಕ್ಕೆ 2017ರ ಬಳಿಕ ಸಿಕ್ಕ ಮೊದಲ ಚಿನ್ನ.
Khelo India ವಿವಿ ಗೇಮ್ಸ್‌ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಚಾಲನೆ
ಆದರೆ ಕಾಂಪೌಂಡ್ ವಿಭಾಗದ ಮಿಶ್ರ ತಂಡ ಸ್ಪರ್ಧೆಯಲ್ಲಿ ಅಭಿಷೇಕ್-ಮುಸ್ಕಾನ್ ಜೋಡಿ ಕಂಚಿನ ಪದಕದ ಸ್ಪರ್ಧೆಯಲ್ಲಿ ಕ್ರೊವೇಷಿಯಾ ವಿರುದ್ಧ ಸೋಲನುಭವಿಸಿತು. ತರುಣ್‌ದೀಪ್ ರೈ ಹಾಗೂ ರಿಧಿ ಫೆರ್ ಜೋಡಿ ಭಾನುವಾರ ರೀಕವ್‌ರ್ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಬ್ರಿಟನ್ ತಂಡವನ್ನು ಎದುರಿಸಲಿದೆ.
ಏಷ್ಯನ್ ಕುಸ್ತಿ: ಬಂಗಾರಕ್ಕೆ ಮುತ್ತಿಕ್ಕಿದ ರವಿ ದಹಿಯಾ
ಉಲಾನ್‌ಬಾತರ್(ಮಂಗೋಲಿಯಾ): ತಾರಾ ಕುಸ್ತಿ ಪಟು ರವಿ ದಹಿಯಾ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. ಶನಿವಾರ ರವಿ ಪುರುಷರ 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಕಜಕಸ್ಥಾನದ ರಖಾತ್ ಕಲ್ಝನ್ ವಿರುದ್ಧ ಗೆದ್ದರು. 2020 ಹಾಗೂ 2021ರಲ್ಲಿಯೂ ರವಿ ಸ್ವರ್ಣಕ್ಕೆ ಮುತ್ತಿಕ್ಕಿದ್ದರು. ಇನ್ನು, ಗೌರವ್ ಬಲಿಯಾನ್(79 ಕೆ.ಜಿ.) ಹಾಗೂ ಭಜರಂಗ್ ಪೂನಿಯಾ(65 ಕೆ.ಜಿ.) ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರೆ, ನವೀನ್ ಹಾಗೂ ಕಾದಿಯನ್ ಕಂಚು ಗೆದ್ದರು.
ಸಂತೋಷ್ ಟ್ರೋಫಿ: ಕರ್ನಾಟಕಕ್ಕೆ ಸೋಲು
ಮಲಪ್ಪುರಂ: 75ನೇ ಆವೃತ್ತಿಯ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯಲ್ಲಿ ಶನಿವಾರ ಮಣಿಪುರ ವಿರುದ್ಧ ಕರ್ನಾಟಕ 0-3 ಗೋಲುಗಳಿಂದ ಸೋಲನುಭವಿಸಿದ್ದು, ಸೆಮಿಫೈನಲ್ ಹಾದಿ ಕಠಿಣಗೊಳಿಸಿದೆ. ಎಲ್ಲಾ 3 ಪಂದ್ಯ ಗೆದ್ದ ಮಣಿಪುರ ಮೊದಲ ತಂಡವಾಗಿ ಸೆಮೀಸ್‌ಗೆ ಲಗ್ಗೆ ಇಟ್ಟಿತು. 3 ಪಂದ್ಯಗಳಲ್ಲಿ 4 ಅಂಕ ಸಂಪಾದಿಸಿರುವ ರಾಜ್ಯ ತಂಡ ಸೆಮೀಸ್‌ಗೇರಬೇಕಾದರೆ ಸೋಮವಾರ ಗುಜರಾತ್ ವಿರುದ್ಧ ಗೆಲ್ಲುವ ಜೊತೆ ಇತರೆ ಪಂದ್ಯಗಳ ಫಲಿತಾಂಶಕ್ಕಾಗಿ ಕಾಯಬೇಕಿದೆ. ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ರಾಜ್ಯ ತಂಡ, ಬಳಿಕ ಸವೀರ್‍ಸಸ್ ವಿರುದ್ಧ ಗೆದ್ದಿತ್ತು.