Khelo India ವಿವಿ ಗೇಮ್ಸ್‌ಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಚಾಲನೆ
* ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಚಾಲನೆ
* ಏಪ್ರಿಲ್ 24ರಿಂದ ಮೇ 3ರವರೆಗೆ ಕ್ರೀಡಾಕೂಟ ನಡೆಯಲಿದೆ
* ಕ್ರೀಡಾಕೂಟದಲ್ಲಿ ಕರ್ನಾಟಕದ 18 ಸೇರಿ ಒಟ್ಟಾರೆ 189 ವಿವಿಗಳು ಭಾಗಿ
ಬೆಂಗಳೂರು(ಏ.23): ರಾಜ್ಯವು ಆತಿಥ್ಯ ವಹಿಸಿರುವ ‘ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ -2022’ (Khelo India University Games 2022) ಕ್ರೀಡಾಕೂಟಕ್ಕೆ ಅದ್ಧೂರಿ ಸಿದ್ಧತೆ ನಡೆಸಿದ್ದು ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು (M Venkaiah Naidu) ಅವರು ಭಾನುವಾರ(ಏ.24) ಚಾಲನೆ ನೀಡಲಿದ್ದು, ಮೇ 3ರವರೆಗೆ ಕ್ರೀಡಾಕೂಟ ನಡೆಯಲಿದೆ ಎಂದು ಕ್ರೀಡಾ ಸಚಿವ ಡಾ.ಕೆ.ಸಿ. ನಾರಾಯಣಗೌಡ ಹೇಳಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕ್ರೀಡಾ ಕೂಟದ ಸಿದ್ಧತೆ ಕುರಿತು ಮಾಹಿತಿ ಹಂಚಿಕೊಂಡರು.
ಭಾನುವಾರ ಸಂಜೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ (Sree Kanteerava Stadium) ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ವೇಳೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಮೇ 3ರಂದು ಜೈನ್ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆಯಲಿರುವ ಸಮಾರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಹಾಜರಿರಲಿದ್ದಾರೆ ಎಂದರು.
ಕ್ರೀಡಾಕೂಟದ ಸ್ಮರಣೆಗಾಗಿ ಭಾರತೀಯ ಅಂಚೆ ಇಲಾಖೆಯ ವತಿಯಿಂದ ವಿಶೇಷವಾದ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗುತ್ತಿದೆ. ವಿಜೇತರಿಗೆ 261 ಚಿನ್ನದ ಪದಕ, 261 ಬೆಳ್ಳಿಯ ಪದಕ, 365 ಕಂಚಿನ ಪದಕ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ ಇಂದು ಆರಂಭ
ಸಾಂಸ್ಕೃತಿಕ ವೈಭವ ಪರಿಚಯ: ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಹಾಗೂ ದೇಶದ ಸಾಂಸ್ಕೃತಿಕ ವೈಭವ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಾಗುವುದು. ಕರ್ನಾಟಕದ ಸಾಂಸ್ಕೃತಿಕ, ಜಾನಪದ ಕಲಾ ಪ್ರದರ್ಶನ, ಡೊಳ್ಳು ವಾದನ, ಮಲ್ಲಕಂಬ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ರೀಡೆಗೆ ಧರ್ಮದ ಬೇಧವಿಲ್ಲ. ಹೀಗಾಗಿ ಕ್ರೀಡಾಕೂಟದಲ್ಲಿ ಇಂತಹ ಧರ್ಮದವರೇ ಭಾಗವಹಿಸಬೇಕು ಎಂಬುದಿಲ್ಲ. ಯಾವುದೇ ಧರ್ಮದವರಾದರೂ ಮುಕ್ತವಾಗಿ ಭಾಗವಹಿಸಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜು, ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಸೇರಿ ಹಲವರು ಹಾಜರಿದ್ದರು.
ಆರ್ಚರಿ ವಿಶ್ವಕಪ್: ಭಾರತಕ್ಕೆ 2 ಪದಕ ಖಚಿತ
ಅಂತಾಲ್ಯ: ಆರ್ಚರಿ ವಿಶ್ವಕಪ್ ಮೊದಲ ಹಂತದಲ್ಲಿ ಭಾರತಕ್ಕೆ 2 ಪದಕ ಖಚಿತವಾಗಿದೆ. ರೀಕರ್ವ್ ಮಿಶ್ರ ತಂಡ ವಿಭಾಗದಲ್ಲಿ ತರುಣ್‌ದೀಪ್ ರೈ ಹಾಗೂ ರಿಧಿ ಫೆರ್ ಜೋಡಿ ಸ್ಪೇನ್ ತಂಡದ ವಿರುದ್ಧ 5-3 ಅಂತರದಲ್ಲಿ ಜಯಿಸಿ ಚಿನ್ನದ ಪದಕದ ಸುತ್ತಿಗೇರಿತು. ಭಾನುವಾರ ಫೈನಲ್‌ನಲ್ಲಿ ಬ್ರಿಟನ್ ತಂಡವನ್ನು ಭಾರತೀಯ ಜೋಡಿ ಎದುರಿಸಲಿದೆ. ಅಭಿಷೇಕ್, ರಜತ್, ಅಮನ್ ಅವರನ್ನೊಳಗೊಂಡ ಪುರುಷರ ಕಾಂಪೌಂಡ್ ತಂಡ ಫೈನಲ್‌ಗೇರಿದ್ದು, ಶನಿವಾರ ಫ್ರಾನ್ಸ್ ವಿರುದ್ಧ ಚಿನ್ನಕ್ಕಾಗಿ ಸೆಣಸಲಿದೆ. ಕಾಂಪೌಂಡ್ ವಿಭಾಗದ ಮಿಶ್ರ ತಂಡ ಸ್ಪರ್ಧೆಯಲ್ಲಿ ಅಭಿಷೇಕ್ ಹಾಗೂ ಮುಸ್ಕಾನ್ ಜೋಡಿ ಕಂಚಿಗೆ ಕ್ರೊವೇಷಿಯಾವನ್ನು ಎದುರಿಸಲಿದೆ.
ಏಷ್ಯನ್ ಕುಸ್ತಿ: ಬೆಳ್ಳಿ ಗೆದ್ದ ಅನ್ಶು, ರಾಧಿಕಾ
ಉಲಾನ್‌ಬಾತರ್(ಮಂಗೋಲಿಯಾ): ಭಾರತದ ಅನ್ಶು ಮಲಿಕ್(57 ಕೆ.ಜಿ.), ರಾಧಿಕಾ(65 ಕೆ.ಜಿ.) ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ (Asian Wrestling Championship) ಬೆಳ್ಳಿ ಪದಕ ಜಯಿಸಿದ್ದಾರೆ. ಈ ಇಬ್ಬರೂ ಫೈನಲ್‌ನಲ್ಲಿ ಸೋಲುಂಡರು. ಇದೇ ವೇಳೆ 62 ಕೆ.ಜಿ. ವಿಭಾಗದಲ್ಲಿ ಮನೀಶಾ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.